ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಕೊಟ್ಟಿರೋ ಡೆಡ್‌ಲೈನ್ ಏನು..?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರಿಗೆ ಡೆಡ್ ಲೈನ್ ಕೊಟ್ಟಿದೆ. ಅದೇನೆಂದರೆ ಮುಂದಿನ ವರ್ಷ ಮೇ ತಿಂಗಳವರೆಗೆ ಅಧಿಕಾರ ನಡೆಸಿ ನಂತರ ಚುನಾವಣೆಗೆ ಹೋಗಲು ಸೂಚನೆ ನೀಡಿದೆ.

ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿದಿರುವ ಯಡಿಯೂರಪ್ಪ ಹೈಕಮಾಂಡ್ ಜೊತೆ ಉತ್ತಮ ಬಾಂಧ್ಯವ್ಯ ಇಟ್ಟುಕೊಂಡಿಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಮನಸ್ಸಿಲ್ಲದಿದ್ದರೂ ಹೈಕಮಾಂಡ್ ಮುಂದೆ ಬೇರೆ ದಾರಿ ಇರಲಿಲ್ಲ. ಬೇರೆಯವರನ್ನು ಸಿಎಂ ಮಾಡ್ತಾರೆ ಅನ್ನೋ ಮಾಹಿತಿ ತಿಳಿದ ಬಿ.ಎಸ್ ಯಡಿಯೂರಪ್ಪ ಅರೆಬಿರಿಯಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿ ಹೈಕಮಾಂಡ್ ನಾಯಕರನ್ನೇ ಇಕ್ಕಟ್ಟಿಗೆ ಸಿಲುಕಿಸಿದರು ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಚರ್ಚೆ ಬಿಜೆಪಿ ಅಂಗಳದಲ್ಲೇ ಕೇಳಿಬರುತ್ತಿವೆ.

ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಮೇ ವೇಳೆಗೆ ಚುನಾವಣೆಗೆ ಹೋಗೋಣ, ಅಷ್ಟರ ತನಕ ಅಧಿಕಾರದಲ್ಲಿ ಮುಂದುವರಿಯಿರಿ ಎಂಬ ಸಂದೇಶ ಹೈಕಮಾಂಡ್ ನಿಂದ ಬಿಎಸ್ ವೈಗೆ ರವಾನೆಯಾಗಿದೆ.

ಭಾನುವಾರ ಬೆಂಗಳೂರಿನಲ್ಲಿ ಎಫ್‌ಕೆಸಿಸಿಐ ಸಂಸ್ಥಾಪಕರ ದಿನಾಚರಣೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದರು‌. ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ಕೊಟ್ಟಿದೆ. ಮುಂದಿನ ಏಳೆಂಟು ತಿಂಗಳಲ್ಲಿ ಬೆಂಗಳೂರು ವಿಶ್ವದರ್ಜೆಗೆ ಏರಿಸಲಾಗುತ್ತದೆ. ಬೆಂಗಳೂರು ಅಭಿವೃದ್ಧಿಗೆ 12 ಹೈಡೆನ್ಸಿಟಿ ಕಾರಿಡಾರ್ ರಸ್ತೆ ನಿರ್ಮಾಣ ಮಾಡ್ತೇವೆ. ಏರ್ಪೋರ್ಟ್‌ವರೆಗೂ ನಮ್ಮ ಮೆಟ್ರೋ ವಿಸ್ತರಣೆ ಮಾಡ್ತೇವೆ. ಬೆಂಗಳೂರು‌ ತ್ಯಾಜ್ಯ ಸಮಸ್ಯೆಗೂ ಪರಿಹಾರ ಕೊಡಲಿದ್ದು, ಬೆಂಗಳೂರು ನಗರದ ಕೆರೆಗಳ ಸ್ವಚ್ಛತೆಗೆ ಆದ್ಯತೆ ನೀಡ್ತೇವೆ. ರೋರಿಚ್ ಎಸ್ಟೇಟ್‌ನಲ್ಲಿ ಫಿಲಂ ಸಿಟಿ ನಿರ್ಮಿಸುವ ಉದ್ದೇಶವೂ ಇದೆ ಎಂದು ಬೆಂಗಳೂರು ಅಭಿವೃದ್ಧಿ ಕನಸು ಕಟ್ಟಿಕೊಟ್ರು. ಏಳೆಂಟು ತಿಂಗಳು ಅನ್ನೋದನ್ನು ಉದ್ದೇಶಪೂರ್ವಕವಾಗಿಯೇ ಹೇಳಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇವತ್ತು ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತಾಡುವಾಗ, ಮುಂದಿನ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ ನಿಮ್ಮ ಕೆಲಸಗಳನ್ನು ಮಾಡಿಕೊಡ್ತೇನೆ ಎನ್ನುವ ಭರವಸೆ ನೀಡಿದ್ದಾರೆ. ಅಂದರೆ ವಿಧಾನಸಭಾ ಮಧ್ಯಂತರ ಚುನಾವಣೆಗೆ ಸಿದ್ಧರಾಗ್ತಿದ್ದಾರಾ ಅನ್ನೋ ಅನುಮಾನ ಮೂಡಿಸಿದೆ. ಇನ್ನೊಂದು ಕಡೆ ನಾವು ಮೂರು ತಿಂಗಳು ಅಧಿಕಾರದಲ್ಲಿ ಇರುತ್ತೇವೋ..? ಒಂದು ವರ್ಷ ಆಡಳಿತ ಮಾಡ್ತೇವೋ ಗೊತ್ತಿಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂದರೆ ಬಿಜೆಪಿ ನಾಯಕರಿಗೆ ಚುನಾವಣೆಗೆ ತಯಾರಿ ನಡೆಸಲು ಸೂಚನೆ ಬಂದಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಮಾತನಾಡಿರುವ ದೇವೇಗೌಡರು, ಜನವರಿ, ಫೆಬ್ರವರಿಯಲ್ಲಿ ಚುನಾವಣೆ ಎದುರಾಗಬಹುದು ಸಜ್ಜಾಗಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ಅಧಿಕಾರದಲ್ಲಿರುವ ಬಿಜೆಪಿಯೇ ಸ್ವತಃ ಚುನಾವಣೆಗೆ ಸಜ್ಜಾಗುತ್ತಿರೋದನ್ನು ನೋಡಿದ್ರೆ ಇದೆಲ್ಲಾ ಹೈಕಮಾಂಡ್ ಸಂದೇಶ ಅನ್ನೋದರಲ್ಲಿ ಸಂದೇಹವಿಲ್ಲ.

Leave a Reply