ಬೈ ಎಲೆಕ್ಷನ್​ ಗುನ್ನಾ ಬಿದ್ದಿದಾದ್ರು ಯಾರಿಗೆ?

ಡಿಜಿಟಲ್ ಕನ್ನಡ ಟೀಮ್:

ಉಪ ಚುನಾವಣೆ ಎಂಬ ಗುನ್ನಾ ಅನರ್ಹ ಶಾಸಕರಿಗೆ ಸರಿಯಾದ ಹೊಡೆತವನ್ನೇ ಕೊಟ್ಟಿದ್ದು, ಕಂಗಾಲಾಗುವಂತೆ ಮಾಡಿದೆ. ಪರಿಣಾಮ ದೋಸ್ತಿ ಸರ್ಕಾರ ಬೀಳಿಸಲು ತಾವು ಮಾಡಿದ್ದು ತ್ಯಾಗವಲ್ಲ ತಪ್ಪು ಎಂದು ಮನವರಿಕೆಯಾಗಿ ಕೊರಗುತ್ತಿದ್ದಾರೆ. ಇನ್ನು ಈ ಗುನ್ನಾ ಕೇವಲ ಅನರ್ಹರಿಗೆ ಮಾತ್ರವಲ್ಲ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೂ ಬಿದ್ದಿದೆ. ಅದು ಹೇಗೆ ಅಂದ್ರೆ…

ಕಾಂಗ್ರೆಸ್​, ಜೆಡಿಎಸ್​ನ 17 ಮಂದಿ ಶಾಸಕರು ಮೈತ್ರಿ ಸರ್ಕಾರದಿಂದ ಹೊರ ಬರುವಾಗ ಬಿಜೆಪಿ ಕೊಟ್ಟಿದ್ದ ಆಶ್ವಾಸನೆಗಳು ಕಸದ ಬುಟ್ಟಿ ಸೇರಿವೆ. ಯಾವ ಬೇಡಿಕೆಗಳು ಈಡೇರಿಲ್ಲ. ಬಿಎಸ್​ ಯಡಿಯೂರಪ್ಪ ಕೆಲವೊಂದಿಷ್ಟು ಅನುದಾನ ಕೊಟ್ಟಿದ್ದು ಬಿಟ್ಟರೆ, ಅನರ್ಹತೆಯಿಂದ ಹೊರ ಬರಲು ಯಾವುದೇ ಸಹಾಯ ಸಿಕ್ಕಿಲ್ಲ. ಯಾವುದೇ ಒತ್ತಡ ಇಲ್ಲದಿದ್ದರೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆಗೆ ಆದರೂ ಬರುತ್ತಿತ್ತು. ಆದ್ರೆ ಅನರ್ಹರು ಅರ್ಜಿ ಸಲ್ಲಿಸಿದ್ರೂ ಇಲ್ಲೀವರೆಗೂ ವಿಚಾರಣೆಗೆ ಬಂದಿಲ್ಲ. ಈ ವಾರ ವಿಚಾರಣೆಗೆ ಬಂದರೂ ನ್ಯಾಯಮೂರ್ತಿ ಒಬ್ಬರು ವಿಚಾರಣೆಯಿಂದ ಹಿಂದೆ ಸರಿದ ಕಾರಣ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಈ ಮುಂದೂಡಿಕೆ ಆಗಿರುವ ಬೆನ್ನಲ್ಲೇ ಬಿರುಗಾಳಿಯಂತೆ ಉಪ ಚುನಾವಣೆ ಬಂದು ನಿಂತಿದೆ.

