ಅಮಿತ್ ಶಾ ಟೀಕಿಸಿದ ವಾರದಲ್ಲೇ ಶರದ್ ಪವಾರ್ ಗೆ ಬಂಧನ ಭೀತಿ..!?

ಡಿಜಿಟಲ್ ಕನ್ನಡ ಟೀಮ್:

ಎರಡನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಬ್ಬರಾದ ಮೇಲೆ ಒಬ್ಬರಂತೆ ರಾಜಕಾರಣಿಗಳು ಜೈಲುವಾಸದ ಅನುಭವ ಪಡೆಯುತ್ತಿದ್ದಾರೆ. ಪಿ.ಚಿದಂಬರಂ, ಡಿಕೆ ಶಿವಕುಮಾರ್ ನಂತರ ಈಗ ಎನ್ ಸಿಪಿ ನಾಯಕ ಶರದ್ ಪವಾರ್ ಬಂಧನದ ಭೀತಿಗೆ ಸಿಲುಕಿದ್ದಾರೆ.

ಮುಂದಿನ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಗೆ ಅಮಿತ್ ಶಾ ಚುನಾವಣಾ ಪ್ರಚಾರ ಮಾಡಿದ್ರು. ಕಳೆದ ವಾರ ಮಹಾರಾಷ್ಟ್ರದ ಸೊಲಾಪುರದಲ್ಲಿ ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಇದಕ್ಕೆ ಎನ್‌ಸಿಪಿ ನಾಯಕ ಶರದ್ ಪವಾರ್‌ ಅದೇ ಸ್ಥಳದಲ್ಲಿ ಉತ್ತರ ಕೊಟ್ಟಿದ್ದರು.

“ನಾನು ಏನು ಮಾಡಿದ್ದೀನಿ ಎಂದು ಒಂದು ಪಕ್ಷದ ನಾಯಕರು ಕೇಳಿದ್ದಾರೆ. ಅವರಿಗೆ ನಾನು ಹೇಳು ಬಯಸುತ್ತೇನೆ. ಈ ಶರದ್ ಪವಾರ್ ಯಾವುದೇ ಕಾರಣಕ್ಕಾಗಿಯೂ ಎಂದೂ ಜೈಲಿಗೆ ಹೊಗಿಲ್ಲ. ಶರದ್ ಪವಾರ್ ಏನು ಮಾಡಿದ್ದಾರೆ ಎಂದಿರುವವರಿಗೆ ಇದೇ ನನ್ನ ಉತ್ತರ” ಹೀಗೆ ಗೃಹ ಸಚಿವರೂ ಆಗಿರುವ ಅಮಿತ್ ಶಾ ಅವರನ್ನು ಕಿಚಾಯಿಸುವ ರೀತಿಯಲ್ಲಿ ಟಾಂಗ್ ಕೊಟ್ಟಿದ್ರು. ಇದೀಗ ಜಾರಿ ನಿರ್ದೇಶನಾಲಯ ಅಖಾಡಕ್ಕೆ ಇಳಿದಿದ್ದು, ಒಂದಲ್ಲಾ ಒಂದು ಕೇಸ್‌ನಲ್ಲಿ ಸಿಲುಕಿಸಿ ಜೈಲಿಗೆ ಹೋಗೋದು ಗ್ಯಾರಂಟಿ ಎನ್ನಲಾಗ್ತಿದೆ.

