ಎಂಟಿಬಿಗೆ ಟಿಕೆಟ್ ಕೊಟ್ರೆ ಸೋಲು ಖಚಿತ! ಸಿಎಂಗೆ ಕಾರ್ಯಕರ್ತರ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್:

ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಣೆ ಆಗಿದ್ದು, ಶರತ್ ಬಚ್ಚೇಗೌಡ ಪಕ್ಷೇತರ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಆಪ್ತರ ಜೊತೆ ಶರತ್ ಬಚ್ಚೇಗೌಡ ಸಭೆ ನಡೆಸಿದ್ದು, ಅಭಿಪ್ರಾಯ ಸಂಗ್ರಹ ಮಾಡುವ ಕೆಲಸ ಮಾಡಿದ್ದಾರೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್​ಗೆ ಬಿಜೆಪಿ ಟಿಕೆಟ್​ ಕೊಡೋದು ಕನ್ಫರ್ಮ್​ ಆಗ್ತಿದ್ದ ಹಾಗೆ, ಶರತ್ ಬಚ್ಚೇಗೌಡ ಸೆಡ್ಡು ಹೊಡೆಯುವ ಸಿದ್ಧತೆ ಮಾಡಿಕೊಳ್ತಿದ್ದಾರೆ. ಇನ್ನು ಈ ಬಾರಿ ಪಕ್ಷದ ಟಿಕೆಟ್ ಎಂಟಿಬಿ ನಾಗರಾಜ್ ಅವರಿಗೆ ನೀಡಿದ್ದೇ ಆದರೆ ಪಕ್ಷಕ್ಕೆ ಸೋಲು ಖಚಿತ ಎಂದು ಕಾರ್ಯಕರ್ತರು ಸಿಎಂ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಹೊಸಕೋಟೆ ಕ್ಷೇತ್ರದಿಂದ ಶರತ್ ಸ್ಪರ್ಧೆ ಮಾಡುವ ಬಗ್ಗೆ ಇನ್ನು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಬಿಜೆಪಿ ಸಂಸದ ಹಾಗೂ ಶರತ್​ ತಂದೆ ಬಿ.ಎನ್​ ಬಚ್ಚೆಗೌಡ ಹೇಳಿದ್ದಾರೆ. ಆದ್ರೆ ಸಿಎಂ ಬಿಎಸ್ ಯಡಿಯೂರಪ್ಪ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ 3 ದಿನ ಕಾಯುವಂತೆ ಹೇಳಿದ್ದಾರೆ. ತೀರ್ಪು ಬಳಿಕ ತೀರ್ಮಾನಿಸೋಣ ಎಂದು ಹೇಳಿದ್ದಾರೆ. 3 ದಿನದ ಬಳಿಕ ಶರತ್ ಸ್ಪರ್ಧೆ ಬಗ್ಗೆ ಅಂತಿಮ ನಿರ್ಧಾರ ಮಾಡ್ತೇವೆ. ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಶರತ್ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡ್ತೇವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಶರತ್ ಸಾಕಷ್ಟು ಶ್ರಮ ಹಾಕಿದ್ದಾನೆ, ಟಿಕೆಟ್ ಕೊಡುವಂತೆ ಜನರ ಒತ್ತಾಯ ಮಾಡ್ತಿದ್ದಾರೆ ಎಂದಿದ್ದಾರೆ.

ಆದ್ರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಹೊಸಕೋಟೆಯಲ್ಲಿ ಸೋಲುವುದು ಖಚಿತ ಎಂದು ಸಿಎಂ ಬಿಎಸ್​ ಯಡಿಯೂರಪ್ಪಗೆ ಬಚ್ಚೇಗೌಡರ ಸೋದರ ಗೋಪಾಲಗೌಡ ಸಿಎಂ ಯಡಿಯೂರಪ್ಪಗೆ ನೇರವಾಗಿ ಹೇಳಿದ್ದಾರೆ.  ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಮಾತನಾಡಿರುವ ಗೋಪಾಲಗೌಡ, ಶರತ್ ಬಚ್ಚೇಗೌಡಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿದೆ. ಈ ಹಿನ್ನೆಲೆ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಬೇಡಿ ಎಂದು ಮನವಿ ಮಾಡಿದ್ದೇವೆ. ಶರತ್​ಗೆ ಟಿಕೆಟ್​ ಕೊಡದೆ ನಮ್ಮ ಕಾರ್ಯಕರ್ತರಿಗೆ ನೋವುಂಟು ಮಾಡಿದವರಿಗೆ ಈ ಬಾರಿ ಅದರ ಬೆಲೆ ಗೊತ್ತಾಗಲಿದೆ ಎಂದು ಟಂಟಿಬಿ ನಾಗರಾಜ್​ ವಿರುದ್ಧ ಕಿಡಿಕಾರಿದ್ರು. ಶರತ್​ಗೆ ಟಿಕೆಟ್​ ಕೊಡದಿದ್ರೆ, ಆ ದೇವರು ಕೂಡ ಒಪ್ಪುವುದಿಲ್ಲ. ನಮಗೆ ತೊಂದರೆ ಕೊಟ್ಟವನಿಗೆ ಈ ಬಾರಿ ಜನ ಪಾಠ ಕಲಿಸಲಿದ್ದಾರೆ ನೋಡ್ತಿರಿ ಎಂದು ಬಿಎಸ್​ ಯಡಿಯೂರಪ್ಪಗೆ ಹೇಳಿದ್ದೇನೆ ಎಂದಿದ್ದಾರೆ. ಈ ಬಾರಿ ಶರತ್ ಬಚ್ಚೇಗೌಡ ಸ್ಪರ್ಧಿಸೋದು ಸತ್ಯ, ಅವನು ಗೆಲ್ಲೋದು ಕೂಡ ಸತ್ಯ ಎಂದು ಶಪಥ ಮಾಡಿದ್ದಾರೆ ಗೋಪಾಲಗೌಡ. ಈ ನಡುವೆ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಪರ ಬಿಜೆಪಿ ಸಂಸದ ಮುನಿಸ್ವಾಮಿ ಬ್ಯಾಟಿಂಗ್ ಮಾಡಿದ್ದು, ಹೊಸಕೋಟೆ ಕ್ಷೇತ್ರದಲ್ಲಿ MTB ನಾಗರಾಜ್​ಗೆ ಬಿಜೆಪಿ ಟಿಕೆಟ್ ಪೈನಲ್ ಎಂದಿದ್ದಾರೆ.

