ಸಂಚಾರಿ ದಂಡ ಏರಿಕೆ ನಂತರ ಗುಜರಿ ಕಾಯ್ದೆ ಮೇಲೆ ಸಚಿವ ನಿತಿನ್ ಗಡ್ಕರಿ ಕಣ್ಣು!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ರಸ್ತೆ ಸಾರಿಗೆ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಸಂಚಾರಿ ನಿಯಮ ಪಾಲನೆ ಮಾಡಲು ದುಬಾರಿ ಶುಲ್ಕದ ಬರೆ ಎಳೆದಿದ್ದ ನಿತಿನ್ ಗಡ್ಕರಿ ಈಗ ಪರಿಸರದ ಮೇಲೆ ಪರಿಣಾಮ ಬೀರುವ ಹಳೆಯ ವಾಹನಗಳ ನಿಷೇಧಕ್ಕೆ ನಿರ್ಧರಿಸಿದ್ದಾರೆ.

ಹೌದು, ಕೇಂದ್ರ ಸರ್ಕಾರದ ಈ ನೂತನ ಕಾಯ್ದೆ ಪ್ರಕಾರದ 15 ವರ್ಷದ ಪೆಟ್ರೋಲ್​​ ಮತ್ತು 10 ವರ್ಷದ ಡೀಸೆಲ್​​​​ ವಾಹನಗಳ ಮೇಲೆ ನಿರ್ಬಂಧ ಹೇರಲಾಗುವುದು ಎನ್ನಲಾಗಿದೆ. ಜಾರಿಗೆ ತರಬೇಕೆಂದಿರುವ ಗುಜರಿ ಕಾಯ್ದೆ ಕುರಿತಂತೆ ಈಗಾಗಲೇ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ವರದಿ ತಯಾರಿಸಿ ಅದನ್ನು ಪ್ರಧಾನಿ ಕಾರ್ಯಾಲಯ ಮತ್ತು ರಾಷ್ಟ್ರಪತಿಗಳ ಕಾರ್ಯಾಲಯಕ್ಕೆ ಕಳಿಸಲಾಗಿದೆ.

ಪ್ರಸ್ತುತ ಈ ಕಾಯ್ದೆಗೆ ಹಣಕಾಸು ಸಚಿವಾಲಯದಿಂದ ಮಾತ್ರ ಹಸಿರು ನಿಶಾನೆ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಅನುಮತಿ ಸಿಕ್ಕ ನಂತರ ಕಾಯ್ದೆ ಜಾರಿಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಇನ್ನು ದೇಶದಲ್ಲಿ ಏಕ ಮಾದರಿಯ ಡಿಎಲ್​​ ಮತ್ತು ಆರ್​​ಸಿ ಪತ್ರವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ತಿಂಗಳು ಅಕ್ಟೋಬರ್​​​​ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಲಾಗಿತ್ತು. ಡಿಎಲ್​​ ಮತ್ತು ಆರ್​​ಸಿ ಪತ್ರವನ್ನು ಒಂದೇ ರೀತಿಯಾಗಿ ಮುದ್ರಿಸಲಾಗುವುದು. ಹಳೆಯ ವಿನ್ಯಾಸ, ಮುದ್ರಣ ಶೈಲಿ ಎಲ್ಲವೂ ಬದಲಾಗಲಿವೆ. ಅಂತೆಯೇ ಎರಡೂ ದಾಖಲೆಗಳಲ್ಲೂ ಮೈಕ್ರೋಚಿಪ್‌ ಮತ್ತು ಕ್ಯೂ ಆರ್‌ ಕೋಡ್‌ ಅಳವಡಿಸಲಾಗುವುದು. ಈಗಾಗಲೇ ರಾಜ್ಯದ ಎಲ್ಲಾ ಟ್ರಾಫಿಕ್​​ ಪೊಲೀಸ್​​ ಠಾಣೆಗಳಿಗೆ ಟ್ರ್ಯಾಕಿಂಗ್‌ ಉಪಕರಣ ನೀಡಲಾಗಿದೆ. ಈ ಟ್ರ್ಯಾಕಿಂಗ್​​​ ಉಪಕರಣದ ಮೂಲಕ ಪೊಲೀಸರು ಯಾವುದೇ ವಾಹನದ ಮಾಹಿತಿಯನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ಮೂಲಗಳು ಹೇಳಿವೆ.

Leave a Reply