ಜೋತಿಷ್ಯದ ಮೇಲೆ ಸರಕಾರ ನಿಂತಿಲ್ಲ! ಕೋಡಿ ಮಠದ ಶ್ರೀಗಳಿಗೆ ಆರ್.ಅಶೋಕ್ ಟಾಂಗ್

ಡಿಜಿಟಲ್ ಕನ್ನಡ ಟೀಮ್:

ಸಿದ್ದರಾಮಯ್ಯ ಅವರು ಮತ್ತೇ ಅಧಿಕಾರದ ಗದ್ದುಗೆ ಏರುವ ಬಗ್ಗೆ ಕೋಡಿ ಮಠದ ಶ್ರೀ ಭವಿಷ್ಯ ನುಡಿದರೆ, ಇತ್ತ ಕಂದಾಯ ಸಚಿವ ಆರ್.ಅಶೋಕ್, ‘ಜ್ಯೋತಿಷ್ಯ ಹಾಗೂ ಭವಿಷ್ಯವಾಣಿಗಳಿಗೆ ಹೆಚ್ಚು ಬೆಲೆ ಕೊಡಬಾರದು. ಜೋತಿಷ್ಯ ಮೇಲೆ ಸರಕಾರ ನಿಂತಿಲ್ಲ’ ಎಂದಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಂಗೆಮಡುವಿನಲ್ಲಿ ಕೋಡಿ ಮಠದ ಶ್ರೀಗಳು, ‘ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯಗೆ ಶುಭ ಸೂಚನೆ ಇದೆ. ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ. ನೀವು ರಾಜ್ಯದ ಗದ್ದುಗೆ ಹಿಡಿದಿದ್ದೀರಿ, ಮುಂದಿನ ದಿನಗಳಲ್ಲಿ ದೆಹಲಿಯ ಗದ್ದುಗೆ ಹಿಡಿಯಿರಿ’ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.

‘ಹಾಲುಮತ ಸಮಾಜದವರು ಇಡೀ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ನೆಲೆಸಿದ್ದಾರೆ. ನಾನು ಈ ಹಿಂದೆಯೇ ಹೇಳಿದ್ದೆ ಕಂಬಳಿ ಹಾಸೀತು ಹಂಬಳಿ ಹಳಸೀತು ಎಂದು. ಅದೇ ರೀತಿ ಈಗ ಸಿದ್ದರಾಮಯ್ಯ ಗದ್ದುಗೆ ಹಾಸೀತು. ಆಗ ನನ್ನ ಮಾತು ಸುಳ್ಳಾಗಲಿಲ್ಲ ಸಿದ್ದರಾಮಯ್ಯ ಸಿಎಂ ಆಗಿದ್ದರು. ಈಗ ಮತ್ತೆ ಸಿದ್ದರಾಮಯ್ಯಗೆ ಶುಭಸೂಚನೆ ಇದೆ’ ಎಂದು ಭವಿಷ್ಯ ಹೇಳಿದ್ದಾರೆ.

ಕೋಡಿ ಮಠದ ಶ್ರೀಗಳ ಭವಿಷ್ಯಕ್ಕೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಕಂದಾಯ ಸಚಿವ ಆರ್. ಅಶೋಕ್, ‘ಕೋಡಿಮಠ ಶ್ರೀಗಳು ಸರ್ಕಾರದ ಭವಿಷ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ.ಆದ್ರೆ ಸರ್ಕಾರದ ಭವಿಷ್ಯ ನಿರ್ಧಾರ ಮಾಡೋದು ಜನ, ಜನರ ಆಶೀರ್ವಾದ ಇರುವ ತನಕ ನಮ್ಮ ಸರ್ಕಾರ ಇರುತ್ತದೆ. ಭಾರತ ದೇಶದಲ್ಲಿ ಒಂದು ಕೋಟಿ ಸ್ವಾಮಿಜಿಗಳು, ಜ್ಯೋತಿಷಿಗಳು ಇದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಭವಿಷ್ಯ ಹೇಳ್ತಾರೆ. ಹಾಗಾಗಿ ಭವಿಷ್ಯಕ್ಕೆ ಬೆಲೆ ಕೊಡಬಾರದು’ ಎಂದು ಹೇಳಿದ್ದಾರೆ.

‘ಜೊತೆಗೆ ರಾಜ್ಯ ಸರ್ಕಾರ ಅವಧಿ ಪೊರೈಸುತ್ತೆ, ಜನಪರ ಕೆಲಸ ಮಾಡುತ್ತದೆ,ಜೋತಿಷ್ಯ ಮೇಲೆ ಸರಕಾರ ನಿಂತಿಲ್ಲ’ ಎಂದು ಕೋಡಿ ಮಠ ಶ್ರೀಗಳ ಮಾತಿಗೆ ಟಾಂಗ್ ಕೊಟ್ಟಿದ್ದಾರೆ.

ಬಾಗಲಕೋಟೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕೋಡಿಮಠದ ಶ್ರೀಗಳು ಭವಿಷ್ಯ ಹೇಳೋದ್ರಿಂದ ಸರ್ಕಾರ ನಡೆಯೋದಿಲ್ಲ. ಭವಿಷ್ಯ, ಮತ್ತೊಂದರಿಂದ ಸರ್ಕಾರ ನಡೆಯೋದಿಲ್ಲ. ಹಾಗೇನಾದ್ರೂ ಆದ್ರೆ ಮತ್ತೊಬ್ಬರು ಸರ್ಕಾರ ಐದು ವರ್ಷ ಗಟ್ಟುಮುಟ್ಟಾಗಿರುತ್ತೇ ಅಂತ ಭವಿಷ್ಯ ಹೇಳ್ತಾರೆ ಅದಕ್ಕೇನು ಹೇಳ್ತೀರಿ ಎಂದು ಪ್ರಶ್ನಿಸಿದ್ದಾರೆ.

Leave a Reply