ಡಿ.ಕೆ. ಸುರೇಶ್ ಕರೆಸಿಕೊಂಡು ಡಿಕೆಶಿ ಕ್ಷೇಮ ವಿಚಾರಿಸಿದ ಸೋನಿಯಾಗಾಂಧಿ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಅವರು ಸಂಸದ ಡಿ.ಕೆ. ಸುರೇಶ್ ಅವರನ್ನು ತಮ್ಮ ನಿವಾಸಕ್ಕೆ ಮಂಗಳವಾರ ಕರೆಸಿಕೊಂಡು ಅವರ ಸಹೋದರ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಯೋಗಕ್ಷೇಮ ವಿಚಾರಿಸಿ, ನೈತಿಕ ಸ್ಥೈರ್ಯ ತುಂಬಿದರು.

ಮಂಗಳವಾರ ಬೆಳಗ್ಗೆ ಸುರೇಶ್ ಅವರಿಗೆ ದೂರವಾಣಿ ಕರೆ ಮಾಡಿದ ಸೋನಿಯಾಗಾಂಧಿ ಅವರು ತಮ್ಮ ನವದೆಹಲಿಯ ಜನಪಥ್ ನಿವಾಸಕ್ಕೆ ಆಹ್ವಾನಿಸಿದರು. ಸುಮಾರು 30 ನಿಮಿಷಗಳ ಕಾಲ ಅವರ ಜತೆ ಮಾತುಕತೆ ನಡೆಸಿದ ಸೋನಿಯಾ ಗಾಂಧಿ ಅವರು ಡಿ.ಕೆ. ಶಿವಕುಮಾರ್ ಹೇಗಿದ್ದಾರೆ ಅವರ ಆರೋಗ್ಯ ಹೇಗಿದೆ ಎಂದು ವಿಚಾರಿಸಿಕೊಂಡರು.

ಅಷ್ಟೇ ಅಲ್ಲದೆ ಡಿ.ಕೆ. ಶಿವಕುಮಾರ್ ಅವರ ಜತೆ ನಾವೆಲ್ಲರೂ ಇದ್ದೇವೆ. ಪಕ್ಷ ಅವರ ಜತೆಗಿದೆ. ಯಾವುದೇ ಕಾರಣಕ್ಕೂ ಅವರು ಧೈರ್ಯ ಕಳೆದುಕೊಳ್ಳುವುದು ಬೇಡ. ಅದು ಕಾನೂನು ಹೋರಾಟವೇ ಇರಲಿ, ರಾಜಕೀಯ ಹೋರಾಟವೇ ಇರಲಿ ಅವರೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಅವರಿಗೆ ತಿಳಿಸಿ ಎಂದು ಹೇಳಿದರು.

ಕೇಂದ್ರ ಸರಕಾರ ತಮ್ಮ ಪ್ರಬಲ ವಿರೋಧಿಗಳನ್ನು ಸದೆಬಡಿಯಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ತಮಗೆ ಗೊತ್ತಿದೆ. ಕಾಲವೇ ಎಲ್ಲಕ್ಕೂ ಉತ್ತರ ಹೇಳಲಿದೆ. ಶಿವಕುಮಾರ್ ಎಲ್ಲವನ್ನೂ ಗೆದ್ದು ಬರಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.

ಕಳೆದ ಎರಡು ವಾರಗಳಿಂದ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಜಾರಿ ನಿರ್ದೇಶನಾಲಯ ವಶದಲ್ಲಿ ಇದ್ದಾರೆ.

Leave a Reply