ಇಕ್ಕಟ್ಟಿಗೆ ಸಿಲುಕಿದ್ರು ಸರ್ಕಾರ ಬೀಳಿಸಿದ ಅನರ್ಹರು..!?

ಡಿಜಿಟಲ್ ಕನ್ನಡ ಟೀಮ್:

ಅನರ್ಹ ಶಾಸಕರು ಅಲ್ಲೂ ಸಲ್ಲದ ಇಲ್ಲೂ ಸಲ್ಲದವರ ಪಟ್ಟಿಯಲ್ಲಿ ಸೇರಿಕೊಂಡು ಇಕ್ಕಟ್ಟಿಗೆ ಸಿಲುಕಿದ್ದಾರೆ. ದೆಹಲಿಯ ಬಿಜೆಪಿ ನಾಯಕರು ಅನರ್ಹ ಶಾಸಕರ ಮಾತಿಗೆ ಸ್ಪಂದಿಸುತ್ತಿಲ್ಲ. ಅದೇ ರೀತಿ ರಾಜ್ಯದಲ್ಲಿ ಮಂತ್ರಿ ಸ್ಥಾನವೂ ಸಿಗಲಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ಆದೇಶಕ್ಕೆ ತಡೆ ತಂದು ಉಪಚುನಾವಣೆಗೆ ಸ್ಪರ್ಧೆ ಮಾಡೋಣ ಎಂದರೆ ಅಲ್ಲಿ ತುರ್ತಾಗಿ ವಿಚಾರಣೆಯೂ ನಡೀತಿಲ್ಲ. ಮಂಗಳವಾರ ವಿಚಾರಣೆಗೆ ಅರ್ಜಿ ಬಂದಿತ್ತಾದ್ರೂ ನ್ಯಾಯಮೂರ್ತಿ ಮೋಹನ್ ಶಾಂತಗೌಡರ್ ಅವರು ಹಿಂದೆ ಸರಿದ ಕಾರಣ ಮುಂದಿನ ಸೋಮವಾರಕ್ಕೆ ಅರ್ಜಿ ಮುಂದೂಡಿಕೆಯಾಗಿದೆ. ಇದು ರಾಜಕೀಯ ಭವಿಷ್ಯದ ಏನಾಗುತ್ತೋ ಕಂಗಾಲಾಗಿರುವ ಅನರ್ಹರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜುಲೈ 25, 2019 ರಂದು 17 ಮಂದಿ ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಅಂದರೆ ಎರಡು‌ ತಿಂಗಳ ಅವಧಿ ಮುಕ್ತಾಯದ ಹಂತದಲ್ಲಿದೆ. ಇನ್ನು ಉಳಿದಿರೋದು ಕೇವಲ ನಾಲ್ಕು ತಿಂಗಳು ಮಾತ್ರ. ಯಾವುದೇ ಒಂದು ವಿಧಾನಸಭಾ ಅಥವಾ ಲೋಕಸಭಾ ಕ್ಷೇತ್ರ ತೆರವಾದರೆ ಗರಿಷ್ಟ ಆರು ತಿಂಗಳ ಕಾಲಾವಧಿಯಲ್ಲಿ‌ ಮರು‌ಚುನಾವಣೆ ನಡೆಸಬೇಕು. ಆ ಮೂಲಕ ನೂತನ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಕಾನೂನಲ್ಲಿ ಅವಕಾಶವಿದೆ. ಅದೇ ರೀತಿ ಆರು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ಕ್ಷೇತ್ರ ಜನಪ್ರತಿನಿಧಿ ಇಲ್ಲದೆ ಇರುವಂತಿಲ್ಲ. ಹಾಗಾಗಿ ಜನವರಿ ಒಳಗೆ ಚುನಾವಣೆ ನಡೆಸುವುದು ಅನಿವಾರ್ಯ. ಇದೇ ಕಾರಣಕ್ಕಾಗಿ ವಿಧಾನಸಭೆ ಸಚಿವಾಲಯ ಚುನಾವಣಾ ಆಯೋಗಕ್ಕೆ ಎರಡನೇ ಬಾರಿಗೆ ಪತ್ರ ಬರೆದಿದ್ದು, 17 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವಂತೆ ಸೂಚಿಸಿದೆ. ಕಳೆದ ತಿಂಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಸಚಿವಾಲಯ ಇದೀಗ ಮತ್ತೊಮ್ಮೆ ನೆನಪಿಸುವ ಕೆಲಸ ಮಾಡಿದೆ.