ಆಪರೇಷನ್​ ಕಮಲ ಮಾಡಿದ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಹೈಕಮಾಂಡ್​ ಆಯ್ಕೆ ಮಾಡಿದ್ರೆ ಕೇಳಿಕೊಂಡಾಗ ಉಪಚುನಾವಣೆ ಎದುರಾಗ್ತಿತ್ತು. ಆದ್ರೆ ಸಿಎಂ ಆಯ್ಕೆಯಲ್ಲೇ ಬಿಎಸ್​ ಯಡಿಯೂರಪ್ಪ, ಹೈಕಮಾಂಡ್​ ಮಾತಿಗೆ ಸಡ್ಡು ಹೊಡೆದಿದ್ರಿಂದ ತಿರುಗಿ ಬಿದ್ದ ಹೈಕಮಾಂಡ್​ನ ದಿಲ್ಲಿ ನಾಯಕರು, ಹೊಸದಾಗಿ ಚುನಾವಣೆಗೆ ಹೋಗಲು ತಯಾರಿ ನಡೆಸಿದ್ದಾರೆ. ಅನರ್ಹ ಶಾಸಕರು ಸ್ಪೀಕರ್​ ಆದೇಶದಿಂದ ಪಾರಾಗುವುದು ಹೈಕಮಾಂಡ್​ಗೆ ಬೇಕಿಲ್ಲ. ಅವರು ಹೊಸದಾಗಿ ಚುನಾವಣೆಗೆ ನಿಲ್ಲುವುದೂ ಬೇಕಿಲ್ಲ. ಸರ್ಕಾರ ಬಿದ್ದರೂ ಬಿಜೆಪಿ ಹೈಕಮಾಂಡ್​ ಆಗಬೇಕಿರುವುದು ಏನೂ ಇಲ್ಲ. ಹಾಗಾಗಿ ಹೈಕಮಾಂಡ್​ ರಾಜ್ಯ ಸರ್ಕಾರಕ್ಕೆ ಸಣ್ಣ ಸುಳಿವು ನೀಡದೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಒಂದೇ ಒಂದು ಸುಳಿವು ಸಿಕ್ಕಿದ್ದರೂ ಬಿಎಸ್​ ಯಡಿಯೂರಪ್ಪ ಅಲರ್ಟ್​ ಆಗ್ತಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಚುನಾವಣೆ​ಗೆ ಸಕಲ ತಯಾರಿ ಮಾಡಿಕೊಳ್ತಿದ್ರು. ಆದ್ರೆ ಎಲ್ಲವೂ ಗುಪ್ತ್​ ಗುಪ್ತ್​.

ಹೈಕಮಾಂಡ್​ ಉರುಳಿಸಿದ ದಾಳದಿಂದ ರಾಜ್ಯ ಸರ್ಕಾರ ಬಿದ್ದು ಹೋಗೋದು ಕನ್ಫರ್ಮ್​. ಈಗಾಗಲೇ ಅನರ್ಹ ಶಾಸಕರು ನಾವು ಚುನಾವಣೆಗೆ ಸಿದ್ಧವಾಗಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್​ನಿಂದ ಚುನಾವಣೆಗೆ ತಡೆಯಾಜ್ಞೆ ತರೋಣ ಎಂದು ಸದ್ಯಕ್ಕೆ ಸಮಾಧಾನ ಮಾಡಿದ್ದಾರೆ. ಆದ್ರೆ ಚುನಾವಣಾ ಆಯೋಗದ ನಿರ್ಧಾರಕ್ಕೆ ಸುಪ್ರೀಂ ಎಂಟ್ರಿಯಾಗುವ ಸಾಧ್ಯತೆಯೇ ಇಲ್ಲ. ಒಂದು ವೇಳೆ ಸುಪ್ರೀಂನಲ್ಲಿ ತಡೆ ಸಿಗದಿದ್ರೆ ಚುನಾವಣೆ ಸ್ಪರ್ಧೆ ಮಾಡಲು ಅವಕಾಶ ಕೋರೋಣ ಎಂದು ಬಿಎಸ್​ವೈ ಪ್ಲ್ಯಾನ್​ ಬಿ ಕೊಟ್ಟಿದ್ದಾರೆ. ಆದ್ರೆ ಈಗಾಗಲೇ ಅನರ್ಹರ ವಿಚಾರದಲ್ಲಿ ಸಿದ್ದರಾಮಯ್ಯ ಕೇವಿಯೇಟ್​ ಹಾಕಿಕೊಂಡಿದ್ದು, ಯಾವುದೇ ತೀರ್ಮಾನ ಮಾಡುವ ಮುನ್ನ ನಮ್ಮ ವಾದ ಕೇಳಬೇಕು ಎಂದು ಮನವಿ ಮಾಡಿಕೊಂಡಿರೋದ್ರಿಂದ ತಾತ್ಕಾಲಿಕ ರಿಲೀಫ್​ ಕಷ್ಟ ಸಾಧ್ಯ. ಒಂದು ವೇಳೆ ವಿಚಾರಣೆ ಒಂದು ವಾರ ಮುಂದೂಡಿಕೆ ಆದ್ರೆ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶ ತಪ್ಪಿ ಹೋಗಲಿದೆ. ಆಗ ಅನರ್ಹರು ಸ್ಪರ್ಧೆ ಮಾಡಲ್ಲ, ಬೇರೆಯವರು ನಿಂತಾಗ ಗೆಲ್ಲೋದು ಕಷ್ಟ. ಆಗ ಸರ್ಕಾರ ಬಿದ್ದು ಹೋಗುವುದು ಪಕ್ಕಾ. ಬಿಜೆಪಿ ಹೈಕಮಾಂಡ್​ಗೆ ಬೇಕಿರುವುದೂ ಅದೇ. ಎಷ್ಟೇ ರದ್ದಾಂತ ಆದರೂ ಅನರ್ಹರು ಮುಳುಗುವ ದೋಣಿಯಲ್ಲಿದ್ದಾರೆ. ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.

Leave a Reply