ದೇವೇಗೌಡ, ಮುನಿಯಪ್ಪ, ನಿಖಿಲ್ ಸೋಲಿಗೆ ಕಾಂಗ್ರೆಸ್ ನಲ್ಲೇ ಸ್ಕೆಚ್! ಸೋಮಶೇಖರ್ ಹೊಸ ಬಾಂಬ್!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ, ಮಾಜಿ ಪ್ರಧಾನಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಪ್ಲಾನ್ ಮಾಡಿದ್ದಾರೆ. ಯಾರ್ಯಾರು ಎಲ್ಲೆಲ್ಲಿ ಏನು ಪ್ಲಾನ್ ಮಾಡಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಪುರಾವೆ ಇದೆ ಎಂದು ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುತ್ತಾ ಈ ವಿಚಾರ ಹೊರ ಹಾಕಿರುವ ಸೋಮಶೇಖರ್, ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಅರ್ಜಿ ವಿಚಾರಣೆ ಮುಗಿಯಲಿ ಇವರ ಬಂಡವಾಳವನ್ನು ಸಂಪೂರ್ಣವಾಗಿ ತೆರೆದಿಡುತ್ತೇವೆ ಎಂದು ಹೇಳಿದ್ದಾರೆ. ಮೈತ್ರಿ ವಿರುದ್ಧ ಕಾಂಗ್ರೆಸ್ ನಾಯಕರು ಹೇಗೆ ಪಿತೂರಿ ನಡೆಸಿದ್ದಾರೆ ಎಂಬುದರ ಬಗ್ಗೆ ಅವರು ಹೇಳಿದ್ದು ಹೀಗೆ…

‘ನಮ್ಮ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಮಾಡುತ್ತಾರೆ. ಆದರೆ ಹಿರಿಯ ನಾಯಕ ಮುನಿಯಪ್ಪರನ್ನು ಸೋಲಿಸಲು ರಮೇಶ್ ಕುಮಾರ್ ಏನೇನು ಮಾಡಿದರು, ಭೈರತಿ ಬಸವರಾಜು ಅವರ ಮನೆಯಲ್ಲಿ ಏನೇನು ಮಾತಾಡಿದ್ದಾರೆ ಎಂಬುದು ಗೊತ್ತಿದೆ.

ಹಾಸನದಲ್ಲಿ ರೇವಣ್ಣ ಮಗ ಗೆಲ್ಲಲಿ, ಉಳಿದಂತೆ ತುಮಕೂರಿನಲ್ಲಿ ದೇವೇಗೌಡ, ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಜಾರ್ಜ್ ಅವರ ಕ್ವಾಟ್ರೇಸ್ ನಲ್ಲಿ ಪ್ಲಾನ್ ಮಾಡಲಾಗಿತ್ತು. ನಾವು ಸರ್ಕಾರ ಕೆಡವುತ್ತೇವೆ ಎಂದಾಗ. ಕಾಂಗ್ರೆಸ್ ಪಕ್ಷ ಸರ್ಕಾರ ಕೆಡವಿದೆ ಎಂದು ಗೊತ್ತಾಗಬಾರದು ಎಂದು ಹೇಳಿದ್ದು, ಇದೇ ದಿನೇಶ್ ಗುಂಡೂರಾವ್.

ಈ ಎಲ್ಲದರ ಬಗ್ಗೆಯೂ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇತ್ತು. ಅವರ ಗಮನಕ್ಕೆ ಬಾರದೆ ಕಾಂಗ್ರೆಸ್ ನಲ್ಲಿ ಒಂದೇ ಒಂದು ಹುಲ್ಲು ಕಡ್ಡಿಯೂ ಅಲುಗಾಡಲ್ಲ’

Leave a Reply