ಅಶೋಕ್ ಉಸ್ತುವಾರಿಯಲ್ಲಿ ಅಶ್ವಥ್ ನಾರಾಯಣ್ ಹಸ್ತಕ್ಷೇಪ..!?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯ ಒಕ್ಕಲಿಗ ನಾಯಕ ಪಟ್ಟಕ್ಕಾಗಿ ಆರ್.ಅಶೋಕ್ ಹಾಗೂ ಡಾ.ಅಶ್ವಥ್ ನಾರಾಯಣ್ ಅವರ ನಡುವಣ ಪೈಪೋಟಿ ತೀವ್ರತೆ ಪಡೆದುಕೊಂಡಿದ್ದು, ರಾಜ್ಯ ಬಿಜೆಪಿಯಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಇಷ್ಟು ದಿನಗಳ ಕಾಲ ಒಬ್ಬರ ಮೇಲೆ ಒಬ್ಬರು ಮುನಿಸಿಕೊಂಡು ಮುಖ ತಿರುಗಿಸಿ ಓಡಾಡುತ್ತಿದ್ದ ಈ ಇಬ್ಬರು ನಾಯಕರ ನಾಯಕರ ರಾಜಕೀಯ ಸಮರ ಮುಂದಿನ ಹಂತಕ್ಕೆ ಹೋಗಿದ್ದು, ಅಶ್ವಥ್ ನಾರಾಯಣ್ ಅವರು ಅಶೋಕ್ ಅವರಿಗೆ ಉಸ್ತುವಾರಿ ನೀಡಲಾಗಿರುವ ಮಂಡ್ಯದಲ್ಲಿ ತಮ್ಮ ಹಿಡಿತ ಸಾಧಿಸಲು ಮುಂದಾಗಿದ್ದಾರೆ.

ಬೆಂಗಳೂರು ಉಸ್ತುವಾರಿ ಪಡೆಯಲು ಆರ್. ಆಶೋಕ್ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಸೀನಿಯಾರಿಟಿ ಮೇಲೆ ಅಶೋಕ್ ಉಸ್ತುವಾರಿಗೆ ಟವೆಲ್ ಹಾಕಿದ್ರೆ, ಬಿಎಸ್‌ವೈ ಆಪ್ತತೆ ಮೇಲೆ‌ ಅಶ್ವಥ್ ನಾರಾಯಣ್ ಆಸಕ್ತಿ ವ್ಯಕ್ತಪಡಿಸಿದ್ರು. ಆದ್ರೆ ಇಬ್ಬರಲ್ಲಿ ಯಾರಿಗೇ ಕೊಟ್ಟರು ಅತೃಪ್ತಿ ಜೋರಾಗುವ ಸೂಚನೆ‌ ಅರಿತ ಸಿಎಂ ಯಡಿಯೂರಪ್ಪ ಬೆಂಗಳೂರನ್ನು ತಮ್ಮಲ್ಲೇ ಉಳಿಸಿಕೊಂಡು ಇಬ್ಬರನ್ನೂ ಅಕ್ಕಪಕ್ಕದ ಜಿಲ್ಲೆಗಳಿಗೆ ಉಸ್ತುವಾರಿಯಾಗಿ ನೇಮಿಸಿದ್ರು. ರಾಮನಗರ ಹಾಗೂ ಚಿಕ್ಕಬಳ್ಳಾಪುರ ಡಿಸಿಎಂ ಅಶ್ವಥ್ ನಾರಾಯಣ್‌ಗೆ ಸಿಕ್ಕಿದ್ರೆ, ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಜಿಲ್ಲೆ‌ ಆರ್ ಅಶೋಕ್‌ಗೆ ಕೊಡಲಾಗಿತ್ತು. ಇಲ್ಲಿಗೆ ಸಮಸ್ಯೆ ಬಗೆಹರೀತು ಎನ್ನುವಾಗ ಮಂಡ್ಯ ರಾಜಕೀಯದಲ್ಲಿ ಅಶ್ವಥ್ ನಾರಾಯಣ್ ಅವರ ಹಸ್ತಕ್ಷೇಪ ಮತ್ತೊಂದು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ.

