ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಕೇಂದ್ರದಿಂದ ಹೇಡಿತನದ ರಾಜಕಾರಣ: ಕೃಷ್ಣಭೈರೇಗೌಡ

ಡಿಜಿಟಲ್ ಕನ್ನಡ ಟೀಮ್:

ನಮ್ಮ ಜನ ನಾಯಕ ಡಿಕೆ ಶಿವಕುಮಾರ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಮೇಲೆ ಇಡಿ, ಐಟಿ ಹಾಗೂ ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ಹೇಡಿತನದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಕೃಷ್ಣಭೈರೇ ಗೌಡ ಟೀಕಿಸಿದ್ದಾರೆ.

ಡಿಕೆ ಶಿವಕುಮಾರ್ ಬಂಧನ ಸೇರಿದಂತೆ ಕೇಂದ್ರ ಸರ್ಕಾರದ ಒಕ್ಕಲಿಗ ವಿರೋಧ ನೀತಿ ಖಂಡಿಸಿ ಬುಧವಾರ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೃಷ್ಣಭೈರೇಗೌಡ, ಚೆಲುವರಾಯಸ್ವಾಮಿ, ಮಾಜಿ ಶಾಸಕ ಬಾಲಕೃಷ್ಣ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಮಾಜಿ ಸಂಸದ ಉಗ್ರಪ್ಪ, ಮಾಜಿ ಮಂತ್ರಿ ರಾಮಲಿಂಗಾ ರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ, ಕರವೇ ಅಧ್ಯಕ್ಷ ಹಾಗೂ ಪ್ರತಿಭಟನೆ ಆಯೋಜಕರಾದ ನಾರಾಯಣ ಗೌಡರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಕೃಷ್ಣಭೈರೇಗೌಡರು, ‘ಪಾಕಿಸ್ತಾನದಲ್ಲಿ ಹೇಗೆ ಸೇನೆ ವಿರುದ್ಧ ಮಾತನಾಡಿದರೆ ಅಲ್ಲಿನ ಐಎಸ್ಐ ಸಂಸ್ಥೆಯನ್ನು ಛೂ ಬಿಡಲಾಗುತ್ತದೆಯೋ ಅದೇ ರೀತಿ ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನಿಕ ಸಂಸ್ಥೆಗಳನ್ನು ಛೂ ಬಿಡುತ್ತಿದೆ. ಇದು ಹೇಡಿತನದ ರಾಜಕಾರಣ. ಜನರ ಮಧ್ಯೆ ಬಂದು ರಾಜಕಾರಣ ಮಾಡಲು ಸಾಧ್ಯವಾಗದೇ ಬಿಜೆಪಿ ಅವರು ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ.’

‘ಉದ್ಯಮಿ ವಿಜಯ ಮಲ್ಯ ದೇಶದ 9 ಸಾವಿರ ಕೋಟಿಯನ್ನು ಮೋಸ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಆತನನ್ನು ಹಿಡಿಯುವ ಬದಲು ನಮ್ಮ ಸಹೋದರ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಮೇಲೆ ಕೇವಲ 5 ಕೋಟಿ ಹಣದ ಲೆಕ್ಕ ಕೊಡಬೇಕಿದೆ. ಅದರ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ತೆಗೆದುಕೊಂಡಿದ್ದು, ಅದಕ್ಕೆ ಉತ್ತರ ನೀಡುತ್ತಿದ್ದರೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರನ್ನು ಬಂಧಿಸಲಾಗಿದೆ.’

‘ಇನ್ನು ನಮ್ಮ ರಾಜ್ಯದ ಹೆಮ್ಮೆಯ ಉದ್ಯಮಿ ಸಿದ್ಧಾರ್ಥ ಅವರಿಗೆ ಐಟಿ ಇಲಾಖೆ ಕಿರುಕುಳ ನೀಡಿದೆ. ಅವರದು ಆತ್ಮಹತ್ಯೆ ಅಲ್ಲ. ಅದು ಕೊಲೆ. ಈ ರೀತಿ ಕೇಂದ್ರ ಸರ್ಕಾರ ಒಕ್ಕಲಿಗರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ವಿರೋಧ ಪಕ್ಷಗಳನ್ನು ಮುಗಿಸಲು ಈ ರೀತಿ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ’ ಎಂದರು.

