ಹುಲಿ ಎಲ್ಲಿದ್ದರೂ ಹುಲಿಯೇ: ನಂಜಾವಧೂತ ಸ್ವಾಮೀಜಿ

ಡಿಜಿಟಲ್ ಕನ್ನಡ ಟೀಮ್:

ಹುಲಿ ಬೋನಲ್ಲಿದ್ದರೂ ಹುಲಿಯೇ, ಪಂಜರದಲ್ಲಿದ್ದರೂ ಹುಲಿಯೇ, ಹೊರಗಿದ್ದರೂ ಹುಲಿಯೇ. ಇತ್ತೀಚಿನ ದಿನಗಳಲ್ಲಿ ಹುಲಿ ಹೆಚ್ಚಾಗಿಯೇ ಸೌಮ್ಯತೆ ಅಳವಡಿಸಿಕೊಂಡಿದೆ ಅದನ್ನು ಕೆಲವರು ದೌರ್ಬಲ್ಯ ಎಂದು ಭಾವಿಸಿದ್ದಾರೆ. ಐಟಿ, ಇಡಿಯಂತಹ ಸ್ವಾಯತ್ತ ಸಂಸ್ಥೆಗಳು ಹೆಚ್ಚು ಸ್ವಾತಂತ್ರವಾಗಿ ಹಾಗೂ ಪಾರದರ್ಶಕಾಗಿ ಕೆಲಸ ಮಾಡಬೇಕು. ಕಾನೂನು ವ್ಯಾಪ್ತಿಯಲ್ಲಿ ಮಾನವೀಯತೆ ಮೆರೆಯಬೇಕು. ಸಮುದಾಯದ ಅತ್ಯಂತ ಕಡೇ ವ್ಯಕ್ತಿಗೆ ಅನ್ಯಾಯವಾದರೂ ನಾವು ಒಂದಾಗುತ್ತೇವೆ… ಇದು ನಂಜಾವಧೂತ ಸ್ವಾಮೀಜಿ ಅವರು ಹೇಳಿದ ಮಾತು.

ಬುಧವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಸರ್ಕಾರದ ಒಕ್ಕಲಿಗ ವಿರೋಧಿ ನೀತಿ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸ್ವಾಮೀಜಿಗಳು, ಡಿಕೆ ಶಿವಕುಮಾರ್ ಅವರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಿಕೊಳ್ಳಿ. ಆದರೆ ಅವರನ್ನು ನಡೆಸಿಕೊಳ್ಳುತ್ತಿರುವ ಸರಿ ಇಲ್ಲ ಎಂದು ತಿಳಿಸಿದರು.

‘ಜೈಲಲ್ಲಿ ಶಿಕ್ಷೆ ಅನುಭವಿಸುವ ಅಪರಾಧಿಗಳಿಗೂ ಪೆರೋಲ್ ನೀಡಿ ಅವರ ಕೆಲಸಗಳನ್ನು ಸುಗಿಸಿಕೊಂಡು ಬನ್ನಿ ಅಂತಾ ಕಾನೂನಿನಲ್ಲಿ ಅಕಾಶ ನೀಡಲಾಗುತ್ತದೆ. ಆದರೆ ಡಿಕೆ ಶಿವಕುಮಾರ್ ಅವರಿಗೆ ತಮ್ಮ ತಂದೆಯವರಿಗೆ ಎಡೆ ಇಡಲು ಅವಕಾಶ ನೀಡದಿರುವುದು ಬೇಸರ ತಂದಿತು. ಅವರು ತಮ್ಮ ಕಾರ್ಯ ಮುಗಿಸಿ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬಂದು ವಿಚಾರಣೆಗೆ ಹಾಜರಾಗುತ್ತಿದ್ದರು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅವರು ಹೆದರಿ ಓಡಿ ಹೋಗುವ ವ್ಯಕ್ತಿ ಅಲ್ಲ. ಅವರು ಅಪರಾಧ ಮಾಡಿದ್ದರೆ ಅದಕ್ಕೆ ಕಾನೂನು ಇದೆ ಅದರ ಪ್ರಕ್ರಿಯೆಗೆ ಡಿಕೆ ಶಿವಕುಮಾರ್ ಬದ್ಧರಾಗಿದ್ದಾರೆ.

