ಉಪಸಮರ ಡೇಟ್ ಫಿಕ್ಸ್! ಅನರ್ಹರ ಎದೆ ಢವಢವ!

ಡಿಜಿಟಲ್ ಕನ್ನಡ ಟೀಮ್:

ದೋಸ್ತಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ದಿನಾಂಕ ಪ್ರಕಟವಾಗಿದೆ. ಅಕ್ಟೋಬರ್ 21ರಂದು ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಜತೆಗೆ ರಾಜ್ಯದಲ್ಲಿ ಉಪಚುನಾವಣೆ ನಡೆಯಲಿದೆ.

17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ವಿರುದ್ಧ ನೀಡಿರುವ ಅನರ್ಹ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅತೃಪ್ತ ಶಾಸಕರ ಅರ್ಜಿಯ ವಿಚಾರಣೆ ಸೋಮವಾರ ಆರಂಭವಾಗಲಿದ್ದು, ವಿಚಾರಣೆ ಆರಂಭಕ್ಕೂ ಮೊದಲೇ ಚುನಾವಣೆ ದಿನಾಂಕ ಪ್ರಕಟವಾಗಿದೆ. ಇದು ಸಹಜವಾಗಿ ಅನರ್ಹರ ಎದೆಯಲ್ಲಿ ಢವಢವ ಶುರುವಾಗಿದೆ.

ಸೋಮವಾರ ಆರಂಭವಾಗಲಿರುವ ವಿಚಾರಣೆ ವೇಳೆ ಅನರ್ಹ ಶಾಸಕರು ಸ್ಪೀಕರ್ ಅವರ ತೀರ್ಪು ವಜಾಗೊಳಿಸುವಂತೆ ಮನವಿ ಮಾಡಬಹುದು. ಅದಕ್ಕೂ ಮುನ್ನ ಈ ವಿಧಾನಸಭೆ ಅವಧಿ ಮುಕ್ತಾಯದವರೆಗೂ ಈ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಭಾಗಕ್ಕೆ ತಡೆಯಾಜ್ಞೆ ನೀಡಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮಧ್ಯಂತರ ತೀರ್ಪು ನೀಡಬೇಕಾಗಿ ಕೋರಬಹುದು.

ಕಳೆದ ಎರಡು ತಿಂಗಳಿನಿಂದ ಅನ್ಹ ಶಾಸಕರು ಕೋರ್ಟ್ ಮೆಟ್ಟಿಲು ಹತ್ತಿ ಇಳಿಯುತ್ತಿದ್ದರೂ ಈವರೆಗೂ ಯಾವುದೇ ವಿಚಾರಣೆ ಆರಂಭವಾಗಿಲ್ಲ. ಇನ್ನು ಚುನಾವಣೆಗೆ ಒಂದು ತಿಂಗಳು ಬಾಕಿ ಇರುವುದರಿಂದ ತಮ್ಮ ರಾಜಕೀಯ ಭವಿಷ್ಯ ಏನಾಗುತ್ತದೋ ಎಂಬ ಆತಂಕ ಮನೆ ಮಾಡಿದೆ.

ಚುನಾವಣೆ ದಿನಾಂಕ ಪ್ರಕಟವಾಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಸುಧಾಕರ್, ‘ಚುನಾವಣಾ ದಿನಾಂಕ ಪ್ರಕಟದಿಂದ ನಮಗೆ ಆತಂಕವಾಗಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಅರ್ಜಿಯನ್ನು ಸೋಮವಾರದಿಂದ ವಿಚಾರಣೆ ಮಾಡಲಾಗುತ್ತದೆ. ನ್ಯಾಯಾಲಯದಲ್ಲಿ ಸ್ಪೀಕರ್ ಅವರ ತೀರ್ಪನ್ನು ರದ್ದುಗೊಳಿಸುವ ಮೂಲಕ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

Leave a Reply