ಜುಲೈ 25 ಕ್ಕೆ 17 ಶಾಸಕರು ಅನರ್ಹಗೊಂಡಿದ್ದಾರೆ. ಹಾಗಾಗಿ ಜನವರಿ 25 ರ ಒಳಗೆ ಖಾಲಿಯಾದ ಸ್ಥಾನ ಭರ್ತಿ ಮಾಡಬೇಕಿದೆ. ಚುನಾವಣಾ ಅಧಿಸೂಚನೆ ಹೊರಡಿಸಲು ಸಲಹಾ ಪೂರ್ವಕವಾಗಿ ಪತ್ರ ಬರೆಯಲಾಗಿದೆ. ಈ ಹಿಂದೆ ಸ್ಪೀಕರ್ ಅನರ್ಹ ಮಾಡಿ ಆದೇಶ ಹೊರಡಿಸಿದ್ದ ಗೆಜೆಟ್ ನೋಟಿಫಿಕೇಷನ್ ಸಮೇತ ಅರ್ಜಿ ಕಳುಹಿಸಿಕೊಟ್ಟಿದ್ದ ವಿಧಾನಸಭೆ ಸಚಿವಾಲಯ. ಇದೀಗ ಮತ್ತೊಮ್ಮೆ ಮನವಿ ಪತ್ರ ಕಳುಹಿಸಿದೆ. ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಪರವಾಗಿ ತೀರ್ಪು ಬಂದರೆ ಮಂತ್ರಿಯಾಗುವ ಕನಸು ಕಾಣ್ತಿರೋ ಅನರ್ಹ ಶಾಸಕರು, ಒಂದು ವೇಳೆ ಚುನಾವಣೆ ಘೋಷಣೆಯಾದರೂ ಸುಪ್ರೀಂಕೋರ್ಟ್ ತೀರ್ಪು ನೀಡದೆ ಇದ್ದರೆ‌ ನಮ್ಮ ಕಥೆ ಏನು ಎಂಬ ಆತಂಕಕ್ಕೆ ಸಿಲುಕಿದ್ದಾರೆ.

ಬಿಜೆಪಿ ನಾಯಕರು ತಮ್ಮ ಪರವಾಗಿ ಕೆಲಸ ಮಾಡ್ತಿದ್ದಾರೋ..? ಅಥವಾ ನಮಗೆ ಅಧಿಕಾರ ಸಿಗೋದು ಬೇಡ ಎಂದು ರಾಜಕೀಯ ತಂತ್ರಗಾರಿಕೆ ಮಾಡ್ತಿದ್ದಾರೋ ಗೊತ್ತಾಗ್ತಿಲ್ಲ. ಆದ್ರೆ ಬಿಜೆಪಿ ವಿರುದ್ಧ ಮಾತನಾಡುವಂತಿಲ್ಲ. ಯಾಕಂದ್ರೆ ಬಿಜೆಪಿ ಹೊರಿಸಿರುವ ಭಾರ ಆ ರೀತಿ ಇದ್ದು, ಅದನ್ನು ಇಳಿಸುವಂತೆಯೂ ಇಲ್ಲ. ತಲೆ ಮೇಲೆ ಹೊತ್ತು ಮೆರೆಯುವಂತೆಯೂ ಇಲ್ಲ ಹಾಗಾಗಿದೆ ಅನರ್ಹ ಶಾಸಕರ ಪರಿಸ್ಥಿತಿ.

Leave a Reply