ಅನರ್ಹರ ಕಟ್ಟಿಹಾಕಲು ತಂತ್ರಗಾರಿಕೆ..! ಸುಪ್ರೀಂ ಬರೆಯೋ ಹಣೆಬರಹ ಹೇಗಿರುತ್ತೆ?

ಡಿಜಿಟಲ್ ಕನ್ನಡ ಟೀಮ್:

ಅನರ್ಹರ ಭವಿಷ್ಯ ಏನಾಗುತ್ತೆ ಎಂಬುದೇ ಸದ್ಯ ಎಲ್ಲರಲ್ಲೂ ಕುತೂಹಲ ಕೆರಳಿಸಿರೋ ವಿಚಾರ. ಗುರುವಾರ ಸುಪ್ರೀಂ ಕೋರ್ಟ್ ಅನರ್ಹರ ಹಣೆಬರಹ ಬರೆಯಲಿದ್ದು, ಹಣೆಬರಹ ಯಾವ ರೀತಿ ಇರುತ್ತದೆ ಎಂಬುದು ರೋಚಕತೆ ಸೃಷ್ಟಿಸಿದೆ.

ಸದ್ಯದ ಮಟ್ಟಿಗೆ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಪರವಾಗಿ ತೀರ್ಪು ಬರುವ ಯಾವುದೇ ಸಾಧ್ಯತೆಗಳೂ ಕಾಣುತ್ತಿಲ್ಲ. ಸೋಮವಾರ ನಡೆದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಪರವಾಗಿ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಎಲ್ಲಾ ಆಯಾಮಗಳಲ್ಲೂ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ರು. ಆದ್ರೆ ಕರ್ನಾಟಕ ಕಾಂಗ್ರೆಸ್ ಸಮಿತಿ ಪರವಾಗಿ ಹಾಜರಾಗಿದ್ದ ವಕೀಲ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಎದುರು ಪ್ರಬಲವಾಗಿ ಆಕ್ಷೇಪಣೆ ಸಲ್ಲಿಸಿದ್ರು. ಆನಂತರ ಚುನಾವಣಾ ಆಯೋಗದ ಪರವಾಗಿ ಅಭಿಪ್ರಾಯ ಸಲ್ಲಿಕೆಯಾದರೂ ಕಾಂಗ್ರೆಸ್ ಪರ ವಕೀಲರು ಅಡ್ಡಿ ಮಾಡಿದ್ರು. ಚುನಾವಣಾ ಆಯೋಗ ಈ ಪ್ರಕರಣದಲ್ಲಿ ಭಾಗಿದಾರ ಅಲ್ಲದ ಕಾರಣ ತಾವು ಕೋರ್ಟ್‌ನಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಸಾರಾಸಗಟಾಗಿ ಉತ್ತರಿಸಿದರು. ನಾವು ಬಾಗಿದಾರ ಆಗಲು ಸಿದ್ಧರಿದ್ದೇವೆ ಎಂದರೂ ಕೋರ್ಟ್‌ನಲ್ಲಿ ಅವಕಾಶ ಸಿಗಲಿಲ್ಲ.

ತಮಿಳುನಾಡಿನಲ್ಲಿ ಅನರ್ಹರಾದ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಕಳೆದ ಬಾರಿ ಕೇಂದ್ರ ಚುನಾವಣಾ ಆಯೋಗವೇ ಅವಕಾಶ ನೀಡಿದ್ದು, ಕರ್ನಾಟಕದ ಅನರ್ಹ ಶಾಸಕರ ವಿಶ್ವಾಸ ವೃದ್ಧಿಸುವಂತೆ ಮಾಡಿತ್ತು. ಒಂದು ವೇಳೆ ಸ್ಪೀಕರ್ ನಮ್ಮನ್ನು ಅನರ್ಹ ಮಾಡಿ ಆದೇಶ ಮಾಡಿದರೂ ನಾವು ಚುನಾವಣೆಗೆ ಸ್ಪರ್ಧೆ ಮಾಡದಂತೆ ತಡೆಯಲು ಸಾಧ್ಯವಿಲ್ಲ. ಯಾಕಂದರೆ ಈಗಾಗಲೇ ಪಕ್ಕದ ತಮಿಳುನಾಡಿನಲ್ಲಿ ಸ್ಪೀಕರ್ ಅನರ್ಹ ಮಾಡಿ ಆದೇಶ ಹೊರಡಿಸಿದ್ದರೂ ಚುನಾವಣಾ ಆಯೋಗ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿತ್ತು. ಅದರಂತೆ ಕರ್ನಾಟಕದಲ್ಲೂ ಸಹ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ಭ್ರಮೆಯಲ್ಲಿ‌ ಸಿಲುಕಿದ್ರು. ಆದ್ರೆ ಅಸಲಿ ಕರಾಮತ್ತು ಏನಂದ್ರೆ ಸ್ಪೀಕರ್ ರಮೇಶ್ ಕುಮಾರ್ ತಮ್ಮ ತೀರ್ಪಿನಲ್ಲಿ ಕೇವಲ ಅನರ್ಹರನ್ನಾಗಿ ಮಾಡಲಾಗ್ತಿದೆ ಎಂದು ಬರೆದಿಲ್ಲೆ. ಈ ವಿಧಾನಸಭಾ ಅವಧಿ ಮುಗಿಯುವ ತನಕ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಹಾಗೂ ಯಾವುದೇ ಹುದ್ದೆ ಪಂಡೆಯುವಂತಿಲ್ಲ ಎಂದು ಬರೆದಿಟ್ಟಿದ್ದಾರೆ. ಇದು ಅನರ್ಹ ಶಾಸಕರಿಗೆ ದೊಡ್ಡ ಸಮಸ್ಯೆಯಾಗಿದೆ.

