ಕರ್ನಾಟಕದಲ್ಲೂ ಕಡಿಮೆ ಆಗುತ್ತೆ ದುಬಾರಿ ದಂಡ..!?

ಡಿಜಿಟಲ್ ಕನ್ನಡ ಟೀಮ್:

ರಸ್ತೆ ನಿಯಮ ಶಿಸ್ತಿನ ಪಾಲನೆ ಉದ್ದೇಶದಿಂದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ದುಬಾರಿ ದಂಡ ಈಗ ರಾಜ್ಯದಲ್ಲಿ ಕಡಿಮೆ ಆಗುವ ಎಲ್ಲ ಲಕ್ಷಣಗಳು ಗೋಚರಿಸಿವೆ.

ಸಂಚಾರಿ ನಿಯಮ ಉಲ್ಲಂಘನೆಯಿಂದ ಅಪಘಾತಗಳು ಸಂಭವಿಸುತ್ತವೆ ಅನ್ನೋ ಕಾರಣಕ್ಕೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮುತುವರ್ಜಿ ವಹಿಸಿ ಜಾರಿಗೆ ತಂದ ದುಬಾರಿ ದಂಡಕ್ಕೆ ಎಲ್ಲೆಡೆ ಬ್ರೇಕ್ ಬೀಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರೂರು ಗುಜರಾತ್‌ನಲ್ಲಿ‌ಮೊದಲಿಗೆ ದಂಡದ ಮೊತ್ತವನ್ನು ಹಿಂದೆ ಜಾರಿಯಲ್ಲಿದ್ದ ಮಟ್ಟಕ್ಕೆ ಇಳಿಸಲಾಯ್ತು. ಆ ಬಳಿಕ ತಮಿಳುನಾಡು ಸರ್ಕಾರ ಕೂಡ ಹೊಸ ದಂಡ ಮೊತ್ತವನ್ನು ಇಳಿಕೆ ಮಾಡಿದ್ದು, ಇದೀಗ ದೇಶಾದ್ಯಂತ ದುಬಾರಿ ದಂಡದ ಮೊತ್ತ ಇಳಿಕೆಗೆ ಆಗ್ರಹ ಕೇಳಿಬಂದಿದೆ.

ದುಬಾರಿ ದಂಡವನ್ನು ಇಳಿಸುವುದು ಆಯಾ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ನಿತಿನ್ ಗಡ್ಕರಿ ಹೇಳಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ದಂಡ ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ಆದರೆ ಎಷ್ಟು ನಿರ್ಧರಿಸುತ್ತಾರೆ ಎಂಬುದರ ಬಗ್ಗೆ ಇನ್ನು ತೀರ್ಮಾನ ಕೈಗೊಂಡಿಲ್ಲ.

ದುಬಾರಿ ದಂಡ ಜಾರಿಗೆ ಬಂದ ನಂತರ ಸರ್ಕಾರ ದಂಡ ವಿಧಿಸುವ ಮೊದಲು ನಮಗೆ ಉತ್ತಮ ಗುಣಮಟ್ಟದ ರಸ್ತೆ ನೀಡಲಿ. ರಸ್ತೆಯಲ್ಲಿ ಗುಂಡಿ ಇದ್ದರೆ ನಾವು ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು ಎಂಬ ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೆ ದಂಡ ದುಬಾರಿಯಾದ ನಂತರ ಟ್ರಾಫಿಕ್ ಪೊಲೀಸರ ಕಲೆಕ್ಷನ್ ಜಾಸ್ತಿಯಾಗಿದೆ ಎಂದು ಸಾರ್ವಜನಿಕ ಚರ್ಚೆಯಾಗುತ್ತಿತ್ತು.

ರಸ್ತೆ ನಿಯಮ ಪಾಲನೆಗಾಗಿ ಜಾಹೀರಾತು ಮಾಡಿಯಾಯ್ತು, ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿದ್ದರೂ ನಮ್ಮ ಜನ ಸಂಚಾರಿ ನಿಯಮ ಪಾಲನೆ ಮಾಡುತ್ತಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ದುಬಾರಿ ದಂಡದ ಅಸ್ತ್ರ ಪ್ರಯೋಗಿಸಿತು. ಈಗ ಒಂದೊಂದೇ ರಾಜ್ಯ ಸರ್ಕಾರಗಳು ಇದನ್ನು ಮೊಟಕುಗೊಳಿಸುತ್ತಿದ್ದು, ಕೇಂದ್ರದ ನಿರ್ಧಾರದ ಉದ್ದೇಶಕ್ಕೆ ಹಿನ್ನಡೆಯಾಗುತ್ತಿದೆ.

Leave a Reply