ಈ ಎಲ್ಲ ಬಂಧನದ ಹಿಂದೆ ಅಮಿತ್ ಶಾ ಕೈವಾಡದ ಆರೋಪ ಕೇಳಿಬರುತ್ತಿರೋದು ವಿಶೇಷ. ಹೌದು, ಐಎನ್ಎಕ್ಸ್ ಮಿಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಹಾಗೂ ಅಕ್ರಮ ಹಣ ಸಂಪಾದನೆ ಆರೋಪದ ಮೇಲೆ ಕರ್ನಾಟಕ ಮಾಜಿ ಸಚಿವ ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದು, ತಿಹಾರ್ ಜೈಲುವಾಸ ಅನುಭವಿಸುತ್ತಿದ್ದಾರೆ. ಚಿದಂಬರಂ ಕೇಂದ್ರದಲ್ಲಿ ಗೃಹ ಮಂತ್ರಿಯಾಗಿದ್ದಾಗ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಬಂಧಿಸಿದ್ದರು ಹೀಗಾಗಿ ಪ್ರತೀಕಾರವಾಗಿ ಚಿದಂಬಂರಂ ಅವರನ್ನು ಜೈಲಿನಲ್ಲಿಡಲಾಗಿದೆ. ಇನ್ನು ಗುಜರಾತ್ ನಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಅಹ್ಮದ್ ಪಟೇಲ್ ಸೋಲಿಸುವ ಅಮಿತ್ ಶಾ ಪ್ರಯತ್ನಕ್ಕೆ ಅಡ್ಡಗೋಡೆಯಾಗಿ ನಿಂತ ಕಾರಣಕ್ಕೆ ಡಿಕೆ ಶಿವಕುಮಾರ್ ಅವರನ್ನು ಬಂಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಇದೇ ಅಮಿತ್ ಶಾ ಅವರನ್ನು ವಾರದ ಹಿಂದೆ ಟೀಕಿಸಿದ ಶರದ್ ಪವಾರ್ ಕೂಡ ಬಂಧನವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶರದ್​ ಪವಾರ್​ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಮಾಡಲಾಗಿದೆ. ಕಳೆದ ತಿಂಗಳು ಬಾಂಬೆ ಹೈಕೋರ್ಟ್​ ಸೂಚನೆ ಮೇರೆಗೆ ಮುಂಬೈ ಪೊಲೀಸ್ರು ಶರದ್ ಪವಾರ್ ಅಳಿಯ ಮಾಜಿ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಸೇರಿ‌ ಸಾಕಷ್ಟು ಜನರ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಳ್ಳಲಾಗಿತ್ತು. ಎಫ್‌ಐಆರ್‌ನಲ್ಲಿ ಶರದ್ ಪವಾರ್ ಹೆಸರು ಉಲ್ಲೇಖವಾಗಿಲ್ಲ, ಆದರೂ ಇದೀಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್​ ಹಗರಣದಲ್ಲಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಅನ್ನೋ ಕಾರಣಕ್ಕೆ ಕೇಸ್​‌ನಲ್ಲಿ ಇಡಿ ಎಂಟ್ರಿಯಾಗಿದೆ. 2007 ರಿಂದ 2011ರ ಅವಧಿಯಲ್ಲಿ 25 ಸಾವಿರ ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಹೇಳಲಾಗ್ತಿದೆ.

 ಆದ್ರೆ, ಈ ಬಗ್ಗೆ ಮಾತನಾಡಿರುವ ಶರದ್ ಪವಾರ್, ನಾನು ಯಾವುದೇ ತಪ್ಪು ಮಾಡಿಲ್ಲ, ಹೆದರುವ ಪ್ರಶ್ನೆಯೇ ಇಲ್ಲ‌. ಎಫ್ ಐ ಆರ್‌ನಲ್ಲೂ ನನ್ನ ಹೆಸರಿಲ್ಲ. ಆದರೂ ನನ್ನ ವಿರುದ್ಧ ತನಿಖೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಚುನಾವಣೆ ವೇಳೆ ಈ ರೀತಿ ಮಾಡುವುದರಿಂದ ಅವರಿಗೇ ಸಮಸ್ಯೆ ಆಗಲಿದೆ ಎಂದಿದ್ದಾರೆ. ಇನ್ನು ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್ ಮಾತನಾಡಿ, ಚುನಾವಣೆ ವೇಳೆಯಲ್ಲಿ‌ ಬಿಜೆಪಿ ಸರ್ಕಾರ ಇದೇ ರೀತಿ ಇಡೀ ದೇಶಾದ್ಯಂತ ಮಾಡಿಕೊಂಡು ಬಂದಿದೆ. ಇದರಲ್ಲಿ ಬೆದರುವುದು ಏನಿಲ್ಲ. ಧೈರ್ಯವಾಗಿ ಎದುರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

Leave a Reply