ಬೆಂಗಳೂರಲ್ಲಿ ಒಕ್ಕಲಿಗರ ಒಗ್ಗಟ್ಟು, ವಾಹನ ಸವಾರರೇ ರಸ್ತೆ ಆಯ್ಕೆಯಲ್ಲಿ ಹುಷಾರು!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಬಂಧನ ಸೇರಿದಂತೆ ಕೇಂದ್ರ ಸರ್ಕಾರದ ಒಕ್ಕಲಿಗ ವಿರೋಧ ನೀತಿ ಖಂಡಿಸಿ ಇಂದು ಸಮುದಾಯ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, 11 ಗಂಟೆ ವೇಳೆಗೆ ಒಕ್ಕಲಿಗ ಮುಖಂಡರು ಆಗಮಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಚಾಲನೆ ಸಿಗಲಿದೆ.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಆರಂಭವಾಗಿ ಜೆಸಿ ರಸ್ತೆ, ಟೌನ್ ಹಾಲ್, ಕಾರ್ಪೋರೇಷನ್, ಹಡ್ಸನ್ ವೃತ್ತ, ಮೈಸೂರು ಬ್ಯಾಂಕ್ ಸರ್ಕಲ್, ಅರಮನೆ ಮೈದಾನ ರಸ್ತೆ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯನವನದವರೆಗೂ ಪ್ರತಿಭಟನೆ ನಡೆಯಲಿದ್ದು, ಈ ಭಾಗದ ರಸ್ತೆಗಳಲ್ಲಿ ಸಂಚರಿಸಬೇಕಾದ ವಾಹನ ಸವಾರರು ಬೇರೆ ಮಾರ್ಗಗಳನ್ನು ಆಯ್ದುಕೊಳ್ಳುವುದು ಉತ್ತಮ.

ಕರವೇ ನಾರಾಯಣಗೌಡ ಅವರ ನೇತೃತ್ವದಲ್ಲಿ ಹೋರಾಟ ರೂಪುಗೊಂಡಿದ್ದು, ರಾಮನಗರ, ಕನಕಪುರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಶಿವಮೊಗ್ಗ ಸೇರಿದಂತೆ ಸಾಕಷ್ಟು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದ ಜನರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷವೂ ಕೈ ಜೋಡಿಸಿರುವುದರಿಂದ ಕುಣಿಗಲ್, ರಾಮನಗರ, ಕನಕಪುರ, ಬೆಂಗಳೂರು ಗ್ರಾಮಾಂತರದಿಂದ ಕಾಂಗ್ರೆಸ್ ಕಾರ್ಯಕರ್ತರು ಕೂಡ ಭಾಗವಹಿಸಲಿದ್ದಾರೆ.

ಪ್ರಮುಖವಾಗಿ ಡಿಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರ ಹಾಗೂ ಸಂಬಂಧಿ ಕುಣಿಗಲ್ ಎಂಎಲ್ ಎ ರಂಗನಾಥ್ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರೋ ಸಾಧ್ಯತೆಯಿದೆ. ಡಿಕೆಶಿ ಬೆಂಬಲಿಸಿ ಸಾವಿರಾರು ಕಾಂಗ್ರೆಸ್ ಹಾಗೂ ಒಕ್ಕಲಿಗ ಸಮುದಾಯದ ಜನರು ಭಾಗಿಯಾಗಲಿದ್ದಾರೆ. ಒಕ್ಕಲಿಗ ವಿವಿಧ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ‌ ನಡೆಯುತ್ತಿದೆ. ಈ ಪ್ರತಿಭಟನೆಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಭದ್ರತೆ ಒದಗಿಸಲಾಗಿದೆ. 2800ಕ್ಕೂ ಹೆಚ್ಚು ಪೋಲೀಸರನ್ನು ನಿಯೋಜನೆ ಮಾಡಲಾಗಿದೆ. 10 ಜನ ಡಿಸಿಪಿ, 40 ಎಸಿಪಿಗಳು, 200ಕ್ಕು ಹೆಚ್ಚು ಇನ್ಸ್‌ಪೆಕ್ಟರ್, 40 ಕೆಎಸ್ಆರ್‌ಪಿ, 30 ಸಿಎಆರ್, 12 ಕ್ಷಿಪ್ರ ಕಾರ್ಯಚರಣೆ ಪಡೆ ನಿಯೋಜನೆ ಮಾಡಲಾಗಿದೆ.ಮಾರ್ಗ ಮದ್ಯೆ ಅಹಿತಕರ ಘಟನೆಗಳು ನಡೆಯದಂತೆ 2800 ಪೊಲೀಸರಿಂದ ಕಟ್ಟೆಚ್ಚರದ ಜೊತೆಗೆ ಪ್ರತಿಭಟನಾ ಮೆರವಣಿಗೆ ಸಾಗುವ ಮಾರ್ಗದಲ್ಲಿ 50 ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ. ಡಿಕೆಶಿ ಬಂಧನ ವೇಳೆ ಹಲವೆಡೆ ಬಸ್‌ಗಳಿಗೆ ಕಲ್ಲು ತೂರಾಟ, ಬೆಂಕಿ ಹಾಕಿ, ರಸ್ತೆಗಳಲ್ಲಿ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಪೊಲೀಸ್ ಸರ್ಪಗಾವಲು ಮಾಡಲಾಗಿದೆ.

ಡಿಕೆಶಿ ಪರ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಸೂಚನೆ ಕೊಡಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ‌ ಮಾಹಿತಿ ಸಿಕ್ಕರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಬಿಎಂಟಿಸಿಯಲ್ಲಿ ಒಕ್ಕಲಿಗ ಸಮುದಾಯದ ನೌಕರರೇ ಹೆಚ್ಚಾಗಿರುವ ಹಿನ್ನಲೆಯಲ್ಲಿ ಎಚ್ಚರಿಕೆ ಕೊಡಲಾಗಿದೆ.ಬಿಎಂಟಿಸಿಯಲ್ಲಿ 3 ಸಾವಿರಕ್ಕೂ ಹೆಚ್ಚು ಒಕ್ಕಲಿಗ ನೌಕರರಿದ್ದಾರೆ. ಜಾತಿ ಬೆಂಬಲಕ್ಕೆ ನಿಲ್ಲುವ ನಿಟ್ಟಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಒಕ್ಕಲಿಗ ನೌಕರರ ಹಾಜರಾತಿ, ಗೈರು ಹಾಜರಿ ಬಗ್ಗೆ ನಿಗಾ ಇಡುವಂತೆ ಡಿಪೋ ಮ್ಯಾನೇಜರ್ಸ್‌ಗೆ ಸೂಚನೆ ಕೊಡಲಾಗಿದೆ. ಬಿಎಂಟಿಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ನಗರ ಸಾರಿಗೆ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಪ್ರತಿಭಟನೆ ಸಾಗುವ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗದಂತೆ ಆಯಾ ಮಾರ್ಗದಲ್ಲಿ 400 ಕ್ಕೂ ಹೆಚ್ಚು ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಒಂದೊಂದು ರಸ್ತೆ ಮಾರ್ಗಕ್ಕೂ ಸಂಚಾರಿ ಎಸಿಪಿ ಸೇರಿದಂತೆ ಇಬ್ಬರು ಇನ್ಸ್‌ಪೆಕ್ಟರ್‌ಗಳು ಹಾಗು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Leave a Reply