ಡಬಲ್ ಗೇಮ್ ಆಡಿದ್ರಾ ಮಾಜಿ ಮಿನಿಸ್ಟರ್ ಎನ್.ಮಹೇಶ್..?

ಡಿಜಿಟಲ್ ಕನ್ನಡ ಟೀಮ್:

ಮೈತ್ರಿ ಸರ್ಕಾರ ಪತನದ ಸಂದರ್ಭದಲ್ಲಿ ಬಿಎಸ್ಪಿ ಶಾಸಕ ಹಾಗೂ ಮಾಜಿ ಸಚಿವ ಎನ್.ಮಹೇಶ್ ಡಬಲ್ ಗೇಮ್ ಆಡಿದ್ರೂ ಎಂಬ ಮಾತುಗಳು ಈ ಹಿಂದೆಯೇ ಕೇಳಿ ಬಂದಿದ್ದವು. ಆದರೆ ಈಗ ಈ ವಿಚಾರವಾಗಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಪ್ರತಿಕ್ರಿಯೆ ನೀಡಿದ್ದು, ‘ಕುಮಾರಸ್ವಾಮಿ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ತಸ್ಥವಾಗಿರುವಂತೆ ಮಾಯಾವತಿ ಅವರು ಹೇಳಿದ್ದರು ಎಂಬುದು ಸುಳ್ಳು’ ಎಂದಿದ್ದಾರೆ.

ಹೌದು, 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚಾಮರಾಜನಗರದ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿ ಎನ್. ಮಹೇಶ್ ಸ್ಪರ್ಧೆ ಮಾಡಿದ್ರು. ವಿಧಾನಸಭಾ ಚುನಾವಣೆಗೂ ಮೊದಲೇ ಮೈತ್ರಿ ಮಾಡಿಕೊಂಡಿದ್ದರಿಂದ ಜೆಡಿಎಸ್ ಕೊಳ್ಳೇಗಾಲದಲ್ಲಿ ಅಭ್ಯರ್ಥಿ ಕಣಕ್ಕೆ ಇಳಿಸಿರಲಿಲ್ಲ. ಹೀಗಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ಮಹೇಶ್ ಜಯಭೇರಿ ಬಾರಿಸಿದ್ರು. ಚುನಾವಣಾ ಪೂರ್ವ ಮೈತ್ರಿ ಆದ ಕಾರಣ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ‌ ಶಿಕ್ಷಣ ಸಚಿವರಾಗಿಯೂ ಕೆಲಸ ಮಾಡಿದ್ರು. ಆ ಬಳಿಕ ವೈಯಕ್ತಿಕ ಕಾರಣ ನೀಡಿದ ಎನ್ ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆದರೂ ನನ್ನ ಬೆಂಬಲ ಮೈತ್ರಿ ಸರ್ಕಾರಕ್ಕೆ ಇರಲಿದೆ‌. ಜೆಡಿಎಸ್ ಬೆಂಬಲ ಇಲ್ಲದೇ ಇದ್ದಿದ್ದರೆ ವಿಧಾನಸೌಧ ಪ್ರವೇಶ ಕಷ್ಟವಾಗುತ್ತಿತ್ತು ಎಂದು ಕೃತಜ್ಞತಾ ಭಾವನೆ ವ್ಯಕ್ತಪಡಿಸಿದ್ದರು. ಆದರೆ ಈ ಕೃತಜ್ಞತಾ ಭಾವನೆ ವಿಶ್ವಾಸಮತಯಾಚನೆ ಸಂದರ್ಭದ ಹೊತ್ತಿಗೆ ಕಮರಿಹೋಗಿತ್ತು.

‘ಹೆಚ್​ಡಿಕೆ ವಿಶ್ವಾಸ ಮತಯಾಚನೆ ವೇಳೆ ಬಿಎಸ್​ಪಿ ಶಾಸಕ ಎನ್. ಮಹೇಶ್ ತಟಸ್ಥವಾಗಿರಲು ಬಿಜೆಪಿ ಪರ ಒಲವೇ ಕಾರಣ. ಆಪರೇಷನ್ ಕಮಲದಿಂದಾಗಿ 19 ಮಂದಿ ಶಾಸಕರು ಯಾವ ರೀತಿ ಕಾಣೆಯಾಗಿದ್ದರೋ ಅದೇ ರೀತಿ ಎನ್​ ಮಹೇಶ್ ಕೂಡ ಕಾಣೆಯಾಗಿದ್ದರು. ಉದ್ದೇಶಪೂರ್ವಕವಾಗಿಯೇ ಅಂದು ಸದನಕ್ಕೆ ಗೈರು ಹಾಜರಾಗಿದ್ದರು. ಎನ್ ಮಹೇಶ್  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಗೆದ್ದು ಬರಲಿ ನೋಡೋಣ’ ಎಂದು ಚಾಮರಾಜನಗರದಲ್ಲಿ ಬಿಎಸ್​ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ತಮ್ಮ ಮಾಧ್ಯಮ ಸಂವಾದದ ವೇಳೆ ಸವಾಲು ಹಾಕಿದ್ದಾರೆ.

‘ವಿಶ್ವಾಸಮತಯಾಚನೆ ಸಂದರ್ಭದಲ್ಲಿ  ತಟಸ್ಥವಾಗಿರುವಂತೆ ಮಹೇಶ್​ಗೆ ಮಾಯಾವತಿ ಸೂಚನೆ ನೀಡಿರಲಿಲ್ಲ. ಆದರೆ ಎನ್​ ಮಹೇಶ್ ಸುಳ್ಳು ಹೇಳುವ ಮೂಲಕ ಕಾರ್ಯಕರ್ತರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಪರ ಮತ ಚಲಾಯಿಸುವಂತೆ ಮಾಯಾವತಿ ಸ್ಪಷ್ಟ ಸೂಚನೆ ನೀಡಿದ್ದರು. ಬಿಎಸ್​ಪಿ ರಾಜ್ಯ ಉಸ್ತುವಾರಿ ಅಶೋಕ್ ಸಿದ್ದಾರ್ಥ ಮೂಲಕ ಮಾಯಾವತಿ ಸಂದೇಶ  ತಲುಪಿಸಲಾಗಿತ್ತು. ಅದರೆ  ಮಾಯಾವತಿ ಆದೇಶ ತಮಗೆ ಗೊತ್ತಿರಲಿಲ್ಲ ಎಂದು ಎನ್ ಮಹೇಶ್  ಸುಳ್ಳು ಹೇಳುತ್ತಿದ್ದಾರೆ. ಹಾಗಾಗಿ ಕಾರ್ಯಕರ್ತ ಕ್ಷಮೆ ಕೇಳಬೇಕು. ಎನ್. ಮಹೇಶ್ ಸಂತನ ರೀತಿ ಮಾತನಾಡುವುದನ್ನು ನಿಲ್ಲಿಸಲಿ, ತಮ್ಮ ಬೆಂಬಲಿಗರಿಂದ ಬಿಎಸ್‌ಪಿಗೆ ರಾಜೀನಾಮೆ ಕೊಡಿಸುವ ಮೂಲಕ ಮಹೇಶ್ ಸಣ್ಣತನ ಪ್ರದರ್ಶಿಸುತ್ತಿದ್ದಾರೆ. ಮಹೇಶ್ ಉಚ್ಛಾಟನೆಯಿಂದ ಬಿಎಸ್‌ಪಿಗೆ ಹಿನ್ನಡೆಯಾಗಲ್ಲ’ ಎಂದಿದ್ದಾರೆ.

Leave a Reply