ಸಿದ್ದುಗೆ ಸಿಗದ ಸೋನಿಯಾ ಪರಂಗೆ ಸಿಗ್ತಾರೆ ಅಂದ್ರೆ ಏನಿದರ ಮರ್ಮ..?!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ವಾರ ದೆಹಲಿಗೆ ಎರಡು ದಿನ ಭೇಟಿ ಕೊಟ್ಟ ಸಂದರ್ಭದಲ್ಲಿ ಎಐಸಿಸಿ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಅವರಿಗೆ ಅಪಾಯಿಂಟ್‌ಮೆಂಟ್ ಕೂಡಲೇ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಬರಿಗೈಲಿ ವಾಪಸಾದ್ರು. ಆದರೆ ನಿನ್ನೆಯಷ್ಟೇ ದಿಲ್ಲಿಗೆ ತೆರಳಿದ್ದ ಡಾ ಜಿ. ಪರಮೇಶ್ವರ ಅವರನ್ನು ಸೋನಿಯಾ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ. ಅಂದ್ರೆ ಸಿದ್ದರಾಮಯ್ಯ ಅವರನ್ನು ಅವಾಯ್ಡ್ ಮಾಡಿದ ಸೋನಿಯಾ ಗಾಂಧಿ ಪರಮೇಶ್ವರಗೆ ಸಿಕ್ಕಿದ್ದಾರೆ. ಏನಿದರ ಅರ್ಥ? ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ನಂಬಿಕೆ ಕಳೆದುಕೊಂಡ್ರಾ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ಬಹುಮುಖ್ಯ ಕಾರಣ ಸಿದ್ದರಾಮಯ್ಯ ಅನ್ನೋದನ್ನು ಈಗಾಗಲೇ ಅನೇಕ ಮುಖಂಡರು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸರ್ಕಾರ ಬೀಳಿಸಲು ಅವರಾಡಿದ ಆಟ ದಿಲ್ಲಿ ನಾಯಕರಿಗೆ ಗೊತ್ತಾಗಿದೆ. ಅದೇ ಕಾರಣದಿಂದ ವಿರೋಧ ಪಕ್ಷದ ನಾಯಕ ಅಥವಾ ಶಾಸಕಾಂಗ ಪಕ್ಷದ ನಾಯಕ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಸರ್ಕಾರ ಬೀಳುವ ಅಂದರೆ ಆಪರೇಷನ್ ಕಮಲ ನಡೆದ ಕೆಲವೇ ದಿನಗಳ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿದ್ದರು. ಜೊತೆಗೆ ತನ್ನೆಲ್ಲಾ ಆಪ್ತರಿಗೂ ಲೋಕಸಭಾ ಚುನಾವಣೆ ತನಕ ಸುಮ್ಮನಿರಿ, ಆ ಬಳಿಕ ಸರ್ಕಾರ ಇರೋದಿಲ್ಲ ಎಂದು ನೇರವಾಗಿಯೇ ಹೇಳಿಕೊಂಡಿದ್ದರು. ಈ ಬಗ್ಗೆ ಈಗ ಅನರ್ಹರಾಗಿರುವ ಸಿದ್ದರಾಮಯ್ಯನವರ ಒಂದು ಕಾಲದ ಶಿಷ್ಯರು ಕೂಡ ಅನೇಕ ಬಾರಿ ಸಾರಿದ್ದರು. ಲೋಕಸಭೆ ಚುನಾವಣೆ ನಂತರ ಈ ಸರಕಾರ ಇರೋಲ್ಲ ಎಂದು ಹೇಳಿದ್ರು. ಹೀಗಾಗಿ ಸಿದ್ದರಾಮಯ್ಯ ಅವರೇ ಆಪರೇಷನ್ ಕಮಲಕ್ಕೆ ನೇರ ಸಾಥ್ ನೀಡಿದ್ದಾರೆ ಎಂದು ಹೈಕಮಾಂಡ್‌ಗೆ ಅನೇಕರು ದೂರಿದ್ದಾರೆ.

ಇದೀಗ ತಮಗೆ ಭೇಟು ಮಾಡಲು ಅವಕಾಶ ನೀಡದ ಹೈಕಮಾಂಡ್ ನಡಾವಳಿಯಿಂದ ಅನುಮಾನಗೊಂಡಿರುವ ಸಿದ್ದರಾಮಯ್ಯನವರು, ದೆಹಲಿಯಿಂದ ಬಂದ ಬಳಿಕ ಮತ್ತೆ ಅಹಿಂದ ಸಭೆ ನಡೆಸುವ ಮೂಲಕ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ‌ ಕಾಂಗ್ರೆಸ್ ಪಾರ್ಟಿಯನ್ನೇ ಪಕ್ಕಕ್ಕಿಟ್ಟು ಅಹಿಂದ ಸಭೆಗಳನ್ನು ಆಯೋಜನೆ ಮಾಡ್ತಿದ್ದಾರೆ. ಜೆಡಿಎಸ್ ತೊರೆಯುವ ಕೆಲವು ದಿನಗಳ ಹಿಂದೆಯೂ ಇದೇ ರೀತಿ ಅಹಿಂದ ಸಮಾವೇಶಗಳನ್ನು ಆಯೋಜನೆ ಮಾಡಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಇದೀಗ ವಿಪಕ್ಷ ಸ್ಥಾನ ಕೊಡ್ತಿಲ್ಲ ಅನ್ನೋ ಕಾರಣಕ್ಕೆ ಮತ್ತೆ ಅಹಿಂದ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಮಾಹಿತಿಯೂ ಹೈಕಮಾಂಡ್‌ಗೆ ರವಾನೆ ಆಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸ್ವತಃ ಸೋನಿಯಾ ಗಾಂಧಿ ಅವರೇ ಡಾ.ಜಿ ಪರಮೇಶ್ವರ ಅವರನ್ನು ಕರೆಸಿಕೊಂಡಿದ್ದರು ಎನ್ನುವ ಮಾಹಿತಿ ಸಿದ್ದರಾಮಯ್ಯ ಅಂಡ್ ಟೀಂಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಬಯಸಿದ ಅಧಿಕಾರ ಸಿಗಲಿಲ್ಲ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಜೆಡಿಎಸ್ ಹೋಳು ಮಾಡಿ ಕಾಂಗ್ರೆಸ್ ಜತೆಗೆ ಬಂದ್ರು, ಇದೀಗ ಕಾಂಗ್ರೆಸ್‌ನಲ್ಲೂ ಬಯಸಿದ ಹುದ್ದೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಹೋಳು ಮಾಡಬಹುದು ಅನ್ನುವ ಅನುಮಾನ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಏನೇ ಆಗಲಿ ಎಲ್ಲವನ್ನು ಎದುರಿಸಲು ಸಜ್ಜಾಗಿ ಎನ್ನುವ ಸಂದೇಶ ಹೈಕಮಾಂಡ್‌ನಿಂದ ರಾಜ್ಯ ಮುಖಂಡರಿಗೆ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ.

Leave a Reply