ದಿನೇಶ್ ಗುಂಡೂರಾವ್ ಸಿದ್ದರಾಮಯ್ಯನ ಬಕೆಟ್! ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಕಿಡಿ

ಡಿಜಿಟಲ್ ಕನ್ನಡ ಟೀಮ್:

‘ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಲು ಯೋಗ್ಯತೆ ಇಲ್ಲ. ಅವನು ಸಿದ್ದರಾಮಯ್ಯನ ಬಕೆಟ್… ‘ ಇದು ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಕಿಡಿಕಾರಿರುವ ಪರಿ.

ಅನರ್ಹ ಶಾಸಕರು ಪಕ್ಷದ್ರೋಹಿ, ರಾಜಕೀಯ ವ್ಯಭಿಚಾರ ನಡೆಸುತ್ತಾರೆ ಎಂದು ಟೀಕೆ ಮಾಡಿರುವ ದಿನೇಶ್ ಗುಂಡೂರಾವ್ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸೋಮಶೇಖರ್ ಹೇಳಿದ್ದಿಷ್ಟು…

‘ನಮ್ಮನ್ನು ಪಕ್ಷದ್ರೋಹಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಹೇಳುತ್ತಿರುವ ದಿನೇಶ್ ಗುಂಡೂರಾವ್, ಮುನಿಯಪ್ಪ ಅವರನ್ನು ಸೋಲಿಸಿದ ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಮುನಿಯಪ್ಪರನ್ನು ಸೋಲಿಸಿದ ರಮೇಶ್ ಕುಮಾರ್ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮೀಟಿಂಗ್ ಮಾಡುತ್ತಾರೆ.

ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಅಯೋಗ್ಯರು ಸೇರಿ ಮೈತ್ರಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಜನರಿಗೂ ಗೊತ್ತಿತ್ತು. ಅಧ್ಯಕ್ಷನಾದವನು ನೆಟ್ಟಗೆ ಇದ್ದಿದ್ದರೆ, ನಾವು ಯಾಕೆ ಪಕ್ಷ ಬಿಡುತ್ತಿದ್ದೆವು? ಮೈತ್ರಿ ಬೇಡ ಎಂದು ಇವನೇ ಹೇಳುತ್ತಿದ್ದ. ಸರ್ಕಾರ ಕೆಡವಲು ಅವನಿಂದ ಆಗಲಿಲ್ಲ. ಅದನ್ನು ನಾವು ಮಾಡಿದ್ದೇವೆ.

ನಿನ್ನೆ ಮುನಿಯಪ್ಪ ಹಾಗೂ ಹರಿಪ್ರಸಾದ್ ಅವರು ಹೇಳಿರುವ ಮಾತು ಖಂಡಿತಾ ನಿಜ. ಏನು ಕಾಂಗ್ರೆಸ್ ಅಂದ್ರೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಹರ್ಷದ್ ಮಾತ್ರನಾ? ಇದು ಸಿದ್ದರಾಮಯ್ಯ ಕಾಂಗ್ರೆಸ್ಸಾ ಅಥವಾ ನಿಜವಾದ ಕಾಂಗ್ರೆಸ್ಸಾ?

ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದವರನ್ನು ಪಕ್ಕದಲ್ಲೇ ಕೂರಿಸಿಕೊಳ್ಳುತ್ತಾರೆ. ಇವನ ಯೋಗ್ಯತೆಗೆ ರಾಜ್ಯ ಅಧ್ಯಕ್ಷ ಆಗಬಾರದಿತ್ತು. ಮಾಜಿ ಸಿಎಂ ಮಗ ಎಂಬುದೊಂದೇ ಇವನ ಮಾನದಂಡ. ಸಿದ್ದರಾಮಯ್ಯರನ್ನು ಟೀಕಿಸಿದ್ದಕ್ಕೆ ನೋಟೀಸ್ ಕೊಡ್ತಾರೆ, ಮುನಿಯಪ್ಪ, ದೇವೇಗೌಡ, ನಿಖಿಲ್ ರನ್ನು ಸೋಲಿಸಿದವರಿಗೆ ಏಕೆ ನೋಟೀಸ್ ಇಲ್ಲ?’

Leave a Reply