ಜನರ ಆಕ್ರೋಶಕ್ಕೆ ಬೆಚ್ಚಿಬಿದ್ದ ಅಮಿತ್​ ಶಾ! ಹಿಂದಿ ವಿಚಾರವಾಗಿ ಉಲ್ಟಾ ಹೊಡೆದಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

‘ನಾನು ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಬಗ್ಗೆ ಮಾತನಾಡಿಲ್ಲ. ಮಾತೃಭಾಷೆಗೆ ಮೊದಲ ಪ್ರಾತಿನಿಧ್ಯ ನೀಡಿ. ಎರಡನೇ ಭಾಷೆಯಾಗಿ ಹಿಂದಿ ಕಲಿಯಿರಿ ಎಂದು ಹೇಳಿದೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ…’ ಇದು ಒಂದು ರಾಷ್ಟ್ರ ಒಂದು ಭಾಷೆ ವಿಚಾರವಾಗಿ ಎದ್ದಿದ್ದ ವಿವಾದಕ್ಕೆ ಕೇಂದ್ರ ಸಚಿವ ಅಮಿತ್ ಶಾ ಕೊಟ್ಟಿರುವ ಸ್ಪಷ್ಟನೆ.

ಹಿಂದಿ ದಿವಸ್​ ಆಚರಣೆ ವೇಳೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಎಲ್ಲಾ ರಾಜ್ಯದ ಜನರು ಹಿಂದಿಯನ್ನು ಕಲಿಯಬೇಕು. ಒಂದೇ ರಾಷ್ಟ್ರ ಒಂದೇ ಭಾಷೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಗುರುತಿಸುವುದು ಅನುಕೂಲ ಎಂದು ಹೇಳುವ ಮೂಲಕ ಹಿಂದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆ ಪ್ರಾದೇಶಿಕ ಭಾಷೆ ಇರುವ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ತಮಿಳುನಾಡು, ಕೇರಳದ ನಾಯಕರು, ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಜತೆಗೆ ದಕ್ಷಿಣ ಭಾರತದ ಏಕೈಕ ಬಿಜೆಪಿ ಸಿಎಂ ಯಡಿಯೂರಪ್ಪನವರೂ ಕೂಡ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಟ್ವೀಟ್ ಮಾಡಿದ್ದರು.

ತಮಿಳುನಾಡಿನಲ್ಲಿ‌ ಡಿಎಂಕೆ ನಾಯಕ ಸ್ಟಾಲಿನ್ ನಾವು ವಾಸ ಮಾಡ್ತಿರೋದು ಇಂಡಿಯಾ ಅದು ಹಿಂದಿಯಾ ಅಲ್ಲ ಎಂದು ಅಮಿತ್ ಶಾಗೆ ಮಾತಿನಲ್ಲೇ ಚುಚ್ಚಿದ್ರು. ಇನ್ನು ನಟ ಕಂ ರಾಜಕಾರಣಿ‌ ಕಮಲ್ ಹಾಸನ್ ಪ್ರತಿಭಟನೆಯಲ್ಲಿ ಭಾಗಿಯಾಗಿ ತಮಿಳುನಾಡಿನಲ್ಲಿ‌ ಜಲ್ಲಿಕಟ್ ಹೋರಾಟಕ್ಕಿಂತಲೂ ತೀವ್ರವಾಗಿ ಇರಲಿದೆ ಎಂದು ಎಚ್ಚರಿಸಿದ್ರು. ಇನ್ನು ಮತ್ತೋರ್ವ ಸೂಪರ್ ಸ್ಟಾರ್ ಕಂ ಪೊಲಿಟಿಷಿಯನ್ ರಜಿನಿಕಾಂತ್, ಒಂದೇ ಭಾಷೆ ಒಂದೇ ದೇಶ ಎಂಬ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಈಗಾಗಲೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಸೂಪರ್ ಸ್ಟಾರ್ ರಜಿನಿಕಾಂತ್ ಸಹ ಈ ಬಗ್ಗೆ ಮೌನ ಮುರಿದಿದ್ದಾರೆ. ಹಿಂದಿಯನ್ನು ಏಕ ಭಾಷೆ ಮಾಡುವುದು ಸರಿಯಲ್ಲ. ಈ ದೇಶದಲ್ಲಿ ಅದು ಸಾಧ್ಯವೂ ಆಗುವುದಿಲ್ಲ ಎಂದಿದ್ದಾರೆ. ಜೊತೆಗೆ ದೇಶಕ್ಕೆ ಒಂದೇ ಭಾಷೆ ಎಂಬುದು ಭಾರತ ಮಾತ್ರವಲ್ಲದೆ ಪ್ರಪಂಚದ ಯಾವುದೇ ದೇಶದಲ್ಲಿಯೂ ಒಳ್ಳೆಯದಲ್ಲ.ನಮ್ಮ ಮೇಲೆ ಹಿಂದಿಯನ್ನು ಹೇರಿದರೆ, ದಕ್ಷಿಣ ಭಾರತದ ಯಾವುದೇ ರಾಜ್ಯ ಕೂಡ ಇದನ್ನು ಒಪ್ಪಲ್ಲ. ಉತ್ತರದಲ್ಲೂ ಕೆಲವು ರಾಜ್ಯಗಳು ವಿರೋಧಿಸುತ್ತವೆ ಎಂದಿದ್ದಾರೆ.

ದಕ್ಷಿಣ ಭಾರತ ಮಾತ್ರವಲ್ಲದೆ ಪ್ರಾದೇಶಿಕ ಭಾಷೆಗೆ ಮಹತ್ವ ಕೊಡುವ ಇತರೆ ರಾಜ್ಯಗಳಲ್ಲೂ ಅಮಿತ್ ಶಾ ಮಾತಿಗೆ ವಿರೋಧ ಕೇಳಿಬಂತು. ಯಾವಾಗ ದೇಶಾದ್ಯಂತ ಒಕ್ಕೋರಲ ವಿರೋಧ ವ್ಯಕ್ತವಾಯ್ತೋ ಆಗ ಎಚ್ಚೆತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಒಂದು ದೇಶ, ಒಂದೇ ಭಾಷೆ ಎನ್ನುವಂತಹ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

Leave a Reply