45 ದಿನಗಳಲ್ಲಿ 8 ಪ್ರಕರಣಗಳ ತನಿಖೆ! ಇದು ಬಿಜೆಪಿಯ ದ್ವೇಷದ ರಾಜಕಾರಣವೇ?

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪಿಸುತ್ತಿದ್ದಾರೆ. ಇದಕ್ಕೆ ಕಾರಣ ಅದಿಕಾರಕ್ಕೆಬಂದ 45 ದಿನಗಳಲ್ಲಿ ಸರ್ಕಾರ 8 ಪ್ರಕರಣಗಳ ತನಿಖೆಗೆ ಆದೇಶಿಸಿದೆ.

ಸೋಮವಾರ ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ನಾಯಕ ಯೋಗೇಶ್ ಗೌಡ ಅವರ ಕೊಲೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಇಷ್ಟೇ ಅಲ್ಲ ಸಿದ್ದರಾಮಯ್ಯನವರ ಸರ್ಕಾರದ ಸಂದರ್ಭದಲ್ಲಿನ ಕೃಷಿ ಭಾಗ್ಯ ಯೋಜನೆಯ ಕುರಿತ ತನಿಖೆಗೂ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಾಗಲೇ 8 ಪ್ರಕರಣಗಳನ್ನು ತನಿಖೆಗೆ ನೀಡಲಾಗಿದ್ದು ಇನ್ನು ಸಾಲು ಸಾಲು ಪ್ರಕರಣಗಳನ್ನು ತನಿಖೆಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ತನ್ನ ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಆರೋಪ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸದನದಲ್ಲಿ ಮಾತು ನೀಡುತ್ತಲೇ ಅಧಿಕಾರಕ್ಕೆ ಏರಿದ ಯಡಿಯೂರಪ್ಪ ಸಾಲು ಸಾಲು ಪ್ರಕರಣಗಳನ್ನು ಸಿಬಿಐಗೆ ಶಿಫಾರಸ್ಸು ಮಾಡಿರುವುದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಾರಣವಾಗಿದೆ.

ಅನುಮಾನವಿದ್ದರೆ ಪ್ರಕರಣಗಳ ತನಿಖೆ ನಡೆಸುವುದು ತಪ್ಪಲ್ಲ ಆದರೆ, ರಾಜ್ಯ ಸರ್ಕಾರದ ಅಧಿಕಾರಿಗಳನ್ನು ನಂಬದೇ ಕೇವಲ ಕೇಂದ್ರ ತನಿಖಾ ಸಂಸ್ಥೆಗಳಿಂದಲೇ ಬಹುತೇಕ ಪ್ರಕರಣಗಳ ತನಿಖೆ ನಡೆಸಲು ಮುಂದಾಗಿರೋದು ಯಾಕೆ? ಇದು ದ್ವೇಷದ ರಾಜಕಾರಣವಲ್ಲದೇ ಮತ್ತೇನು? ಎಂದು ಕಾಂಗ್ರೆಸ್ ನಾಯಕರು ಕಿಡಿಕಾರುತ್ತಿದ್ದಾರೆ.

Leave a Reply