ಡಿಸಿಎಂ ಅಶ್ವಥ್ ನಾರಾಯಣ ಟೈಂ ಸರಿ ಇಲ್ವಾ..?

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಆಗಿರುವ ಡಾ.ಅಶ್ವಥ ನಾರಾಯಣ್ ಟೈಂ ಯಾಕೋ ಸರಿ ಇಲ್ಲ. ಅವರು ಏನೇ ಮುಟ್ಟಿದರು ಅದು ಬ್ಯಾಕ್ ಫೈರ್ ಆಗುತ್ತಿದೆ.

ಒಕ್ಕಲಿಗ ನಾಯಕನನ್ನು ಬೆಳೆಸುವ ಉದ್ದೇಶದಿಂದ ಬಿ.ಎಸ್​ ಯಡಿಯೂರಪ್ಪ, ಡಿಸಿಎಂ ಆಗಿದ್ದ ಅಶೋಕ್​ ಅವರನ್ನು ಹಿಂದಕ್ಕೆ ತಳ್ಳಿ ಆಶ್ವಥ ನಾರಾಯಣ ಅವರನ್ನು ಮುನ್ನಲೆಗೆ ತಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ವು. ಅದೆಲ್ಲಾ ರಾಜಕೀಯದಲ್ಲಿ ಏಳು ಬೀಳು ಇದ್ದಿದ್ದೆ. ಆದ್ರೆ ಅಶ್ವಥ ನಾರಾಯಣ ಇಡುತ್ತಿರುವ ಒಂದೊಂದು ಹೆಜ್ಜೆಯಲ್ಲೂ ಅವಮಾನಗಳೇ ಎದುರಾಗ್ತಿವೆ.

ಚಂದ್ರಯಾನ 2 ನೌಕೆ ಚಂದ್ರ ಮೇಲೆ ಇಳಿಯುವ ದೃಶ್ಯ ಕಣ್ತುಂಬಿಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ರು. ಈ ವೇಳೆ ಯಲಹಂಕ ವಾಯುನೆಲೆಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಸಿಎಂ ಯಡಿಯೂರಪ್ಪ ಜೊತೆ ಅಶ್ವಥ ನಾರಾಯಣ ಕೂಡ ಸ್ವಾಗತ ಮಾಡಿದ್ರು. ಈ ವೇಳೆ ಪುಷ್ಪಗುಚ್ಛ ಕೊಟ್ಟು ಸ್ವಾಗತ ಮಾಡಿದ ಅಶ್ವಥ ನಾರಾಯಣ, ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ನಮಸ್ಕರಿಸಿದ್ರು. ಇದ್ರಿಂದ ಕುಪಿತರಾದ ಪ್ರಧಾನಿ ನರೇಂದ್ರ ಮೋದಿ, ಕಾಲಿಗೆ ನಮಸ್ಕಾರ ಮಾಡಬಾರದು ಎಂದು ಹೇಳಿದ್ರು. ಜೊತೆಗೆ ತಲೆ ತಗ್ಗಿಸುವ ಕೆಲಸ ಮಾಡಬಾರದು ಎಂದು ಖಡಕ್​ ಆಗಿಯೇ ತಿಳಿಸಿದ್ರು. ಇದು ಸಾರ್ವಜನಿಕ ವಲಯದಲ್ಲಿ ಮುಖಭಂಗಕ್ಕೆ ಕಾರಣವಾಗಿತ್ತು.

ಇನ್ನು ಇವತ್ತು ತುಮಕೂರಿನ ನೊಣವಿನಕೆರೆಯಲ್ಲಿ ಆದಿಚುಂಚನಗಿರಿ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮವಿತ್ತು. ಉದ್ಘಾಟನೆಗೆ ಆಗಮಿಸಿದ್ದ ಡಿಸಿಎಂ ಅಶ್ವಥನಾರಾಯಣ ಒಕ್ಕಲಿಗ ಸಮುದಾಯದ ಮುಖಂಡರಿಂದಲೇ ಅವಮಾನಕ್ಕೆ ಗುರಿಯಾದರು. ಇತ್ತೀಚಿಗಷ್ಟೇ ಡಿ.ಕೆ ಶಿವಕುಮಾರ್​ ಬಂಧನ ಬಳಿಕ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಹೇಳಿದ್ದ ಹೇಳಿಕೆ ವಿವಾದ ರೂಪ ಪಡೆದಿತ್ತು. ಆ ಬಳಿಕ ಟ್ವೀಟ್​ ಕೂಡ ಮಾಡಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಇವತ್ತು ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಅದೇ ಡಿಕೆ ಶಿವಕುಮಾರ್​ ಪರವಾಗಿ ಘೋಷಣೆ ಕೂಗುವ ಮೂಲಕ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣಗೆ ಮುಜುಗರ ಆಗುವಂತೆ ಮಾಡಿದ್ರು.

