ಹಿಂದಿ ದಿವಸ್ ಹೆಸರಲ್ಲಿ ‘ಒಂದು ದೇಶ ಒಂದು ಭಾಷೆ’ ವಿವಾದ ಸೃಷ್ಟಿಸಿದ ಶಾ!

ಡಿಜಿಟಲ್ ಕನ್ನಡ ಟೀಮ್:

ಹಿಂದಿ ಭಾಷೆ ಮೇಲೆ ಅತಿಯಾದ ಪ್ರೀತಿ ತೋರಿ ಪ್ರಾದೇಶಿಕ ಭಾಷಿಗರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಗ ಮತ್ತೆ ವಿವಾದ ಸೃಷ್ಟಿಸಿದ್ದಾರೆ.

ಶನಿವಾರ ಹಿಂದಿ ದಿವಸ್ ಆಚರಣೆ ಹೆಸರಲ್ಲಿ ಅಮಿತ್ ಶಾ ಮಾಡಿರುವ ಟ್ವೀಟ್, ಈಗ ವಿವಾದದ ಕೇಂದ್ರ ಬಿಂದುವಾಗಿದೆ. ‘ಭಾರತವು ವಿಭಿನ್ನ ಭಾಷೆಗಳ ದೇಶವಾಗಿದೆ ಮತ್ತು ಪ್ರತಿಯೊಂದು ಭಾಷೆಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ, ಇಂದು ಇಡೀ ಜಗತ್ತು ಭಾರತವನ್ನು ಗುರುತಿಸಲು ಏಕಮಾತ್ರ ಭಾಷೆಯ ಅಗತ್ಯವಿದೆ. ಹೀಗೆ ಇಡೀ ದೇಶವನ್ನು ಒಂದು ಭಾಷೆಯ ಅಡಿಯಲ್ಲಿ ಏಕತೆಗೊಳಿಸುವ ಶಕ್ತಿ ಹಿಂದಿ ಭಾಷೆಗೆ ಇದೆ. ಅಲ್ಲದೆ ಇದು ದೇಶದಲ್ಲಿ ಅತಿಹೆಚ್ಚು ಜನ ಮಾತನಾಡುವ ಭಾಷೆಯೂ ಆಗಿದೆ’ ಎಂದು ಹೇಳುವ ಮೂಲಕ ದೇಶದಲ್ಲಿ ಒಂದು ದೇಶ ಒಂದು ಭಾಷೆಯ ಪರಿಕಲ್ಪನೆಗೆ ಮುಂದಾಗಿದ್ದಾರೆ. ಅದರೊಂದಿಗೆ ಮತ್ತೇ ಹಿಂದಿ ಹೇರಿಕೆಗೆ ಪರೋಕ್ಷ ಬೆಂಬಲ ಸೂಚಿಸಿದ್ದಾರೆ.

ವಿವಿಧ ಭಾಷಾ ವೈವಿಧ್ಯತೆ ಭಾರತದ ಹೆಮ್ಮೆ. ಆದರೆ ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆಗೆ ಮುಂದಾಗುತ್ತಿದ್ದಾರೆ. ಕೇಂದ್ರದ ಈ ಧೋರಣೆ ವಿರುದ್ಧ ರಾಜ್ಯದ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಟ್ವೀಟ್ ಮೂಲಕ ಟೀಕೆ ಮಾಡಿರುವುದು ಹೀಗೆ…

ಸಿದ್ದರಾಮಯ್ಯ: ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ, ಅದು ಕನ್ನಡದಂತೆಯೇ ೨೨ ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪ್ಪುಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು.
ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ. ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧವೂ ಇದೆ.

ಕುಮಾರಸ್ವಾಮಿ: ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ ‘ಹಿಂದಿ ದಿವಸ್’ ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ @narendramodi ಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ.

Leave a Reply