ತಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ಹೇಳಿ ಡಿಕೆಶಿ ಮನವಿ ಮಾಡಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪರವಾಗಿ ನಿಂತ ಎಲ್ಲ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ಧನ್ಯವಾದ ತಿಳಿಸಿದ್ದಾರೆ. ಜತೆಗೆ ನಾಳೆ ಹಮ್ಮಿಕೊಂಡಿರುವ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿ ಎಂದು ಮನವಿ ಮಾಡಿದರು.

ಟ್ವಿಟರ್ ಮೂಲಕ ಸಂದೇಶ ಕಳಿಸಿರುವ ಡಿಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು… ‘ಸಮಾಜದ ನಾನಾ ಕ್ಷೇತ್ರಗಳ ಮುಖಂಡರು, ಸ್ನೇಹಿತರು, ಹಿತೈಷಿಗಳು ನನ್ನನ್ನು ಬೆಂಬಲಿಸಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರಾಲಿ ನಡೆಸುತ್ತಿರುವುದನ್ನು ಕೇಳಿ ನನ್ನ ಮನಸ್ಸು ಮತ್ತು ಕಣ್ಣು ತುಂಬಿ ಬಂದಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿ.

ಜಾಥಾ, ಸಭೆ ಸಂಪೂರ್ಣ ಶಾಂತಿಯುತವಾಗಿರಲಿ. ಯಾವುದೇ ಕಾರಣಕ್ಕೂ ಶಾಂತಿ ಭಂಗಕ್ಕೆ ಅವಕಾಶ ನೀಡಬೇಡಿ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಬೇಡಿ. ಅವರ ನೆಮ್ಮದಿಗೆ ಭಂಗ ತರಬೇಡಿ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಎದುರಾಳಿಗಳಿಗೆ ಅವಕಾಶ ಮಾಡಿಕೊಡಬೇಡಿ. ಇದು ನನ್ನ ಕಳಕಳಿಯ ಮನವಿ.

ನಾನು ಮತ್ತೊಮ್ಮೆ ಸಾರಿ, ಸಾರಿ ಹೇಳುತ್ತೇನೆ. ನಿಮ್ಮ ಗೌರವ-ಘನತೆಗೆ ಧಕ್ಕೆ ತರುವಂಥ ಯಾವುದೇ ಕೆಲಸವನ್ನು ನಾನು ಮಾಡಿಲ್ಲ, ಮಾಡುವುದೂ ಇಲ್ಲ. ನನ್ನ ಮೇಲೆ ನೀವಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಬದ್ಧನಾಗಿದ್ದೇನೆ. ನನಗೆ ದೇವರು, ಈ ನೆಲದ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ. ಜತೆಗೆ ನಿಮ್ಮ ಹಾರೈಕೆಯೂ ಇದೆ. ಹೀಗಾಗಿ ಈ ಎಲ್ಲ ಸಂಕಷ್ಟಗಳಿಂದ ಪಾರಾಗಿ ಬರುತ್ತೇನೆ. ನಿಮ್ಮ ನಡುವೆ ಇದ್ದುಕೊಂಡೇ ಎಂದಿನಂತೆ ಜನಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ.’

Leave a Reply