ಮಂಡ್ಯ ಉಸ್ತುವಾರಿ ಆರ್. ಅಶೋಕ್ ಆಗಿದ್ದರೂ ಅಶೋಕ್‌ಗೂ ಮೊದಲೇ ಮಂಡ್ಯದಲ್ಲಿ ಅಶ್ವಥ್ ನಾರಾಯಣ್ ರಾಜಕೀಯ ಶುರು ಮಾಡಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿಯ ಒಕ್ಕಲಿಗ ನಾಯಕನಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಮಂಡ್ಯಕ್ಕೆ ಆಗಮಿಸಿದ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಭರ್ಜರಿ ಮೆರವಣಿಗೆ ಮೂಲಕ ಬಿಜೆಪಿ ಕಾರ್ಯಕರ್ತರು ಕರೆತಂದ್ರು. ತೆರೆದ ವಾಹನದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನ ಬೆಂಬಲಿಗರು ಮೆರವಣಿಗೆ ನಡೆಸಿದ್ರು. ಬಳಿಕ ಮಂಡ್ಯದ ಪ್ರವಾಸಿ ಮಂದಿರದಲ್ಲಿ‌ ರೈತ ಮುಖಂಡರೊಂದಿಗೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರಿಗೆ ರೈತರು ಸಮಸ್ಯೆ‌ ಬಗ್ಗೆ ಗಮನಸೆಳೆದ್ರು. ಜಿಲ್ಲೆಯಲ್ಲಿ ಸ್ಥಗಿತವಾಗಿರುವ ಎರಡು ಸಕ್ಕರೆ ಕಾರ್ಖಾನೆಗಳನ್ನು ಪುನಾರಂಭಿಸಲು ಒತ್ತಾಯ‌ ಮಾಡಿದ್ರು. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಿ ಸ್ಥಗಿತವಾಗಿರುವ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳುವ ಭರವಸೆ‌‌‌‌‌‌‌ಯನ್ನು ಅಶ್ವಥ್ ನಾರಾಯಣ ನೀಡಿದ್ರು.

ಡಿಸಿಎಂ ಅಶ್ವಥ್ ನಾರಾಯಣ್ ಮಂಡ್ಯಕ್ಕೆ ಭೇಟಿ ಕೊಟ್ಟು ಸನ್ಮಾನ ಮಾಡಿಸಿಕೊಂಡು ರೈತರ ಸಮಸ್ಯೆ ಕೇಳಿದ್ರು ಅನ್ನೋದಲ್ಲ ವಿಚಾರ. ಇದರಲ್ಲಿ ಬಹುಮುಖ್ಯ ವಿಚಾರ ಅಂದ್ರೆ ಆರ್. ಅಶೋಕ್ ಹಾಗೂ ಅಶ್ವಥ್ ನಾರಾಯಣ್ ನಡುವೆ ಬೆಂಗಳೂರು ಉಸ್ತುವಾರಿಗಾಗಿ ಮಾತ್ರ ಕಿತ್ತಾಟ ನಡೀಲಿಲ್ಲ. ಬದಲಿಗೆ ಬಿಜೆಪಿಯ ಒಕ್ಕಲಿಗರ ನಾಯಕನ್ಯಾರು ಅನ್ನೋ ವಿಚಾರದಲ್ಲಿ ಪೈಪೋಟಿ ನಡೆಯುತ್ತಿದೆ. ಅದೇ ಕಾರಣಕ್ಕೆ‌ ಅಶ್ವಥ್ ನಾರಾಯಣ್ ಮಂಡ್ಯ ಉಸ್ತುವಾರಿ ಆರ್. ಆಶೋಕ್ ಆಗಿದ್ದರೂ ಅಶೋಕ್‌ಗೂ ಮೊದಲೇ ಸಕ್ಕರೆ ನಾಡಿಗೆ ಎಂಟ್ರಿಕೊಟ್ಟು ರಾಜಕೀಯ ಶುರು ಮಾಡಿದ್ದಾರೆ. ಮನ್ಮುಲ್ ಅಧಿಕಾರ ಹಿಡಿಯುವ ಉದ್ದೇಶದಿಂದ ಮದ್ದೂರು ಜೆಡಿಎಸ್ ಮುಖಂಡ ಎಸ್‌ಪಿ ಸ್ವಾಮಿ ಅವರನ್ನು ಆಪರೇಷನ್ ಮಾಡಿದ್ದಾರೆ. ಅಶ್ವಥ್ ನಾರಾಯಣ್ ಅವರೇ ಮುಂದೆ ನಿಂತು ಸಿಎಂ ಭೇಟಿ ಮಾಡಿಸಿ, ಜೆಡಿಎಸ್‌ಗೆ ಸಿಗಬೇಕಾದ ಅಧಿಕಾರ ತಪ್ಪಿಸಿದ್ದಾರೆ. ಉಸ್ತುವಾರಿ ಸಚಿವರಾಗಿ ಆಯ್ಕೆಯಾದರೂ ಮಂಡ್ಯ ಕಡೆಗೆ ಬಾರದ ಅಶೋಕ್ ಅವರ ಅನುಪಸ್ಥಿತಿಯಲ್ಲಿ ಅಶ್ವಥ್ ನಾರಾಯಣ್ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಶೋಕ್ ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಾಗಿದ್ದರೂ ಮೂಲೆ ಗುಂಪಾಗ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅದು ಯಾವ ಮಟ್ಟಿಗೆ ಎಂದರೆ ಅಶ್ವಥ್ ನಾರಾಯಣ ಅವರನ್ನು ವಾಗತಿಸಲು ಮಂಡ್ಯದಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್ ಗಳಲ್ಲಿ ಅಶೋಕ್ ಅವರ ಫೋಟೋ ಕೂಡ ಇರಲಿಲ್ಲ.

Leave a Reply