ಹೊಸಕೋಟೆಯಲ್ಲಿ ಬಿಜೆಪಿ ಪ್ರಬಲವಾಗಿದೆ. ಕಾಂಗ್ರೆಸ್​ ಅಬ್ಬರದಲ್ಲಿ ಕಳೆದು ಹೋಗಿದ್ದ ಪಕ್ಷವನ್ನು ಪ್ರಬಲವಾಗಿ ಕಟ್ಟುವಲ್ಲಿ ಶರತ್​ ಬಚ್ಚೇಗೌಡರ ಶ್ರಮ ಇಲ್ಲ ಎನ್ನಲಾಗದು. ಇದೀಗ ಎಂಟಿಬಿ ನಾಗರಾಜ್​, ಕಮಲಪಡೆ ಸೇರಿರೋದ್ರಿಂದ ಶರತ್​ ತನ್ನ ರಾಜಕೀಯ ಹಾದಿ ನೋಡಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ಈ ಬಾರಿ ಪಕ್ಷೇತರನಾಗಿ ಸ್ಪರ್ಧೆ ಮಾಡಿ ತನ್ನ ತಾಕತ್​ ಏನು ಎನ್ನುವುದನ್ನು ತೋರಿಸಬೇಕಿದೆ. ಒಂದು ವೇಳೆ ಶರತ್​​ ಗೆಲುವು ಸಾಧಿಸಿದ್ರೆ ಮತ್ತೆ ಬಿಜೆಪಿಗೆ ಸೇರಬಹುದು. ಒಂದು ವೇಳೆ ಎಂಟಿಬಿ ನಾಗರಾಜ್​ ಎದುರು ಪಕ್ಷೇತರನಾಗಿ ಸೋತರೂ ಮುಂದೆ ಬೇರೊಂದು ಪಾರ್ಟಿ ಸೇರಿ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡಬಹುದ. ಆದ್ರೆ ಎಂಟಿಬಿ ನಾಗರಾಜ್​ಗೆ ಟಿಕೆಟ್​ ಕೊಟ್ಟರೂ ಬಿಜೆಪಿಯಲ್ಲೇ ಉಳಿದುಕೊಂಡು ಗೆಲ್ಲಲು ಸಹಕಾರ ನೀಡಿದ್ರೆ, ಇನ್ಮುಂದೆ ಹೊಸಕೋಟೆಯಲ್ಲಿ ಹಣಬಲ ಹೊಂದಿರುವ ಎಂಟಿಬಿ ನಾಗರಾಜ್​ ನೆರಳಲ್ಲೇ ಇರಬೇಕು ಎನ್ನುವುದು ಬಚ್ಚೇಗೌಡ ಕುಟುಂಬಸ್ಥರ ಅಳಲಾಗಿದೆ. ಆದ್ರೆ ಬಿಎಸ್​ ಯಡಿಯೂರಪ್ಪ ಭಾವನಾತ್ಮಕವಾಗಿ ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಯತ್ನ ಮಾಡ್ತಿದ್ದು, ಒಂದು ವೇಳೆ ಶರತ್​ಗೆ ಟಿಕೆಟ್​ ಸಿಗದಿದ್ರೆ, ಯಾವುದೇ ಕಾರಣಕ್ಕೂ ಹೊಸಕೋಟೆ ರಾಜಕೀಯದಲ್ಲಿ ಎಂಟಿಬಿ ನಾಗರಾಜ್​ ಗೆಲುವು ಅಸಾಧ್ಯ ಎನ್ನುತ್ತಿದೆ ರಾಜಕೀಯ ಲೆಕ್ಕಾಚಾರ.

Leave a Reply