ಅನರ್ಹ ಶಾಸಕರಿಗೆ ಮತ್ತೆ ಉಪಕದನದ ಆತಂಕ! ಆಯೋಗದ ನಡೆ ಬಗ್ಗೆ ಅನುಮಾನ..!?

ಡಿಜಿಟಲ್ ಕನ್ನಡ ಟೀಮ್:

‘ನಾವು ಸೂಚನೆ ನೀಡುವವರೆಗೂ ಉಪ ಚುನಾವಣೆಯನ್ನು ನಡೆಸಬೇಡಿ’ ಎಂದು ಸುಪ್ರೀ ಕೋರ್ಟ್ ಸೂಚನೆ ನೀಡಿದ್ದರು ಚುನಾವಣಾ ಆಯೋಗ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಡಿಸೆಂಬರ್5ರಂದು ನಡೆಸುವುದಾಗಿ ಅಧಿಸೂಚನೆ ಹೊರಡಿಸಿದೆ.

ಉಪಚುನಾವಣೆ ಮುಂದಕ್ಕೆ ಹೋಯ್ತು ಎಂದು ಅನರ್ಹ ಶಾಸಕರು ನೆಮ್ಮದಿಯ ಉಸಿರು ಬಿಡುವಾಗಲೇ ಆಯೋಗದ ದಿನಾಂಕ ಪ್ರಕಟಣೆ ಶಾಕ್ ನೀಡಿದೆ. ಈ ಹಿಂದೆ ಅಕ್ಟೋಬರ್ 21ರಂದು ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆ ಜತೆಯಲ್ಲೇ ಉಪ ಚುನಾವಣೆಗೆ ನಿರ್ಧರಿಸಲಾಗಿತ್ತು. ಆದರೆ ಅನರ್ಹ ಶಾಸಕರ ಪ್ರಕರಣದಲ್ಲಿ ವಿಸ್ತೃತ ವಿಚಾರಣೆ ಅಗತ್ಯವಿದೆ ಎಂದು ಮನಗಂಡ ಸುಪ್ರೀಂ ಕೋರ್ಟ್ ಉಪ ಚುನಾವಣೆಗೆ ತಡೆ ನೀಡಿ ನ್ಯಾಯಾಲಯದ ಮುಂದಿನ ಸೂಚನೆವರೆಗೂ ಕಾಯಬೇಕು ಎಂದು ತಿಳಿಸಿತ್ತು. ಆದ್ರೆ ಶುಕ್ರವಾರ ಸಂಜೆ ಕೇಂದ್ರ ಚುನಾವಣೆ ಆಯೋಗ ಹೊಸ ವೇಳಾಪಟ್ಟಿ ಪ್ರಕಟಿಸಿದೆ.

ಹೊಸ ವೇಳಾಪಟ್ಟಿ ಪ್ರಕಾರ ನವೆಂಬರ್ 11ರಿಂದ ನಾಮಪತ್ರಗಳ ಸಲ್ಲಿಕೆ ಆರಂಭವಾಗಲಿದೆ. ನವೆಂಬರ್ 18, ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ನವೆಂಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 21ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 9ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಇನ್ನು ಅನರ್ಹರ ಅರ್ಜಿಯ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಮುಂದಿನ ತಿಂಗಳು 22ಕ್ಕೆ ನಡೆಸಲಿದೆ. ಅಲ್ಲಿಂದ ನಾಮಪತ್ರ ಸಲ್ಲಿಕೆಯ ಕಡೆಯ ದಿನಾಂಕಕ್ಕೆ ಇರುವ ಕಾಲಾವಧಿ ಕೇವಲ ಸುಮಾರು 20 ದಿನಗಳು ಮಾತ್ರ. ಅನರ್ಹರ ಅರ್ಜಿ ವಿಚಾರಣೆಯಲ್ಲಿ ಒಬ್ಬೊಬ್ಬ ಶಾಸಕರದ್ದೂ ಪ್ರತ್ಯೇಕ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ಸುಪ್ರೀಂ ಕೋರ್ಟ್ 20 ದಿನಗಳಲ್ಲಿ 17 ಶಾಸಕರ ವಾದವನ್ನು ಆಲಿಸಿ, ಅದರ ಜತೆಗೆ ಕಾಂಗ್ರೆಸ್ ವಾದ ಆಲಿಸಬೇಕಿದೆ. ಇನ್ನು ಸ್ಪೀಕರ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಿದರೆ ಅದು ನ್ಯಾಯಾಂಗ ಮತ್ತು ಶಾಸಕಾಂಗ ನಡುವಣ ಬಿಕ್ಕಟ್ಟಿಗೆ ದಾರಿ ಮಾಡಿಕೊಡುತ್ತಕೆ. ಹೀಗಾಗಿ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ವಿಸ್ತೃತ ವಿಚಾರಣೆ ನಡೆಸಿ 20 ದಿನಗಳಲ್ಲಿ ಪ್ರಕರಣಕ್ಕೆ ಅಂತ್ಯ ಹಾಡಲು ಸಾಧ್ಯವೇ? ಎಂಬ ಪ್ರಶ್ನೆ ಮೂಡಿದೆ.