ಮೋದಿ ಅವರು ದೇಶವನ್ನು ಏಕತೆಗೊಳಿಸುವ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಲಿಷ್ಠವಾಗಿ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಆ ಬಗ್ಗೆ ಹೆಚ್ಚು ಗಮನ ಹರಿಸಲಿ. ಇನ್ನಷ್ಟು ಪ್ರಕಾಶಮಾನವಾಗಿ ಬೆಳೆಯಲಿ. ಪಕ್ಷಗಳ ಬಾವುಟಗಳನ್ನು ಇಲ್ಲಿ ನೋಡಿದಾಗ ನನಗೆ ಈ ವೇದಿಕೆ ಹತ್ತಬೇಕೆ ಎಂದು ಅನಿಸಿತು. ಆದರೆ ಸಮುದಾಯದ ಹಲವು ಸಂಘಟನೆಗಳ ನಾಯಕರನ್ನು ನೋಡಿದ ನಂತರ ನಾನು ಈ ವೇದಿಕೆ ಹತ್ತಿದೆ. ಒಕ್ಕಲಿಗ ಸಮುದಾಯ ಬಹಳ ಸಂಯಮವಿರುವ ಸಮುದಾಯ. ಅವರು ಗಾಂಧಿ ತತ್ವವನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಅಳವಡಿಸಿಕೊಂಡಿದ್ದಾರೆ. ಒಕ್ಕಲಿಗರು ಕೆಟ್ಟವರಲ್ಲ ಆದರೆ ಅವರ ಕೋಪ ಬಹಳ ಕೊಟ್ಟದು. ಅದಕ್ಕೆ ಯಾರು ಕೂಡ ಅವಕಾಶ ನೀಡಬೇಡಿ.

ನಮ್ಮ ಸಮುದಾಯ ಯಾವ ಸಮಯದಲ್ಲಿ ಸದ್ದು ಮಾಡಬೇಕೋ ಆ ಸಮಯದಲ್ಲಿ ಸದ್ದು ಮಾಡುತ್ತಿಲ್ಲ. ಹೀಗಾಗಿ ಪೆಟ್ಟುಗಳ ಮೇಲೆ ಪೆಟ್ಟು ತಿನ್ನುತ್ತಲೇ ಇದ್ದೀವಿ. ಒಂದು ಕಾಲದಲ್ಲಿ ಸರ್ಕಾರದಲ್ಲಿ ಕನಿಷ್ಠ 6-7 ಸಚಿವರುಗಳಿರುತ್ತಿದ್ದರು. ಆದರೆ ಈಗ ಕೇವಲ ಮೂರು ಮಂದಿ ಇದ್ದಾರೆ. ಆರ್.ಅಶೋಕ್, ಅಶ್ವಥ್ ನಾರಾಯಣ ಹಾಗೂ ಸಿ.ಟಿ ರವಿ ಅವರಿಗೆ ಜನರನ್ನು ಹೆಚ್ಚಾಗಿ ಸಂಪರ್ಕಿಸುವಂತಹ ಖಾತೆ ನೀಡಿಲ್ಲ. ಅವರು ಇನ್ನು ಯುವಕರು ಅವರಿಗೆ ಇನ್ನು ಮಹತ್ವದ ಜವಾಬ್ದಾರಿ ಕೊಡಬಹುದಿತ್ತು ಆದರೆ ಕೊಟ್ಟಿಲ್ಲ.

ಇನ್ನು ಮುಂದೆ ಸಮುದಾಯ ಎಚ್ಛೆತ್ತುಕೊಳ್ಳಬೇಕು. ನಮ್ಮನ್ನು ಯಾರೂ ಕೂಡ ಗುರಿಯಾಗಿಸಿ ತುಳಿಯಲು ಪ್ರಯತ್ನಿಸಬಾರದು. ಈ ಮೂಲಕ ಯಾರಿಗೆ ಸಂದೇಶ ರವಾನಿಸಬೇಕೋ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ’ ಎಂದರು.

Leave a Reply