ಮೋದಿ ವಿರುದ್ಧ ನೆಟ್ಟಿಗರು ನೆಟಿಕೆ ಮುರಿಯುತ್ತಿರೋದು ಏಕೆ?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಬಿಂಬಿತವಾಗಿರುವ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೆಟ್ಟಿಗರ ಅಸಮಾಧಾನ ನಿಧಾನವಾಗಿ ಹೆಚ್ಚುತ್ತಿದೆ. ಶನಿವಾರ ಚಂದ್ರಯಾನ 2 ಯೋಜನೆ ವಿಫಲವಾದ ಬೆನ್ನಲ್ಲೇ ಭಾವುಕರಾದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ಮೋದಿ ಅಪ್ಪಿ ಸಂತೈಸಿದ್ದು, ಮೋದಿ ವಿರುದ್ಧದ ಟೀಕೆಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಅರೆ, ಮೋದಿ ಇಸ್ರೋ ಅಧ್ಯಕ್ಷರನ್ನು ಸಂತೈಸಿದ್ದರಲ್ಲಿ ತಪ್ಪೇನು ಎಂದು ಎಗರಿ ಬೀಳಬೇಡಿ. ಅದರಲ್ಲಿ ಯಾವುದೇ ತಪ್ಪಿಲ್ಲ. ದೇಶದ ಪ್ರಧಾನಿಯಾಗಿ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ವಿಜ್ಞಾನಿಗಳಿಗೆ ಧೈರ್ಯ ತುಂಬುವುದು ಅವರ ಕರ್ತವ್ಯ. ಅದನ್ನು ಮೋದಿ ಚೆನ್ನಾಗಿಯೇ ಮಾಡಿದ್ದಾರೆ. ಆದರೂ ಮೋದಿ ವಿರುದ್ಧ  ನೆಟ್ಟಿಗರು ಟೀಕೆ ಮಾಡುತ್ತಿರೋದು ಯಾಕೆ ಅಂದರೆ….

ಪ್ರಧಾನಿಗಳಿಗೆ ಮಹತ್ವಕಾಂಕ್ಷಿ ಯೋಜನೆ ಯಶಸ್ವಿಯಾಗದಿದ್ದಾಗ ವಿಜ್ಞಾನಿಗಳ ನೋವಿನ ಅರಿವಾಗುತ್ತದೆ. ಆದರೆ ಶತಮಾನದಲ್ಲೇ ಕಂಡು ಕೇಳರಿಯದ ಪ್ರವಾಹದಲ್ಲಿ ಸಿಲುಕಿ ತತ್ತರಿಸಿರೋ ಸಾವಿರಾರು ಜನರ ಗೋಳು ಪ್ರಧಾನಿ ಕಿವಿಗೆ ಬಿದ್ದಿಲ್ಲವಲ್ಲ, ನಮ್ಮ ಜನರ ಜೀವನ ಬೀದಿಗೆ ಬಿದ್ದಿದ್ದರು ಪ್ರಧಾನಿ ಮನಸ್ಸು ಕರಗಲಿಲ್ಲವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಉಂಟಾದ ಪ್ರವಾಹದಿಂದ ರಾಜ್ಯದ 17 ಜಿಲ್ಲೆಗಳು ಮುಳುಗಿ ಅರ್ಧ ರಾಜ್ಯವೇ ನಲುಗಿತ್ತು. ಸಿಎಂ ಯಡಿಯೂರಪ್ಪ ಅವರ ಹೇಳಿಕೆಯಂತೆ ರಾಜ್ಯದಲ್ಲಿ ಪ್ರವಾಹದಿಂದ 50 ಸಾವಿರ ಕೋಟಿಗೂ ಹೆಚ್ಚು ಹಾನಿ ಆಗಿದೆ. ಸಾವಿರಾರು ಜನ ಮನೆ ಕಳೆದುಕೊಂಡಿದ್ದಾರೆ. ಅವರ ಜೀವನ ಬೀದಿಗೆ ಬಿದ್ದಿದೆ. ಸಿಎಂ ಕೊಟ್ಟ ಚೆಕ್ ಬೌನ್ಸ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ಕಾಪಾಡುವವರು ಯಾರು ಎಂದು ದಿಕ್ಕುಕಾಣದ ಪರಿಸ್ಥಿತಿಯಲ್ಲಿ ಜನ ಕಂಗೆಟ್ಟಿದ್ದಾರೆ.

ಇಷ್ಟೆಲ್ಲಾ ಆದರು ಕೇಂದ್ರ ಸರ್ಕಾರ ನಯಾ ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ಪರಿಹಾರ ಮನೆ ಹಾಳಾಗಿ ಹೋಗಲಿ, ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಈ ಬಗ್ಗೆ ಒಂದೂ ಮಾತನಾಡದೇ ಪ್ರವಾಹ ಸಂತ್ರಸ್ತರ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ.

Leave a Reply