ಯಡಿಯೂರಪ್ಪರನ್ನು ರಕ್ಷಣೆ ಮಾಡಿದ್ದಕ್ಕೆ ಇಂದು ಡಿಕೆಶಿ ಜೈಲು ಸೇರಿದ್ದಾರೆ! ಕುಮಾರಸ್ವಾಮಿ ಹೊಸ ಬಾಂಬ್!

ಡಿಜಿಟಲ್ ಕನ್ನಡ ಟೀಮ್:

ಡಿಕೆ ಶಿವಕುಮಾರ್ ಅವರ ಬಂಧನ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ. ಅದೇನೆಂದರೆ, ‘ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರ ಪ್ರಕರಣದಿಂದ ರಕ್ಷಣೆ ಮಾಡಿದ್ದಾರ ಪರಿಣಾಮ ಇಂದು ಡಿಕೆ ಶಿವಕುಮಾರ್ ಜೈಲು ಸೇರಿದ್ದಾರೆ’ ಎಂಬುದು.

ಶುಕ್ರವಾರ ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೆಸ್ಕಾಮ್ ನಲ್ಲಿ ಭಾರಿ ಅವ್ಯವಹಾರ ನಡೆದಿತ್ತು. ಈ ವಿಚಾರವಾಗಿ ತನಿಖೆ ಮಾಡಿಸುವಂತೆ ನಾನು ಶಿವಕುಮಾರ್ ಅವರಿಗೆ ಹೇಳಿದ್ದೆ, ಆದರೆ ಡಿಕೆಶಿ ಅವರು ತನಿಖೆ ಮೂಡಿಸಿಲ್ಲ. ಆದರೆ ಡಿಕೆ ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿ ಎಂದು ಯಡಿಯೂರಪ್ಪ ಎರಡು ವರ್ಷಗಳ ಹಿಂದೆಯೇ ಪತ್ರ ಬರೆದಿದ್ದರು. ಅಂದು ಯಡಿಯೂರಪ್ಪ ಅವರನ್ನು ರಕ್ಷಿಸಿದ ಪರಿಣಾಮ ಇಂದು ಡಿಕೆ ಶಿವಕುಮಾರ್ ಜೈಲು ಸೇರಿದ್ದಾರೆ’ ಎಂದರು.

‘ಡಿಕೆಶಿ ಅವರಿಗೆ ಬೆಂಬಲವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ, ನನ್ನನ್ನು ವಿಲನ್ ರೀತಿ ಬಿಂಬಿಸಿದ್ದರು. ಮಾಧ್ಯಮಗಳ ಮಾಲೀಕರನ್ನು ನಂಬಿ ನಾನು ಬದುಕುತ್ತಿಲ್ಲ. ನಾನು ಮಾಧ್ಯಮದವರ ಮಾಲೀಕರ ಗುಲಾಮನಾಗುವುದಿಲ್ಲ. ನನ್ನ ನಂಬಿರುವ ಜನರಿಗೆ ಮಾತ್ರ ನಾನು ಸಲಾಂ ಹೊಡೆಯುತ್ತೇನೆ’ ಎಂದರು.

‘ನನ್ನ ಬಳಿಯೂ ಪಾಪದ ಹಣ ಇದ್ದಿದ್ದರೆ ಮೈತ್ರಿ ಸರ್ಕಾರದ ಶಾಸಕರನ್ನು ರಾಜೀನಾಮೆ ಕೊಡದಂತೆ ತಡೆಯಬಹುದಿತ್ತು. ಈಗಿನ ರಾಜಕಾರಣ ನೋಡಿದರೆ ಇದರ ಸಹವಾಸವೇ ಬೇಡ ಅನ್ನಿಸುತ್ತದೆ. ಬಡವರ ನೋವಿಗೆ ಸ್ಪಂದಿಸಬೇಕೆಂಬ ಒಂದೇ ಕಾರಣಕ್ಕೆ ನಾನು ರಾಜಕೀಯದಲ್ಲಿದ್ದೇನೆ. ಬಡವರ ಬಂಧು ಯೋಜನೆಯನ್ನು ಜಾರಿಗೊಳಿಸದೆ ಯಡಿಯೂರಪ್ಪ ಅವರು ನನ್ನ ಮೇಲಿನ ಕೋಪವನ್ನು ಬಡವರ ಮೇಲೆ ತೋರುತ್ತಿದ್ದಾರೆ’ ಎಂದು ತಿಳಿಸಿದರು.

ನಾನು ಸಿಎಂ ಆದ ಸಂಧರ್ಭದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇನೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉತ್ತಮ ಶಿಕ್ಷಣ ತೃಪ್ತಿ ತಂದಿಲ್ಲ. ಕೆಲ ರಾಜಕಾರಣಿಗಳು ಭಾಷಣಕ್ಕೆ ಮಾತ್ರ ಮೀಸಲಾಗಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಓದಿದ ಮಕ್ಕಳಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದೇವೆ. ನಾನು ಸಿಎಂ ಆಗಿದ್ದು ಕೆಲವರಿಗೆ ಸಹಿಸಲು ಆಗಲಿಲ್ಲ. ನನ್ನ ಸಿಎಂ ಹುದ್ದೆ ಮುಳ್ಳಿನ ಹಾಸಿಗೆ ಆಗಿತ್ತು. ನಮ್ಮ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಸಿ.ಪಿ. ಯೋಗೇಶ್ವರ್ ಮುಂದಾಳತ್ವ ವಹಿಸಿದ್ದರು. ಈಗ ಅವರಿಗೇ ಪಕ್ಷದಲ್ಲಿ ಸ್ಥಾನವಿಲ್ಲದಂತಾಗಿದೆ ಎಂದು ಹೇಳಿದ್ದಾರೆ.

Leave a Reply