ಪ್ರಕರಣದ ವಿಚಾರಣೆ ನಡೆಯದಿದ್ದರೆ ಮತ್ತೆ ಉಪ ಚುನಾವಣೆ ಮುಂದೂಡಲಾಗುವುದೇ? ಅಥವಾ ಕಾಲಾವಧಿಯ ಕೊರತೆ ಹಿನ್ನೆಲೆಯಲ್ಲಿ ಅನರ್ಹರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗುತ್ತದೆಯೇ? ಅಥವಾ ಅನರ್ಹರಿಗೆ ಸ್ಪರ್ಧಿಸಲು ಅವಕಾಶ ಸಿಗದಿರಬಹುದೇ? ಈ ಎಲ್ಲ ಪ್ರಶ್ನೆಗಳು ಉದ್ಭವಿಸಿದೆ.

ಯಾವೆಲ್ಲಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ..?

ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಕೆ.ಆರ್ ಪುರಂ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಚಿಕ್ಕಬಳ್ಳಾಪುರ, ಕೃಷ್ಣರಾಜಪೇಟೆ, ಹುಣಸೂರು, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ.

ಇನ್ನು ಚುನಾವಣೆ ದಿನಾಂಕ ಘೋಷಣೆ ಬಗ್ಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಹೀಗೆ…

ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ತರಾತುರಿಯಲ್ಲಿ ಚುನಾವಣೆ ಮುಂದೂಡಿದ್ದ ಆಯೋಗ ಮತ್ತೆ ದಿನಾಂಕ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಆದರೆ ಆಯೋಗದ ನಡೆ ಮಾತ್ರ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

– ಸಿದ್ದರಾಮಯ್ಯ.

ರಾಜ್ಯದ 15 ಕ್ಷೇತ್ರಗಳಿಗೆ ಮತ್ತೆ ಚುನಾವಣೆ ಘೋಷಣೆಯಾಗಿದೆ. ಆದರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಅಯೋಗಕ್ಕೆ ಸ್ಪಷ್ಟತೆಯೇ ಇಲ್ಲ. ನೀತಿ ಸಂಹಿತೆ, ಫಲಿತಾಂಶಗಳ ಬಗ್ಗೆ ಗೊಂದಲಗಳಿವೆ. ನೀತಿ ಸಂಹಿತೆ ಇಲ್ಲದೇ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ? ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯನಿರ್ವಹಿಸುವುದರ ಹಿಂದಿನ ಅರ್ಥವೇನು?ಇಂಥ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ. ಒಂದು ಆಪರೇಷನ್ ಕಮಲ, ಜನಮನ್ನಣೆಯನ್ನು ಮಾರಿಕೊಳ್ಳುವ ಜನಪ್ರತಿನಿಧಿಗಳ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೆಲ್ಲಾ ಅನರ್ಥಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ.

– ಕುಮಾರಸ್ವಾಮಿ.

Leave a Reply