ಇನ್ನು ವೇದಿಕೆ ಮೇಲೆ ಭಾಷಣ ಮಾಡುವಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್​ ಕೊಡುವಂತೆ ಮಾತನಾಡಿದ್ದಾರೆ. ಒಬ್ಬ ನಾಯಕ ಯಾವುದಕ್ಕಾಗಿ ಇರುತ್ತಾನೆ ಅನ್ನೋದು ಮುಖ್ಯವಾದ ವಿಚಾರ. ನಾಯಕ ಆದವನು ಎಲ್ಲವನ್ನು ತ್ಯಾಗ ಮಾಡಬೇಕು. ಸರ್ವಸ್ವವನ್ನೂ ತ್ಯಾಗ ಮಾಡಿದ್ರೆ ಬೆಂಬಲವನ್ನ ನಮಗೆ ಕೊಡ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಅತೃಪ್ತರನ್ನ ಸರಿಯಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಎಡವಿದ್ರು ಎಂದ ಡಿಸಿಎಂ ಅಶ್ವಥ ನಾರಾಯಣ, ಒಬ್ಬ ನಾಯಕ ಮೈ ಮರೆಯೋ ಕೆಲಸ ಮಾಡಬಾರದು. ಹೇಗೆ ಬದುಕಿದ್ರೂ ಸಮಾಜಕ್ಕಾಗಿ ಬದುಕಿದ್ರೆ ಮಾತ್ರ ಉತ್ತಮ ನಾಯಕನಾಗಿರಲು ಸಾಧ್ಯ ಅಂದ್ರು. ಈ ವೇಳೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪರವಾಗಿ ಜನರು ಘೋಷಣೆ ಕೋಗುವ ಮೂಲಕ ನಮ್ಮ ನಾಯಕ ಹೆಚ್​.ಡಿ ಕುಮಾರಸ್ವಾಮಿ ನಮ್ಮ ನಾಯಕ ಎಂದು ಬಿಂಬಿಸಿದ್ರು. ಆ ಬಳಿಕ ಭಾಷಣ ಮಾಡಿ ಕುಮಾರಸ್ವಾಮಿ, ರೈತರ ಸಾಲ ಮನ್ನಾದ ಸಹಕಾರಿ ಬ್ಯಾಂಕ್ ಹಣ ಇನ್ನೂ ಬಿಡುಗಡೆ ಆಗಿಲ್ಲ. ಹಣ ಕೊಟ್ಟಾಗಿದೆ ನೀವು ಪ್ರಿಂಟ್ ಮಾಡೋ ಅಗತ್ಯವಿಲ್ಲ ಎಂದ್ರು. ಜೊತೆಗೆ ನಾಯಕನಾಗಿ ಬೆಳೆಯಬೇಕಾದ್ರೆ ಸಿಎಂ ಆಗ್ಬೇಕು ಅಂತೇನಿಲ್ಲ ಎಂದು ಅಶ್ವಥ್ ನಾರಾಯಣ್​ ಟಾಂಗ್​ಗೆ ಕೌಂಟರ್​ ಕೊಡ್ರು. ಒಟ್ಟಾರೆ, ಅಶ್ವಥ ನಾರಾಯಣ ಅವರನ್ನು ವಿವಾದಗಳು ಹುಡುಕಿಕೊಂದು ಬರುತ್ತಿದೆಯೇ ಅಥವಾ ವಿವಾದವನ್ನು ಅಶ್ವಥ ನಾರಾಯಣ ಅವರೇ ಹುಡುಕಿಕೊಂಡು ಹೋಗ್ತಾರಾ ಎಂಬ ಪ್ರಶ್ನೆ ಮೂಡಿದೆ.

Leave a Reply