ಚುನಾವಣಾ ಆಯೋಗ ತಮಿಳುನಾಡಿನ ಅನರ್ಹ ಶಾಸಕರಿಗೆ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಆ ಪ್ರಕರಣದಲ್ಲಿ ಇನ್ನೂ ಕೂಡ ಫಲಿತಾಂಶ ಹೊರ ಬಂದಿಲ್ಲ. ಚುನಾವಣಾ ಆಯೋಗ ಈ ಪ್ರಕರಣದಲ್ಲೂ ಸ್ಪರ್ಧೆಗೆ ಅವಕಾಶ ಕೊಡಲು ತನ್ನದೇನು ಅಭ್ಯತಂರವಿಲ್ಲ ಎಂದಿದೆ. ಆದ್ರೆ ಶಾಸಕಾಂಗದ ಮೇಲೆ ನ್ಯಾಯಾಂಗ ದಬ್ಬಳಿಕೆ ಮಾಡಿದಂತೆ ಆಗಲಿದೆಯಾ ಅನ್ನೋದನ್ನು ಸುಪ್ರೀಂಕೋರ್ಟ್ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಕರ್ನಾಟಕದ ಅನರ್ಹರಿಗೂ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರೆ, ಸ್ಪರ್ಧಿಸಬಹುದು. ಆದ್ರೆ ತಮಿಳುನಾಡು ಪ್ರಕರಣದಲ್ಲಿ ಚುನಾವಣಾ ಆಯೋಗದ ನಿರ್ಧಾರ ತಪ್ಪೆಂದು ಸಾಬೀತಾದರೇ..? ಮತ್ತೆ ಕರ್ನಾಟಕದ ಅಷ್ಟೂ ಮಂದಿ ಶಾಸಕರು ಅನರ್ಹರಾಗ್ತಾರೆ..! ಇದೇ ಕಾರಣಕ್ಕೆ ಸ್ವತಃ ಸುಪ್ರೀಂಕೋರ್ಟ್ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಸುಧೀರ್ಘ ವಿಚಾರಣೆಗೆ ಅನುವು ಮಾಡಿಕೊಡುವ ಸಾಧ್ಯತೆಯಿದೆ.

ಒಂದು ವೇಳೆ ಸುಪ್ರೀಂ ಕೋರ್ಟ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದುಬಿಟ್ಟರೆ, ಪಕ್ಷಾಂತರ ನಿಷೇಧ ಕಾಯ್ದೆ ತಂದಿದ್ದು ವ್ಯರ್ಥವಾಗಲಿದೆ. ಯಾವುದೇ ಒಬ್ಬ ಶಾಸಕ ಗೆದ್ದಿದ್ದ ಪಕ್ಷಕ್ಕೆ ಸಪೋರ್ಟ್ ಮಾಡಿದರೂ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹ ಆಗುವುದಿಲ್ಲ. ಒಂದು ವೇಳೆ ಅನರ್ಹರನ್ನಾಗಿ ಮಾಡಿದರೂ ಮತ್ತೊಮ್ಮೆ ಚುನಾವಣೆಗೆ ನಿಂತು ಗೆದ್ದು ಬರ್ತೇನೆ ಎಂದು ಸ್ಪೀಕರ್‌ಗೆ ಸವಾಲು ಹಾಕುವುದಿಲ್ಲವೇ..? ಎನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ.

ಇದು ಬಿಜೆಪಿಗೆ ಯಾವುದೇ ನಷ್ಟವಿಲ್ಲ. ನಾವು ನಮ್ಮ ಕೈಮೀರಿ ಸಹಾಯ ಮಾಡಲು ಯತ್ನಿಸಿದೆವು. ಆದರೆ ಕೋರ್ಟ್ ತೀರ್ಪು ನಮ್ಮ ಪರವಾಗಿ ಬರುತ್ತದೆ ಎನ್ನುವ ಭರವಸೆ ಹುಸಿಯಾಯ್ತು ಎನ್ನುವ ಕಾರಣದಿಂದ ಈ ಬಾರಿಯ ಟಿಕೆಟನ್ನು ಬೇರೆಯವರು ಅಥವಾ ಅನರ್ಹ ಶಾಸಕರು ಹೇಳಿದವರಿಗೆ ನೀಡುವ ಸಾಧ್ಯತೆಯಿದೆ. ಈ ಮೂಲಕ ಪಕ್ಷಾಂತರ ಮಾಡಿ ಮತದಾರನನ್ನು ಮುಜುಗರಕ್ಕೆ ಈಡುಮಾಡಿದ ಕೋಪ ಅನರ್ಹರ ಮೇಲೆ ಬೀಳದಂತೆ ಬಿಜೆಪಿ ತಂತ್ರಗಾರಿಕೆ ಮಾಡುತ್ತಿದೆ. ತನ್ನ ಪಕ್ಷದ ಅಭ್ಯರ್ಥಿಗಳನ್ನು ಕೆಲವು ಕ್ಷೇತ್ರಗಳಲ್ಲಿ ನಿಲ್ಲಿಸುವ ಎಲ್ಲಾ ಪ್ರಯತ್ನಗಳ ನಡೆದಿವೆ. ಒಂದು ವಾರ ವಿಚಾರಣೆ ಮುಂದೂಡಿಕೆಯಾದರೆ ತಮ್ಮ ಎಲ್ಲಾ ಯೋಜನೆಗಳು ಸಕ್ಸಸ್ ಎನ್ನುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.

Leave a Reply