ಕೇಂದ್ರ, ರಾಜ್ಯ ಸರಕಾರ ನಡುವಣ ಸಂಘರ್ಷದಲ್ಲಿ ಪ್ರವಾಹಪೀಡಿತರ ನರಳಾಟ

ಸೋಮಶೇಖರ ಪಿ. ಭದ್ರಾವತಿ

ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತು ಸದ್ಯ ಪ್ರವಾಹ ಸಂಸ್ತ್ರಸ್ತರ ಪರಿಸ್ಥಿತಿಗೆ ಹೇಳಿ ಮಾಡಿಸಿದಂತಾಗಿದೆ. ಕಳೆದ ತಿಂಗಳು ಎದುರಾದ ಪ್ರವಾಹದಿಂದ ರಾಜ್ಯದ ಅರ್ಧಕ್ಜೂ ಹೆಚ್ಚು ಭಾಗ ತತ್ತರಿಸಿದೆ. ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಗಳ ಪರಿಸ್ಥಿತಿ ಹೀನಾಯವಾಗಿದೆ. ಪ್ರವಾಹ ಬಂದು 50 ದಿನ ಕಳೆದರೂ ಅವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಇದಕ್ಕೆಕಾರಣ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಾಯಕರ ನಡುವಣ ಮುಸುಕಿನ ಗುದ್ದಾಟ!

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿಯೇ ಅಧಿಕಾರದಲ್ಲಿರುವಾಗ ಗುದ್ದಾಟ ಸಾಧ್ಯನಾ ಅಂತಾ ನೀವು ಪ್ರಶ್ನೆ ಮಾಡಬಹುದು. ಸದ್ಯದ ವಾಸ್ತವ ಪರಿಸ್ಥಿತಿ ಅವಲೋಕಿಸಿದರೆ ಇದು ಸತ್ಯ! ಆಂತರಿಕ ರಾಜಕೀಯ ಭಿನ್ನಾಭಿಪ್ರಾಯಗಳು ರಾಜ್ಯ ಹಾಗು ಕೇಂದ್ರ ಸರ್ಕಾರಗಳ ನಡುವೆ ದೊಡ್ಡ ಕಂದಕವನ್ನೇ ಕೊರೆದಿದೆ.

ರಾಜ್ಯದಲ್ಲಿ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವುದು, ಅದರಲ್ಲೂ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಕೇಂದ್ರದ ನಾಯಕರಿಗೇ ಬಿಲ್- ಕುಲ್ ಇಷ್ಟವಿರಲಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿರೋ ವಿಚಾರ. ಕೇಂದ್ರದ ನಾಯಕರಿಗೆ ಸವಾಲೆಸೆದು ಗದ್ದುಗೆ ಹಿಡಿದಿರುವ ಯಡಿಯೂರಪ್ಪಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ರಾಜ್ಯವನ್ನು ಮಲತಾಯಿಗಿಂತಲೂ ಕಡೆಯಾಗಿ ನೋಡುತ್ತಿದೆ. ತತ್ಪಪರಿಣಾಮವೇ ಇಂದು ಪ್ರವಾಹ ಸಂತ್ರಸ್ತರ ಗೋಳು ಅರಣ್ಯರೋದನವಾಗಿರೋದು.

ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿದ್ದ ಯಡಿಯೂರಪ್ಪನವರು ಪ್ರವಾಹದ ನಂತರ ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ. ದೋಸ್ತಿ ಸರ್ಕಾರ ಬೊಕ್ಕಸ ಖಾಲಿ ಮಾಡಿ ಹೋಗಿದೆ ಎಂದು ಆರೋಪ ಮಾಡಿದ್ದರು. ಅಲ್ಲದೆ ಮುಖ್ಯಮಂತ್ರಿಗಳು ನೀಡಿದ್ದ ಪರಿಹಾರದ ಚೆಕ್ಗಳು ಬೌನ್ಸ್ ಆಗಿದ್ದವು.