ನಂತರ ಮಾತನಾಡಿದ ಚೆಲುವರಾಯಸ್ವಾಮಿ, ‘ಐಟಿ ಹಾಗೂ ಇಡಿ ಅವರು ಕಾನೂನು ವಿಚಾರಣೆ ನಡೆಸಲಿ ನಾವು ಬೇಡ ಎನ್ನುವುದಿಲ್ಲ. ಆದರೆ ವಿಚಾರಣೆಗೆ ಸಹಕರಿಸುತ್ತಿದ್ದರೂ ಅವರನ್ನು ಬಂಧಿಸಿ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ. ಇದು ದ್ವೇಷದ ರಾಜಕಾರಣ. ಡಿಕೆ ಶಿವಕುಮಾರ್ ಬಂಧನದ ಹಿಂದೆ ರಾಜ್ಯ ನಾಯಕರ ಕೈವಾಡವಿಲ್ಲ. ಇದರ ಹಿಂದೆ ಬಿಜೆಪಿ ಪೈಕಮಾಂಡ್ ಅಮಿತ್ ಶಾ ಹಾಗೂ ಮೋದಿ ಕೈವಾಡವಿದೆ. ಅವರಿಗೆ ಸರಿಯಾಗಿ ಮಲಗುವ ವ್ಯವಸ್ಥೆ ಇಲ್ಲ, ಊಟ ವ್ಯವಸ್ಥೆ ಇಲ್ಲ. ಶೇವಿಂಗ್ ಮಾಡಿಕೊಳ್ಳುವ ಸೌಲಭ್ಯಕ್ಕೂ ಕೋರ್ಟ್ ಗೆ ಹೋಗಬೇಕು. ಅವರನ್ನು ಕಳ್ಳರನ್ನು ಕೊಲೆಗಾರರನ್ನು ನಡೆಸಿಕೊಳ್ಳುವಂತೆ ವರ್ತಿಸುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ’ ಎಂದರು.

ದಿನೇಶ್ ಗುಂಡೂರಾವ್ ಅವರು ಮಾತನಾಡಿ, ‘ಇದು ಕೇವಲ ಡಿಕೆ ಶಿವಕುಮಾರ್ ಅವರ ವಿಚಾರ ಮಾತ್ರವಲ್ಲ. ಇಡೀ ವಿರೋಧ ಪಕ್ಷಗಳನ್ನು ಮುಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂದು ದೇಶದಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆರ್ಥಿಕ ಕುಸಿತ ಉಂಟಾಗಿದೆ. ಕಳೆದ ಮೂರು ತಿಂಗಳಲ್ಲಿ ದೇಶದ ಬ್ಯಾಂಕುಗಳಿಗೆ 32 ಸಾವಿರ ಕೋಟಿ ವಂಚನೆ ಮಾಡಲಾಗಿದೆ. ಇಂತಹ ಸಮಸ್ಯೆಗಳು ಮಾಧ್ಯಮಗಳಲ್ಲಿ ಬರದಂತೆ ನೋಡಿಕೊಳ್ಳಲು ನಾವು ಚಿದಂಬರಂ ಅವರನ್ನು ಬಂಧಿಸಿದ್ದೇವೆ, ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ್ದೇವೆ ಎಂದು ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ವಿರೋಧ ಪಕ್ಷದಲ್ಲಿರುವಾಗ ಕೆಟ್ಟವರಾಗಿರುವ ನಾಯಕರು ಬಿಜೆಪಿ ಸೇರಿದ ತಕ್ಷಣ ಒಳ್ಳೆಯವರಾಗಿ ಬಿಡುತ್ತಾರೆ. ಅವರ ಮೇಲಿರುವ ಆರೋಪಗಳೆಲ್ಲವೂ ಸುಳ್ಳಾಗಿಬಿಡುತ್ತವೆ. ಅವರು ನಿರಪರಾಧಿಗಳಾಗಿ ಒಳ್ಳೆಯವರಾಗುತ್ತಾರೆ. ಇದು ಎಂತಹ ರಾಜಕಾರಣ ಸ್ವಾಮಿ. ಇದರ ವಿರುದ್ಧ ಜನ ಧ್ವನಿ ಎತ್ತಿದ್ದಾರೆ. ಒಕ್ಕಲಿಗ ಸಮುದಾಯ ಧ್ವನಿ ಎತ್ತಿದೆ. ಒಂದು ಬಾರಿ ಜನ ಎದ್ದು ನಿಂತರೆ ಅವರನ್ನು ತಡೆಯಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

Leave a Reply