ಮಂಡ್ಯದಲ್ಲಿ ಚಲುವರಾಯಸ್ವಾಮಿ ರಾಜಕೀಯ ಚದುರಂಗದ ಆಟ..!

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿಗೆ ತೊಡೆ ತಟ್ಟಿ ನಿಂತಿರೋದು ನಾಗಮಂಗಲ ಮಾಜಿ ಶಾಸಕ ಚೆಲುವರಾಯಸ್ವಾಮಿ. ಡಿಕೆ ಶಿವಕುಮಾರ್ ಅವರ ವಿಚಾರವಾಗಿ ಕುಮಾರಸ್ವಾಮಿ ಅವರ ನಡೆಯನ್ನು ಬಹಿರಂಗವಾಗಿ ಟೀಕೆ ಮಾಡಿರುವ ಚೆಲುವರಾಯಸ್ವಾಮಿ ಈಗ ಮನ್ಮುಲ್ ಚುನಾವಣೆಯಲ್ಲಿ ಜೆಡಿಎಸ್ ಗೆ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದರೂ ಬಿಜೆಪಿ ಜತೆ ಅತ್ಯುತ್ತಮ ಬಾಂದವ್ಯ ಇಟ್ಟುಕೊಳ್ಳುವ ಮೂಲಕ ಮಂಡ್ಯ ರಾಜಕಾರಣದಲ್ಲಿ ಚದುರಂಗದ ಆಟ ಆಡುತ್ತಿದ್ದಾರೆ. ಅದಕ್ಕೆ ಅವರು ಈಗ ಆಯ್ಕೆ ಮಾಡಿಕೊಂಡಿರುವ ವೇದಿಕೆ ಎಂದರೆ ಅದು ಮನ್ಮುಲ್ (ಮಂಡ್ಯ ಹಾಲು ಒಕ್ಕೂಟ) ಚುನಾವಣೆ.

ಹೌದು, ಮಂಡ್ಯದಲ್ಲಿ ಯಾವುದೇ ಚುನಾವಣೆ ಆದ್ರೂ ಸರಿ ಅದು ರಂಗು ಪಡೆದುಕೊಳ್ಳದೇ ಇರದು. ಇದೇ ಕಾರಣಕ್ಕಾಗಿಯೇ ಈಗ ಚೆಲುವರಾಯಸ್ವಾಮಿ ಹಾಗೂ ಜೆಡಿಎಸ್ ನಾಯಕರ ನಡುವಣ ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ. ಒಕ್ಕಲಿಗರು ಮಾಡಿದ ಪ್ರತಿಭಟನಾ ಮೆರಣಿಗೆಗೆ ಕುಮಾರಸ್ವಾಮಿ ಅವರಿಗೆ ಆಹ್ವಾನ ಕೊಡೋದಕ್ಕೆ ಅದೇನು ಡಿಕೆಶಿ ಅವರ ಮನೆಯ ಬೀಗರೂಟವಾ..? ಎಂದು ಪ್ರಶ್ನಿಸುವ ಮೂಲಕ ಶುರುವಾದ ವಾಕ್ಸಮರ ಇದೀಗ ಮನ್ಮುಲ್ ಚುನಾವಣಾ ಅಖಾಡಕ್ಕೆ ಬಂದಿದೆ.

