ವೃಷಭಾವತಿಯ ಹೀನ ಸ್ಥಿತಿ ‘ಹೊಳೆ–ಕೊಳೆ‘ ಬಗ್ಗೆ ಎಚ್ಚರಿಸಿದ ಮಕ್ಕಳು

ಡಿಜಿಟಲ್ ಕನ್ನಡ ಟೀಮ್:

ನದಿಗಳನ್ನು ಮೋರಿ ಮಾಡಲು ಯಾರು ಕೊಟ್ಟರು ಅಧಿಕಾರ… ಇದು ಹೀಗೆಯೇ ಮುಂದುವರಿದರೆ ಖಂಡಿತ ಆಗುತ್ತೆ ಹಾಹಾಕಾರ.. ಜಾಗೃತಿ ಆಗದಿದ್ದರೆ ನಾವು, ಪ್ರಕೃತಿ ಮರೆಯುತ್ತೆ ಮಮಕಾರ… ಮೋರಿಯ ಮತ್ತೆ ನದಿ ಮಾಡಲು ಬೇಕು ಎಲ್ಲರ ಸಹಕಾರ… ಇದು ಬೀದಿ ನಾಟಕದ ಮೂಲಕ ಬೆಂಗಳೂರು ಜನರನ್ನು ಮಕ್ಕಳು ಕೇಳಿಕೊಂಡ ಪರಿ.

ರಂಗ ಪ್ರಯೋಗ ಶಾಲೆಯಲ್ಲಿ ರಂಗ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿ ಕೆರೆ ಆವರಣದಲ್ಲಿ ‘ಹೊಳೆ–ಕೊಳೆ‘ ಹಾಗೂ ‘ಎಲ್ಲ ಮಾಯ‘ ಎಂಬ ಬೀದಿನಾಟಕಗಳನ್ನು ಭಾನುವಾರ ಬೆಳಿಗ್ಗೆ ಪ್ರದರ್ಶಿಸಿದರು.

ಆಮೂಲಕ್ ನಗರದ ನದಿ, ಕೆರೆ–ಕುಂಟೆಗಳನ್ನು ಉಳಿಸಿ ಎಂಬ ಸಂದೇಶ ಸಾರುವ ಬೀದಿ ನಾಟಕದ ಮೂಲಕ ಮನವಿ ಮಾಡಿಕೊಳ್ಳುವ ಜೊತೆಗೆ, ಅವುಗಳ ನಾಶದಿಂದ ಉಂಟಾಗಿರುವ ದುಃಸ್ಥಿತಿ ಹಾಗೂ ಮುಂದಾಗುವ ಪರಿಣಾಮವನ್ನೂ ಅಭಿನಯದ ಮೂಲಕ ತೆರೆದಿಟ್ಟರು.

ನಗರದಲ್ಲಿ ನದಿಯಾಗಿ ಹರಿದು, ಗಾಳಿ ಆಂಜನೇಯನ ಪೂಜೆಗೂ ನೀರಾಗಿದ್ದ ವೃಷಭಾವತಿ ನದಿ– ಕೆಂಗೇರಿ ಮೋರಿಯಾಗಿರುವ ದುಃಸ್ಥಿತಿಯನ್ನು ‘ಹೊಳೆ–ಕೊಳೆ‘ ನಾಟಕದ ಮೂಲಕ ಮಕ್ಕಳು ವಿವರಿಸಿದರು. ಸುತ್ತಮುತ್ತಲಿನ ನಾಗರಿಕರು ಈ ನಾಟಕಗಳನ್ನು ವೀಕ್ಷಿಸಿ, ಮಕ್ಕಳ ಪ್ರಯತ್ನಕ್ಕೆ ಭೇಷ್‌ ಎಂದರಲ್ಲದೆ, ಪರಿಸರ ಮಾಲಿನ್ಯ ತಡೆಗೆ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡುವುದಾಗಿ ಹೇಳಿದರು.