ಆರಂಭದಲ್ಲಿ ಕೇಂದ್ರ ಸರ್ಕಾರ ಪರಿಹಾರ ನೀಡಲಿದೆ ಎಂದು ರಾಜ್ಯ ನಾಯಕರು ಹೇಳಿದರೆ, ಕೇಂದ್ರದ ನಾಯಕರು ರಾಜ್ಯ ಸರ್ಕಾರದಿಂದ ಪ್ರವಾಹ ಹಾನಿ ಬಗ್ಗೆ ವರದಿ ಬಂದಿಲ್ಕ ಎಂಬ ಆರೋಪ ಮಾಡಿದರು. ಇದೀಗ ವರದಿ ನೀಡಿ ವಾರಗಳೇ ಕಳೆದರೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಇನ್ನು ಬೆಂಗಳೂರಿನ ಇಸ್ರೋ ಕಚೇರಿಗೆ ಬಂದಿದ್ದ ಮೋದಿ ಪ್ರವಾಹ ಸಂತ್ರಸ್ತರ ಕಡೆ ಓರೆಗಣ್ಣಿಂದಲೂ ನೋಡದೇ ಎಸ್ಕೇಪ್ ಆದರು. ನಂತರ ಪ್ರವಾಹ ಪರಿಹಾರ ನೀಡುವಂತೆ ಮನವಿ ಮಾಡುತ್ತಿದ್ದರು ಪ್ರಧಾನಿ ಆಗಲಿ, ಕೇಂದ್ರ ಸಚಿವರುಗಳಾಗಲಿ ಕಿವಿಗೊಡುತ್ತಿಲ್ಲ. ಇನ್ನು ನಿನ್ನೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವೇ ಆರ್ಥಿಕವಾಗಿ ಸುಭದ್ರವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಬಾಗಿಲು ತಟ್ಟುವುದರಲ್ಲಿ ಅರ್ಥವಿಲ್ಲ ಎಂದು ಪರೋಕ್ಷವಾಗಿ ಕೇಂದ್ರದ ಪರಿಹಾರದ ನಿರೀಕ್ಷೆಗೆ ಎಳ್ಳುನೀರು ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಇವರು ಬೊಕ್ಕಸದಲ್ಲಿ ಹಣ ಇಲ್ಲ ಅಂತಾರೆ, ಅವರು ಬೊಕ್ಕಸದಲ್ಲಿ ಹಣ ಇದೆ ಅಂತಾರೆ. ಎರಡೂ ಹೇಳಿಕೆಗಳೂ ಬಿಜೆಪಿ ನಾಯಕರಿಂದಲೇ ಬರುತ್ತಿವೆ. ಇದರಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಸ್ಥಿತಿಯಲ್ಲಿ ಸಂತ್ರಸ್ತರು ವಿಲವಿಲ ಒದ್ದಾಡುತ್ತಿದ್ದಾರೆ.

ರಾಜ್ಯ ಹಿಂದೆಂದೂ ಕಂಡು ಕೇಳರಿಯದ ಪ್ರವಾಹ ಸಂಕಷ್ಟಕ್ಕೆ ಸಾಕ್ಷಿಯಾದರೂ ಕೇಂದ್ರದಿಂದ ತನ್ನದೇ ಪಕ್ಷ ಅಧಿಕಾರದಲ್ಲಿರುವ ರಾಜ್ಯಕ್ಕೆ ನಯಾ ಪೈಸೆ ಸಿಕ್ಕಿಲ್ಲ. ಅದಕ್ಕೆ ಕಾರಣ ಬಿಎಸ್ ಯಡಿಯೂರಪ್ಪ ಅವರ ಮೇಲೆ ಕೇಂದ್ರ ಬಿಜೆಪಿ ನಾಯಕರಿಗಿರುವ ಒಳಗುದಿ.

