ಹೆಚ್ಡಿಕೆ ಜೈಲು ಸೇರಿದ್ದರೆ ಡಿಕೆಶಿ ಠಾಣೆ ಬಿಟ್ಟು ಕದಲುತ್ತಿರಲಿಲ್ಲ: ಚೆಲುವರಾಯಸ್ವಾಮಿ!

ಡಿಜಿಟಲ್ ಕನ್ನಡ ಟೀಮ್:

ಡಿಕೆ ಶಿವಕುಮಾರ್ ನೈತಿಕ ಬೆಂಬಲ ನೀಡುವ ಸಲುವಾಗಿ ನಡೆದ ಪ್ರತಿಭಟನೆಯಲ್ಲಿ ಗೈರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಚೆಲುವರಾಯಸ್ವಾಮಿ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.

ಒಂದು ವೇಳೆ ಕುಮಾರಸ್ವಾಮಿ ಅವರು ಜೈಲು ಸೇರಿದ್ದರೆ ಡಿಕೆ ಶಿವಕುಮಾರ್ ಪೊಲೀಸ್ ಠಾಣೆ ಬಿಟ್ಟು ಕದಲುತ್ತಿರಲಿಲ್ಲ ಎಂದು ಚೆಲುವರಾಯಸ್ವಾಮಿ ಮಂಡ್ಯದಲ್ಲಿ ಸೋಮವಾರ ತಿಳಿಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ತಮಗೆ ಆಹ್ವಾನ ನೀಡಿರಲಿಲ್ಲ ಎಂಬ ಕುಮಾರಸ್ವಾಮಿ ಸ್ಪಷ್ಟನೆಗೆ ತಿರುಗೇಟು ಕೊಟ್ಟಿದ್ದ ಚೆಲುವರಾಯಸ್ವಾಮಿ, ಆಹ್ವಾನ ಕೊಡಲು ಅದು ಡಿಕೆ ಶಿವಕುಮಾರ್ ಅವರ ಮನೆ ಬೀಗರೂಟ ಕಾರ್ಯಕ್ರಮ ಅಲ್ಲ ಎಂದಿದ್ದರು.

ಈಗ ಮತ್ತೇ ವಾಗ್ದಾಳಿ ಮಾಡಿರುವ ಚೆಲುವರಾಯಸ್ವಾಮಿ ಹೇಳಿದ್ದಿಷ್ಟು…
‘ಕುಮಾರಸ್ವಾಮಿಯವರ ಸಿಎಂ ಪಟ್ಟ ಉಳಿಸಲು ಡಿಕೆ ಶಿವಕುಮಾರ್ ಎಲ್ಲರನ್ನೂ ಎದುರುಹಾಕಿಕೊಂಡರು. ಆದರೆ, ಅದಕ್ಕೆ ಪ್ರತಿಯಾಗಿ ಕುಮಾರಸ್ವಾಮಿಯವರು ಏನು ಮಾಡಿದರು? ಡಿಕೆಶಿ ಸಂಕಷ್ಟದ ಸ್ಥಿತಿಯಲ್ಲಿ ಇಂದು ಅವರ ಪರವಾಗಿ ನಿಲ್ಲಲಿಲ್ಲ. ಇದೇ ಕುಮಾರಸ್ವಾಮಿ ಅವರಿಗೆ ಇಂತಹ ಕಷ್ಟ ಬಂದಿದ್ದರೆ ಡಿಕೆಶಿ ಪೊಲೀಸ್ ಸ್ಟೇಷನ್ ಬಳಿಯಲ್ಲೇ ಕುಳಿತಿರುತ್ತಿದ್ದರು. ಕುಮಾರಸ್ವಾಮಿಯವರು ಡಿಕೆಶಿ ಪರವಾಗಿ ನಿಂತಿದ್ದರೆ ಅವರಿಗೆ ಮಾನಸಿಕವಾಗಿ ಧೈರ್ಯ ಬರುತ್ತಿತ್ತು.

ಡಿಕೆ ಶಿವಕುಮಾರ್ ಬಂಧನವಾದಾಗ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೋಗದೇ ಇದ್ದಿದ್ದಕ್ಕೆ ಕಾರಣಗಳಿವೆ. ಡಿಕೆಶಿಗೆ ದರೋಡೆ ಮಾಡೋಕೆ ನಾವು ಹೇಳಿದ್ವಾ? ಎಂದು ಕುಮಾರಸ್ವಾಮಿಯವರು ಮೈಸೂರಿನ ಜೆಡಿಎಸ್​ ಕಾರ್ಯಕ್ರಮದಲ್ಲಿ ಕೇಳಿದ್ದರು. ಇದೇ ಕಾರಣಕ್ಕೆ ಅವರು ಡಿಕೆಶಿ ಬಂಧನವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ಡಿಕೆಶಿ ಬಂಧನಕ್ಕೆ ನಾನು ಹೊಣೆಯಾ? ನಾನೇಕೆ ಅದನ್ನು ಪ್ರತಿಭಟಿಸಬೇಕು? ಎಂದು ಕುಮಾರಸ್ವಾಮಿ ಕೇಳಿದ್ದರು.

ಡಿಕೆಶಿ ಪರವಾಗಿ ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೂ ಹೆಚ್​ಡಿಕೆ ಬೆಂಬಲ ನೀಡಲಿಲ್ಲ.ಅದೇ ದಿನ ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಹಾಕಿಕೊಂಡರು. ಅವರು ಉದ್ದೇಶಪೂರ್ವಕವಾಗಿ ಚನ್ನಪಟ್ಟಣಕ್ಕೆ ಹೋಗಿದ್ರಾ? ಎಂಬುದು ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಮಾಡಬಾರದ ಅಪರಾಧವನ್ನೇನೂ ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದ ಅವರ ಬಗ್ಗೆ ಬಿಜೆಪಿ ನಾಯಕರಿಗೆ ಸಿಟ್ಟಿತ್ತು. ಆ ಕೋಪವನ್ನು ಈ ರೀತಿ ತೀರಿಸಿಕೊಂಡಿದ್ದಾರೆ.

ದೇವೇಗೌಡರು ಹೇಳೋದೆಲ್ಲ ಸುಳ್ಳು. ಅವರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಮನವರಿಕೆ ಆಗುವವರೆಗೂ ಇದು ನಡೆಯುತ್ತಲೇ ಇರುತ್ತದೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತದೆ. ಆ ದಿನ ಬೇಗ ಬಂದೇ ಬರುತ್ತದೆ. ಜಿ.ಟಿ. ದೇವೇಗೌಡರು ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಎಸ್​.ಆರ್. ಶ್ರೀನಿವಾಸ್ ಕೂಡ ಸಿಡಿದೆದ್ದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜೆಡಿಎಸ್ ವರಿಷ್ಠರು ಯಾರೇ ಹೋದರೂ, ಯಾರೇ ಬಂದರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಭಾಗದ ಜನ ತಮ್ಮನ್ನು ನಂಬುತ್ತಾರೆ, ಯಾವುದೇ ಸರ್ಕಾರಗಳಲ್ಲಿ ಕಿಂಗ್ ಮೇಕರ್ ಆಗುತ್ತೇವೆ ಎಂದುಕೊಂಡಿದ್ದಾರೆ.’

Leave a Reply