ಇತ್ತೀಚೆಗೆ ಕರ್ನಾಟಕ ಹಾಲು ಒಕ್ಕೂಟದ ಚುನಾವಣೆಯಲ್ಲಿ ರಣತಂತ್ರ ರೂಪಿಸಿದ್ದ ಬಿಜೆಪಿ‌ ನಾಯಕರು ಬಾಲಚಂದ್ರ ಜಾರಕಿಹೊಳಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ  ಯಶಸ್ವಿಯಾಗಿದ್ದರು. ಆ ಮೂಲಕ ಕೆಎಂಎಫ್ ಆಡಳಿತದ ಮೇಲೆ ಹಿಡಿತ ಹೊಂದಿದ್ದ ಹೆಚ್.ಡಿ ರೇವಣ್ಣ ಅವರಿಗೆ ಮುಖಭಂಗ ಮಾಡಿದ್ದರು. ಇದೀಗ ಜೆಡಿಎಸ್ ಅಧಿಪತ್ಯವನ್ನು ಹೊಂದಿರುವ ಮಂಡ್ಯದ ಮೇಲೆ ಕಮಲಪಡೆ ಕಣ್ಣು ಹೊರಳಿದೆ. ಸಕ್ಕರೆ ನಾಡಲ್ಲಿ ಮನ್ಮುಲ್ ರಾಜಕೀಯ ರಂಗಾಗಿದ್ದು, ಅಧಿಕಾರ ಹಿಡಿಯಲು ಎಲ್ಲಾ ರೀತಿಯ ಕಸರತ್ತು‌ ನಡೆಸಿದೆ. ಜೆಡಿಎಸ್ ಗೆ ಟಕ್ಕರ್ ಕೊಡಲು ಚಲುವರಾಯಸ್ವಾಮಿ ಅವರನ್ನೇ ಅಖಾಡಕ್ಕೆ ಇಳಿಸಿರುವ ಬಿಜೆಪಿ ಅವರಿಗೆ ಎಲ್ಲಾ ರೀತಿಯ ಬೆಂಬಲ ಕೊಡುತ್ತಿದೆ.

ಮನ್ಮುಲ್ ಅಧಿಕಾರದಲ್ಲಿದ್ದ ಕಾಂಗ್ರೆಸ್ ಜನರಿಂದ ತಿರಸ್ಕಾರಕ್ಕೆ ಒಳಗಾಗಿದ್ದು, ಜೆಡಿಎಸ್ 8 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. 3 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಒಂದು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹೀಗಾಗಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಬಾರದು ಎಂಬ ಉದ್ದೇಶದೊಂದಿಗೆ ಆಪರೇಷನ್ ಶುರು ಮಾಡಿರುವ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ, ಮದ್ದೂರು ಕ್ಷೇತ್ರದಿಂದ ಗೆಲುವು ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ ಎಸ್‌.ಪಿ ಸ್ವಾಮಿ ಅವರಿಗೆ ಗಾಳ ಹಾಕಿದೆ. ಆಪರೇಷನ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಉಪ ಮುಖಮಂತ್ರಿ ಡಾ. ಅಶ್ವಥ್ ನಾರಾಯಣ ನೇತೃತ್ವದಲ್ಲಿ ಸ್ವಾಮಿ ಅವರನ್ನು ಸೆಳೆಯಲು ಮಾತುಕತೆ ನಡೆಸಲಾಗಿದೆ. ಕಾಂಗ್ರೆಸ್ ಮುಖಂಡರಾದ ರಮೇಶ್ ಬಾಬು ಮತ್ತು ಚಲುವರಾಯಸ್ವಾಮಿ ಜೆಡಿಎಸ್‌ಗೆ ಅಧಿಕಾರ ಸಿಗದಂತೆ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ.

ಮಂಡ್ಯದ ಮನ್ಮುಲ್ ಅಧಿಕಾರಕ್ಕಾಗಿ ಬಿಜೆಪಿ ಸರ್ಕಾರ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಜೆಡಿಎಸ್‌ಗೆ ಅಧಿಕಾರ ತಪ್ಪಿಸಲು ಬಿಜೆಪಿಯಿಂದ ಅನರ್ಹತೆ ಅಸ್ತ್ರ ಪ್ರಯೋಗ ಮಾಡಿದೆ. ಮನ್ಮುಲ್‌ನ ಜೆಡಿಎಸ್‌ ನಿರ್ದೇಶಕರಾದ ಎಚ್.ಟಿ.ಮಂಜುನಾಥ್, ನೆಲ್ಲಿಗೆರೆ ಬಾಲುಗೆ ಸಹಕಾರಿ ಸಂಘದ ನಿಬಂಧಕರು ನೋಟಿಸ್ ಜಾರಿ ಮಾಡಿದ್ದಾರೆ. ಸೆಪ್ಟೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿರೋ ಸಹಕಾರಿ ಸಂಘದ ನಿಬಂಧಕರು, ನಿಯಮದಂತೆ 180 ದಿನ ಹಾಲು ಹಾಕಿಲ್ಲ ಎಂದು ಮಂಜುನಾಥ್‌ಗೆ ನೋಟಿಸ್ ಕೊಟ್ಟಿದ್ರೆ, ಸಹಕಾರಿ ಸಂಘದ ಬೈಲಾ ಉಲ್ಲಂಘನೆ ಆರೋಪದಲ್ಲಿ ನೆಲ್ಲಿಗೆರೆ ಬಾಲುಗೆ ನೋಟಿಸ್ ಜಾರಿ ಮಾಡಿದ್ದಾರೆ. ನೆಲ್ಲಿಗೆರೆ ಬಾಲು ಸಹೋದರ ಮುದ್ದೇಗೌಡ ಡೈರಿ ಕಾರ್ಯದರ್ಶಿಯಾಗಿರೋ ಹಿನ್ನಲೆಯಲ್ಲಿ ನೋಟಿಸ್‌ ಜಾರಿಯಾಗಿದೆ ಎನ್ನಲಾಗಿದೆ.