ಹೌದು, ಹಿಂದೆ ಹದಿನಾಲ್ಕು ತಿಂಗಳು ಅಧಿಕಾರದಲ್ಲಿದ್ದ ರಾಜ್ಯ ದೋಸ್ತಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಇದ್ದ ಸಂಬಂಧವನ್ನು ಈಗಿನ ರಾಜ್ಯ ಸರ್ಕಾರ ಮತ್ತು ಕೇಂದ್ರದ ಜತೆ ಹೋಲಿಸಿ ನೋಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಮೇಲೆ ಒಂದೆರಡು ಬಾರಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಅಗತ್ಯವಿದ್ದ ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಒಪ್ಪಿಗೆ ಪಡೆದುಕೊಂಡು ಬಂದಿದ್ದರು. ಇನ್ನು ರೇವಣ್ಣ, ಮಾಜಿ ಪ್ರಧಾನಿ ದೇವೇಗೌಡರು ಹೀಗೆ ರಾಜ್ಯ ಸರ್ಕಾರದ ಪರವಾಗಿ ಪ್ರಧಾನಿಯನ್ನು ಭೇಟಿಯಾಗಿದ್ದರು. ಇನ್ನು ಡಿ.ಕೆ. ಶಿವಕುಮಾರ್ ಸೇರಿದಂತೆ ಇತರೆ ಸಚಿವರು ಕೇಂದ್ರದ ಸಚಿವರುಗಳು ಹಾಗೂ ನಾಯಕರುಗಳನ್ನು ಹಕವು ಬಾರಿ ಭೇಟಿಯಾಗಿ ರಾಜ್ಯದ ವಿಚಾರವಾಗಿ ಚರ್ಚಿಸಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದರು.

ಆದರೆ, ಬಿ.ಎಸ್. ಯಡಿಯೂರಪ್ಪನವರ ಸರ್ಕಾರದಿಂದ ಇದ್ಯಾವುದೂ ಸಾಧ್ಯವಾಗುತ್ತಿಲ್ಲ ಎಂಬುದು ಕಟು ಸತ್ಯ. ಪ್ರವಾಹ ಪರಿಹಾರಕ್ಕಾಗಿ ಮುಂದಾಗಿದ್ದ ಮುಖ್ಯಮಂತ್ರಿಗಳ ಭೇಟಿಗೆ ಪ್ರಧಾನಿ ಕಾಲಾವಕಾಶ ನಿರಾಕರಿಸಿದ್ದಾರೆ. ಇದೊಂದು ಉದಾಹರಣೆ ಸಾಕು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ನಡುವಣ ಸಂಘರ್ಷ ಯಾವ ಮಟ್ಟದಲ್ಲಿದೆ ಎಂದು ತಿಳಿದುಕೊಳ್ಳಲು.

ಇನ್ನು ಪರಿಹಾರ ವಿಚಾರವಾಗಿ ನೋಡುವುದಾದರೆ, ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ಸ್ಥಳ ಪರಿಶೀಲನೆ ನಡೆಸಿದ್ದರು. ಆನಂತರ ಅವರ ದಿವ್ಯ ಮೌನ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅವರು ಸಂತ್ರಸ್ತರ ಕಷ್ಟ ನೋಡಲು ಬಂದಿದ್ದರೋ ಅಥವಾ ‘ಗೇಲಿ ಟ್ರಿಪ್’ ಗೆ ಬಂದಿದ್ದರೋ ಎಂಬುದೇ ತಿಳಿಯದಂತಾಗಿದೆ. ಕೇಂದ್ರದ ಸಚಿವರುಗಳು ಪರಿಶೀಲನೆ ನಡೆಸಿ ತಿಂಗಳಾದರೂ ನಯಾ ಪೈಸೆ ಪರಿಹಾರ ನೀಡುವ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ.

ತಮ್ಮ ವಿರೋಧದ ನಡುವೆಯೂ ಮುಖ್ಯಮಂತ್ರಿಯಾಗಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರತಿ ಹಂತದಲ್ಲೂ ಸಾರ್ವಜನಿಕವಾಗಿ ಮುಖಭಂಗ, ಅಪಮಾನವಾಗಬೇಕು ಎಂದು ಕೇಂದ್ರದ ನಾಯಕರು ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ನಿರೀಕ್ಷಿಸಿದ್ದಷ್ಟು ಇರಲಿ ಕನಿಷ್ಠ ಮಟ್ಟದಲ್ಲೂ ಸಹಕಾರ ನೀಡುತ್ತಿಲ್ಲ. ಹೀಗೆ ಬಿಜೆಪಿ ನಾಯಕರ ನಡುವಣ ಆಂತರಿಕ ರಾಜಕೀಯ ಪ್ರತಿಷ್ಠೆಯ ಕದನ ಪಾಪ ಪ್ರವಾಹ ಸಂತ್ರಸ್ತರು ಕಣ್ಣು ಬಾಯಿ ಬಿಡುವಂತಹ ಪರಿಸ್ಥಿತಿಗೆ ನೂಕಿದೆ.

Leave a Reply