ಡಿಕೆಶಿ ಜಾಮೀನು ಅರ್ಜಿ ವಜಾ..! ಮುಂದಿರುವ ಆಯ್ಕೆಗಳೇನು..?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರಿಗೆ ದೆಹಲಿಯ ಇಡಿ ಕೊರ್ಟ್ ರಿಲೀಫ್ ನೀಡಿಲ್ಲ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಕಾಯ್ದಿರಿಸಲಾಗಿತ್ತು. ತೀರ್ಪು ಪ್ರಕಟಕ್ಕೆ ಮೂರೂವರೆಗೆ ಸಮಯ ನಿಗದಿಯಾಗಿದ್ದರೂ ಕೋರ್ಟ್‌ಗೆ ಜಡ್ಜ್ ಆಗಮಿಸಿರಲಿಲ್ಲ. ಕೋರ್ಟ್ ಆವರಣಕ್ಕೆ ಬಂದಿದ್ದ ನ್ಯಾಯಾಧೀಶರು, ಕೋರ್ಟ್ ಹಾಲ್‌ಗೆ ಬಾರದೆ ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿ ಮಾಡಿದ್ರು. ಆ ಬಳಿಕ ಸಂಜೆ 5 ಗಂಟೆಗೆ ಪೀಠಕ್ಕೆ ಆಗಮಿಸಿದ ನ್ಯಾಯಾಧೀಶರು, ಜಾಮೀನು ಅರ್ಜಿ ತಿರಸ್ಕರಿಸಿದ ತೀರ್ಪನ್ನು ಓದಿ ನಿರ್ಗಮಿಸಿದರು.

ಡಿಕೆ ಶಿವಕುಮಾರ್ ಅವರಿಗೆ ಇಂದು ಜಾಮೀನು ಸಿಗುತ್ತದೆ ಎಂದು ಕೋರ್ಟ್ ಬಳಿ ನೂರಾರು ಅಭಿಮಾನಿಗಳು ಆಗಮಿಸಿದ್ದರು. ಆದ್ರೆ ಜಾಮೀನು ಅರ್ಜಿ ತಿರಸ್ಕಾರ ಆಗಿರುವ ಕಾರಣ ಬೇಸರದಿಂದ ತೆರಳುವಂತಾಯ್ತು. ಆದ್ರೆ ಇದೀಗ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಲು ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶವಿದೆ‌. ಇಂದು ಇಡಿ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕಾರವಾದರೆ ಹೈಕೋರ್ಟ್‌ಗೆ ಹೋಗಲು ನಿರ್ಧಾರ ಮಾಡಲಾಗಿತ್ತು‌. ಆದ್ರೆ ಇಡಿ ಕೋರ್ಟ್ ನ್ಯಾಯಾಧೀಶರು ಕೋರ್ಟ್ ಅವಧಿ ಮುಗಿಯುವ ವೇಳೆಯಲ್ಲಿ ತೀರ್ಪು ಪ್ರಕಟ ಮಾಡಿದ್ರಿಂದ ಹೈಕೋರ್ಟ್‌ಗೆ ಹೋಗುವ ಅವಕಾಶ ನಾಳೆಗೆ ಮುಂದೂಡಿಕೆಯಾಗಿದೆ.

ಅತ್ತ ಇನ್ನೊಂದು ಕಡೆ ಇಡಿ ವಿಚಾರಣೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಜಾಗೊಂಡಿತ್ತು. ಇದೀಗ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲೂ ಕಾನೂನು ಹೋರಾಟ ಮಾಡುವ ಅವಕಾಶ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಿದೆ. ಒಂದು ವೇಳೆ ಸುಪ್ರೀಂಕೋರ್ಟ್ ವಿಚಾರಣೆ ಮಾಡೋದು ಬೇಡ, ಇಡಿ ದಾಖಲಿಸಿರುವ ಕೇಸ್ ದುರುದ್ದೇಶದಿಂದ ಕೂಡಿದೆ ಎನ್ನುವ ನಿರ್ಧಾರಕ್ಕೆ ಬಂದರೆ ಆಗಲೂ ಶಿವಕುಮಾರ್ ಅವರಿಗೆ ರಿಲೀಫ್ ಸಿಕ್ಕಂತೆ ಆಗಲಿದೆ. ಒಟ್ಟಾರೆ ದೆಹಲಿ ಹೈಕೋರ್ಟ್‌ಗೆ ನಾಳೆ ಜಾಮೀನು ಕೋತಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಇನ್ನೊಂದು ಕಡೆ ಸುಪ್ರೀಂಕೋರ್ಟ್‌ನಲ್ಲಿ ಇಡೀ ಪ್ರಕರಣವನ್ನೇ ರದ್ದು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಆದ್ರೆ ಕೋರ್ಟ್ ಯಾವ ನಿರ್ಧಾರ ಕೈಗೊಳ್ಳಲಿದೆ ಅನ್ನೋದ್ರ ಮೇಲೆ ಡಿಕೆ ಶಿವಕುಮಾರ್ ನಿರಾಳ ಸ್ಥಿತಿ ನಿಂತಿದೆ.

Leave a Reply