ಸೆ.17ರ ವರೆಗೂ ಇಡಿ ವಶಕ್ಕೆ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಅಕ್ರಮ ಹಣ ವ್ಯವಹಾರ, ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17ರ ವರೆಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಶಕ್ಕೆ ನೀಡಿ ಕೋರ್ಟ್ ಸೂಚನೆ ಹೊರಡಿಸಿದೆ.

ಈ ಹಿಂದೆ ನೀಡಲಾಗಿದ್ದ 10 ದಿನಗಳ ವಶದ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಶುಕ್ರವಾರ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯ, ಇನ್ನೂ ನಾಲ್ಕು ದಿನಗಳ ಕಾಲ ಡಿಕೆ ಶಿವಕುಮಾರ್ ಅವರನ್ನು ಇಡಿ ವಶಕ್ಕೆ ನೀಡಿದೆ.

ಶುಕ್ರವಾರ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮಾಡದೇ, ಅದಕ್ಕೆ ತಕರಾರು ಅರ್ಜಿ ಸಲ್ಲಿಸಲು ಸೋಮವಾರದವರೆಗೂ ಇಡಿ ಪರ ವಕೀಲರಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಇಂದು ಜಾಮೀನು ಸಿಗುವುದಿಲ್ಲ ಎಂಬುದು ಖಚಿತವಾಗಿತ್ತು. ಹೀಗಾಗಿ ಡಿಕೆ ಶಿವಕುಮಾರ್ ಪರ ವಕೀಲ ಅಭಿಷೆಕ್ ಮನು ಸಿಂಘ್ವಿ, ಇಡಿ ವಶಕ್ಕೆ ನೀಡಬಾರದು ಎಂದು ವಾದ ಮಂಡಿಸಲು ಹೆಚ್ಚು ಗಮನಹರಿಸಿದರು.

ಐಟಿ ಕಾಯಿದೆಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರ ಮೇಲೆ ಮಾಡಲಾಗಿರುವ ಆರೋಪ ಕೇವಲ ದಂಡ ವಿಧಿಸಿ ಬಿಡುಗಡೆ ಮಾಡುವಂತಹ ಪ್ರಕರಣ. ಇಡಿ ಅಧಿಕಾರಿಗಳು ಅನಗತ್ಯವಾಗಿ 2016, 2017ರ ಪ್ರಕರಣಗಳನ್ನು ಪಿಎಂಎಲ್ಎ ಕಾಯಿದೆ ಅಡಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.

ಇನ್ನು ವಾದ ಆರಂಭದಲ್ಲೇ, ರಕ್ತದ ಒತ್ತಡ, ಥೈರಾಯ್ಡ್ ಸಮಸ್ಯೆ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ನ್ಯಾಯಾಲಯದ ಮುಂದೆ ಇಡಲಾಯಿತು. ಹೀಗಾಗಿ ಕೋರ್ಟ್ ಇಡಿ ವಶಕ್ಕೆ ನೀಡುವ ಸೂಚನೆ ಜತೆಗೆ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ಎಂದೂ ತಿಳಿಸಿದೆ.

ಇದಕ್ಕೂ ಮುನ್ನ ಪ್ರತಿವಾದ ಮಂಡಿಸಿದ ಇಡಿ ಪರ ವಕೀಲರು, ಡಿಕೆ ಶಿವಕುಮಾರ್ ಅವರ ಖಾತೆಗೆ 317 ಖಾತೆಗಳಿಂದ ಹಣ ವರ್ಗಾವಣೆ ಮಾಡಲಾಗಿದೆ. 200 ಕೋಟಿ ಕಪ್ಪು ಹಣ ಹೊಂದಿದ್ದಾರೆ. ಹೀಗಾಗಿ ಈ ವಿಚಾರಗಳ ಕುರಿತು ವಿಚಾರಣೆ ನಡೆಸಬೇಕು ಹೀಗಾಗಿ ಇನ್ನು ನಾಲ್ಕು ದಿನಗಳ ಕಾಲ ಡಿಕೆ ಶಿವಕುಮಾರ್ ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ವಾದಿಸಿದರು.

ಈ ವೇಳೆ ಇಡಿ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ನನ್ನ ಹೆಸರಲ್ಲಿ ಇರೋದು ಕೇವಲ 5 ಖಾತೆಗಳು. 317 ಖಾತೆಗಳು ನನ್ನದೇ ಎಂದು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

Leave a Reply