ಸೆಪ್ಟೆಂಬರ್ 23ರಂದು ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಇಬ್ಬರು ಜೆಡಿಎಸ್ ನಿರ್ದೇಶಕರನ್ನ ಅನರ್ಹಗೊಳಿಸಿ ಅಧಿಕಾರಕ್ಕೇರಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನುವ ಆರೋಪ ಬಂದಿದೆ. ಸೆ‌ಪ್ಟೆಂಬರ್ 21ರಂದೇ ವಿಚಾರಣೆ ನಡೆಸಿ ಅನರ್ಹಗೊಳಿಸಲು ಬಿಜೆಪಿ ಕುತಂತ್ರ ನಡೆಸಿದೆ ಎಂದು ಜೆಡಿಎಸ್ ಕೆಂಡಕಾರಿದೆ. ಮಂಡ್ಯ ಸಹಕಾರ ಸಂಘದ ನಿಬಂಧಕರ ಕಚೇರಿಗೆ ಭೇಟಿ ಕೊಟ್ಟಿದ್ದ ಮಾಜಿ ಸಚಿವ ಪುಟ್ಟರಾಜು, ಸಹಕಾರ ಸಂಘದ ಉಪನಿಬಂಧಕ ಬಿ.ಆರ್.ಕೃಷ್ಣಮೂರ್ತಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.ಹಿಂಬದಿ ರಾಜಕಾರಣಕ್ಕೆ ಸಪೋರ್ಟ್ ಮಾಡಬೇಡಿ, ಬದ್ಧತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಇದ್ದರೂ ಬಿಜೆಪಿಗೆ ಸಪೋರ್ಟ್ ಮಾಡುವ ಮೂಲಕ ಚಲುವರಾಯಸ್ವಾಮಿ ರಾಜಕೀಯ ಚದುರಂಗದಾಟ ಶುರು ಮಾಡಿದ್ದಾರೆ. ಕಾಂಗ್ರೆಸ್ ಈಗಾಗಲೇ ಚುನಾವಣೆಯಲ್ಲಿ ಸೋಲುಂಡಿದ್ದು, ಬಿಜೆಪಿಗೆ ಸಪೋರ್ಟ್ ಮಾಡುವ ಮೂಲಕ ಜೆಡಿಎಸ್‌ಗೆ ಅಧಿಕಾರ ಸಿಗದಂತೆ ಮಾಡುವ ಲೆಕ್ಕಾಚಾರ ವರ್ಕೌಟ್ ಆಗ್ತಿದೆ. ಇದೇ ಕಾರಣಕ್ಕೆ ಸಿ.ಎಸ್ ಪುಟ್ಟರಾಜು, ಚಲುವರಾಯಸ್ವಾಮಿ ಯಾವ ಪಕ್ಷ ಅನ್ನೋದನ್ನು ಮೊದಲು ನಿರ್ಧಾರ ಮಾಡಲಿ, ಬೆಳಗ್ಗೆ ಹೊತ್ತಲ್ಲಿ ಸಿದ್ದರಾಮಯ್ಯ ರಾತ್ರಿ ಹೊತ್ತಲ್ಲಿ‌ ಬಿ.ಎಸ್ ಯಡಿಯೂರಪ್ಪ ಜೊತೆ ರಾಜಕಾರಣ ಮಾಡೋದನ್ನು ನಿಲ್ಲಿಸಲಿ ಎಂದು ಕುಟುಕಿದ್ದಾರೆ.

Leave a Reply