ಹೊಸಕೋಟೆ ಜತೆಗೆ ಹಿರೇಕೆರೂರಲ್ಲೂ ಬಿಜೆಪಿಗೆ ಬಂಡಾಯ!

ಡಿಜಿಟಲ್ ಕನ್ನಡ ಟೀಮ್:

ಸ್ಥಳೀಯ ಬಿಜೆಪಿ ನಾಯಕರನ್ನು ಪರಿಗಣಿಸದೇ ಆಪರೇಷನ್ ಕಮಲದ ಮೂಲಕ ಬಂದಿರುವ ವಲಸಿಗರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂಬ ಕಾರ್ಯಕರ್ತರ ಪಟ್ಟು ದಿನೇ ದಿನೆ ಜೋರಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಪರ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಿದರೆ, ಇಂದು ಹಿರೇಕೆರೂರಲ್ಲಿ ಯು.ಬಿ ಬಣಕಾರ್ ಬೆಂಬಲಿಸಿ ಕಮಲ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಮುಂಬರುವ ಉಪಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಯು.ಬಿ ಬಣಕಾರ್ ಅವರಿಗೆ ಟಿಕೆಟ್ ನೀಡಬೇಕು. ಇಲ್ಲವಾದರೆ ಬಣಕಾರ್ ಅವರು ಪಕ್ಷೇತರವಾಗಿ ಸ್ಪರ್ಧಿಸಬೇಕು ಎಂದು ಆಗ್ರಹಿಸಿ ಕಾರ್ಯಕರ್ತರು ಬಣಕಾರ್ ಅವರ ಮನೆಮುಂದೆ ಪಟ್ಟು ಹಿಡಿದು ನಿಂತಿದ್ದಾರೆ. ಹಿರಿಯ ನಾಯಕರ ಸಮಾಧಾನದ ಮಾತಿಗೆ ತಲೆಯಾಡಿಸಬೇಕೇ ಅಥವಾ ಕಾರ್ಯಕರ್ತರ ಪ್ರೀತಿಗೆ ತಲೆಬಾಗಬೇಕೆ ಎಂಬ ಗೊಂದಲಕ್ಕೆ ಬಣಕಾರ್ ಸಿಲುಕಿದ್ದಾರೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೊಸಕೋಟೆ ಕಾರ್ಯಕರ್ತರು ಎಂಟಿಬಿ ನಾಗರಾಜ್ ವಿರುದ್ಧ ಹಿರೇಕೆರೂರು ಕಾರ್ಯಕರ್ತರು ಬಿ.ಸಿ ಪಾಟೀಲ್ ವಿರುದ್ಧ ಕೆಲಸ ಮಾಡಿದ್ದರು. ಆದರೆ ಈಗ ತಮ್ಮ ಅದಿಕಾರದ ಆಸೆಗೆ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಅದೇ ಅಬ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಎಂದರೆ ಯಾವ ಕಾರ್ಯಕರ್ತನಿಗೆ ತಾನೇ ಸ್ವಾಭಿಮಾನಕ್ಕೆ ಧಕ್ಕೆಯಾಗುವುದಿಲ್ಲ ಹೇಳಿ. ಈಗ ಬಿಜೆಪಿಯಲ್ಲಿ ಆಗಿರುವುದೂ ಅದೇ.

ರಾಜ್ಯ ನಾಯಕರ ಅಧಿಕಾರದ ಆಸೆಗೆ ಸ್ಥಳೀಯ ಮಟ್ಟದ ನಾಯಕರು ಹಾಗೂ ಕಾರ್ಯಕರ್ತರ ಶ್ರಮ, ಸ್ವಾಭಿಮಾನ, ಪ್ರತಿಷ್ಠೆಯನ್ನು ಪಣಕ್ಕಿಡಲು ಮುಂದಾಗಿದ್ದಾರೆ. ಇದು ಸಹಜವಾಗಿಯೇ ಕಾರ್ಯಕರ್ತರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ವರ್ಷಾನುಗಟ್ಟಲೆ ಪರಿಶ್ರಮಹಾಕಿ ಪಕ್ಷವನ್ನು ಕಟ್ಟಿದ ಕಾರ್ಯಕರ್ತರ ಸ್ವಾಭಿಮಾನವನ್ನು ತಮ್ಮ ಅಧಿಕಾರದ ಸ್ವಾರ್ಥಕ್ಕೆ ಹರಾಜು ಹಾಕುವುದು ಎಷ್ಟು ಸರಿ ಎಂಬುದನ್ನು ಹಿರಿಯ ನಾಯಕರು ಚಿಂತಿಸಬೇಕಿದೆ.

Leave a Reply