ಇವತ್ತು ಸುಪ್ರೀಂಕೋರ್ಟ್‌ನಲ್ಲಿ ಅನರ್ಹರ ಹಣೇಬರಹ ಏನಾಗುತ್ತೆ?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಕೈಗೊಂಡ ಅನರ್ಹತೆ ನಿರ್ಧಾರ ಸರಿಯಲ್ಲ, ಆ ನಿರ್ಧಾರಕ್ಕೆತಡೆ ಕೊಡಬೇಕು ಎಂದು ಕೋರಿರುವ 17 ಅನರ್ಹ ಶಾಸಕರ ಅರ್ಜಿ ವಿವಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಬರಲಿದೆ. ಈಗಾಗಲೇ ಉಪಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಮಧ್ಯಂತರ ತಡೆಯಾಜ್ಞೆಗೆ ಮನವಿ ಮಾಡಲು ಅನರ್ಹ ಶಾಸಕರು‌ ನಿರ್ಧಾರ ಮಾಡಿದ್ದಾರೆ. ಆದರೆ ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸುತ್ತಾ ಅಥವಾ ತಿರಸ್ಕರಿಸುತ್ತಾ ಎಂಬುದೇ ಸದ್ಯ ಕುತೂಹಲ ಮೂಡಿಸಿರುವ ಪ್ರಶ್ನೆ.

ಕಳೆದ ವಾರ ಸುಪ್ರೀಂಕೋರ್ಟ್‌ನಲ್ಲಿ ರಚನೆಯಾಗಿದ್ದ ತ್ರಿಸದಸ್ಯ ಪೀಠದಿಂದ ಓರ್ವ ನ್ಯಾಯಮೂರ್ತಿ ಹಿಂದೆ ಸರಿದ ಕಾರಣ, ಅರ್ಜಿ ವಿಚಾರಣೆ ಇಂದಿಗೆ ಮುಂದೂಡಿಕೆಯಾಗಿದೆ‌. ಹಾಗಾಗಿ ಇಂದು ಹೊಸ ಪೀಠ ರಚನೆಯಾಗಲಿದೆ. ಕಾಂಗ್ರೆಸ್, ಜೆಡಿಎಸ್‌ನ‌ 17 ಮಂದಿ ಶಾಸಕರ ಅನರ್ಹತೆ ವಿಚಾರವನ್ನು ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ  ಪೀಠ ವಿಚಾರಣೆ ನಡೆಸಲಿದೆ. ಈ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಮುರಳಿ ಹಾಗೂ‌ ನ್ಯಾಯಮೂರ್ತಿ ಸಂಜಯ್ ಖನ್ನಾ ಸಹ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಬೆಳಗ್ಗೆ 11.30ಕ್ಕೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ನಿಗದಿ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಇಂದೇ ಇತ್ಯರ್ಥ ಮಾಡುವಂತೆ ಮನವಿ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಸಾಮಾಜಿಕ ನ್ಯಾಯ ಪಾಲನೆ ಮಾಡಿಲ್ಲ ಎನ್ನುವುದು ಅನರ್ಹರ ಪ್ರಮುಖ ಆರೋಪವಾಗಿದೆ. ನ್ಯಾಯವಾದಿ ಮುಕುಲ್ ರೋಹ್ಟಗಿ ಅನರ್ಹ ಶಾಸಕರ ಪರ ವಾದ ಮಂಡಿಸಲಿದ್ದಾರೆ.

ಈಗಾಗಲೇ ತಮ್ಮನ್ನೂ ಪ್ರಕರಣದ ಭಾಗಿದಾರರನ್ನಾಗಿ ಮಾಡಿಕೊಳ್ಳುವಂತೆ ಕೆಪಿಸಿಸಿ ಮನವಿ ಮಾಡಿಕೊಂಡಿದ್ದು ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡನೆ ಮಾಡಲಿದ್ದಾರೆ. ಅನರ್ಹ ಶಾಸಕರ ವಾದಕ್ಕೆ ಪ್ರಮಾಣಪತ್ರ ಸಲ್ಲಿಸಲು ಕಪಿಲ್ ಸಿಬಲ್ ಕಾಲವಕಾಶ ಕೇಳುವ ಸಾಧ್ಯತೆ ಹೆಚ್ಚಾಗಿದೆ. ಯಾವುದೇ ವಕೀಲರು ಕಾಲಾವಕಾಶ ಕೇಳಿದಾಗ ಒಂದೆರಡು ದಿನಗಳ ಕಾಲಾವಕಾಶ ಕೊಡುವುದು ಸಾಮಾನ್ಯ ಆದ್ರೆ ಈ ಪ್ರಕರಣದಲ್ಲಿ ಉಪ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದೊಳಗೆ ಸಲ್ಲಿಸಿ, ಮತ್ತೆ ವಿಚಾರಣೆ ನಡೆಸೋಣ ಎಂದರೂ ಅಚ್ಚರಿಯಿಲ್ಲ.

ಈಗಾಗಲೇ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ಸಿಎಂ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರೋದು ಪರಿಣಾಮ ಬೀರಲಿದ್ಯಾ ಅನ್ನೋ ಚರ್ಚೆ ಶುರುವಾಗಿದೆ. ಈ ವಿಚಾರದಲ್ಲಿ‌ ಮಾಜಿ ಕುಮಾರಸ್ವಾಮಿ ನೇರವಾಗಿಯೇ ಆರೋಪ ಮಾಡಿದ್ದು, ಪ್ರವಾಹದ ಹಣ ಕೇಳಲು ದೆಹಲಿಗೆ ಹೋಗಲು ಸಮಯವಿಲ್ಲದ ಸಿಎಂ ಯಡಿಯೂರಪ್ಪ, ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಆಪರೇಷನ್ ಕಮಲಕ್ಕೆ ಬಲಿಯಾಗಿ ಅನರ್ಹ ಆಗಿರುವ ಶಾಸಕರ  ರಕ್ಷಣೆಗಾಗಿ ದೆಹಲಿಗೆ ತೆರಳಿರುವುದು ಅಪರಾಧ. ಅಮಿತ್ ಶಾ ಪ್ರಬಾವ ಬಳಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಟ್ವೀಟ್ ಮಾಡಿ ಕೆಂಡಕಾರಿದ್ದಾರೆ‌. ಇಂದು ರಿಲೀಫ್ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದ್ದು, ತಡೆಯಾಜ್ಞೆ ಸಿಕ್ಕಿಬಿಟ್ಟರೆ ಅಚ್ಚರಿಯೇ ಸರಿ.

Leave a Reply