ಡಾ. ಎಸ್‌.ವಿ.ಕಶ್ಯಪ್‌ ರಚಿಸಿ ನಿರ್ದೇಶಿಸಿದ ಈ ನಾಟಕದಲ್ಲಿ, ಬದುಕಿಗೆ ಬಹಳ ಅವಶ್ಯವಿರುವ ನೀರನ್ನು ನಾವು ಹೇಗೆ ನಿರ್ಲಕ್ಷಿಸುತ್ತಿದ್ದೇವೆ. ಮನೆಯಲ್ಲಿ ನಲ್ಲಿಯಲ್ಲಿ ನೀರು ಬಂದರೆ ಸಾಕು ಎನ್ನುವ ಸಂಕುಚಿತ ಮನೋಭಾವದಿಂದ ಕೆರೆ ಮತ್ತು ನದಿಗಳ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದ ಒಂದು ಕಾಲದಲ್ಲಿ ಜೀವಜಲವಾಗಿದ್ದ ವೃಷಭಾವತಿ ನದಿ ಇಂದು ಎಂತಹ ದುಃಸ್ಥಿತಿಗೆ ಬಂದಿದೆ ಎಂಬುದನ್ನು ಹಾಡು, ನಟನೆ, ನೃತ್ಯದ ಮೂಲಕ ವಿದ್ಯಾರ್ಥಿಗಳು ವಿವರಣೆ ನೀಡಿದರು. ಗಾಳಿ ಆಂಜನೇಯನನ್ನೇ ಗೇಲಿ ಮಾಡುವ ಜನರೂ ಇದ್ದಾರೆ ಎಂಬುದನ್ನು ಹಾಸ್ಯದ ಮೂಲಕ ಹೇಳುವ ಜೊತೆ, ಜಲಮೂಲಗಳ ನಾಶದಿಂದ ನೀರಿಲ್ಲದಿದ್ದರೆ ಮನುಷ್ಯನ ಸ್ಥಿತಿ ಏನಾಗುತ್ತದೆ ಎಂಬ ವಿಷಯವನ್ನು ‘ನೀರು ನೀರು‘ ಎಂದು ಪರಿತಪಿಸಿ ಹೇಳುವ ಮೂಲಕ ಪ್ರೇಕ್ಷಕ ಮನಗೆದ್ದರು. ಜಲ ರಾಶಿಗಳ ಮೇಲೆ ಮನುಷ್ಯ ಮಾಡುವ ಆಕ್ರಮಣ ಹಾಗೂ ತಣ್ಣನೆಯ ಕ್ರೌರ್ಯವನ್ನು ತಿಳಿಹಾಸ್ಯ ಮೂಲಕ ಮಕ್ಕಳು ಹೇಳಿದ ರೀತಿ ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.

ಇದರ ಜೊತೆಗೆ, ಡಾ. ಎಸ್‌.ವಿ. ಕಶ್ಯಪ್ ರಚನೆ ಹಾಗೂ ಡಾ. ಆರ್.ಬೃಂದಾ ನಿರ್ದೇಶನದ ’ಎಲ್ಲ ಮಾಯ‘ ನಾಯಕವನ್ನು ಪ್ರದರ್ಶಿಸಿದ ಮಕ್ಕಳು, ಪ್ಲಾಸ್ಟಿಕ್ ಇಂದಿನ ದಿನದಲ್ಲಿ ದೊಡ್ಡ ಭೂತವಾಗಿ ನಮ್ಮನ್ನು ಹೇಗೆ ಕಾಡುತ್ತಿದೆ ಎಂಬುದನ್ನು ತೆರೆದಿಟ್ಟರು.

ಪ್ಲಾಸ್ಟಿಕ್‌ನಿಂದ ನಮ್ಮ ಪರಿಸರ, ಪ್ರಕೃತಿಯ ಮೇಲೆ ಆಗುತ್ತಿರುವ ಪರಿಣಾಮ, ನವ ಯುಗದ ಜೀವನ ಶೈಲಿಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಳ, ಅದನ್ನು ಬಳಸಿ ಬಿಸಾಕುವ ಪರಿಪಾಠ ಮಕ್ಕಳು ತೋರಿಸಿದರು. ಈ ಮನಸ್ಥಿತಿಯಿಂದ ಹೊರ ಬರದಿದ್ದರೆ ಪರಿಸರ ಮತ್ತು ಪ್ರಕೃತಿಯ ಮೇಲೆ ಅಪಾರವಾದ ಪರಿಣಾಮ ಬೀರುತ್ತದೆ ಎನ್ನುವುದನ್ನು ಮಕ್ಕಳು ತಮ್ಮ ನಟನೆಯಿಂದ ಮನದಟ್ಟು ಮಾಡಿದರು.

Leave a Reply