ಸಿದ್ದರಾಮಯ್ಯ ಉದಾಹರಿಸುತ್ತಾ ಯಡಿಯೂರಪ್ಪಗೆ ಸಂಘಟನೆ ಬಗ್ಗೆ ಈಶ್ವರಪ್ಪ ಪಾಠ!

ಡಿಜಿಟಲ್ ಕನ್ನಡ ಟೀಮ್:

‘ನಾನು ಅಧಿಕಾರಾದಲ್ಲಿ ಇದ್ದೇನೆ. ನಾನು ಹೇಳಿದಂತೆ ಎಲ್ಲವೂ ಆಗಬೇಕು ಎಂಬ ಸರ್ವಾಧಿಕಾರಿ ಧೋರಣೆ ಇರಬಾರದು. ಅದು ನಾನೇ ಆಗಿರಲಿ, ಸಿದ್ದರಾಮಯ್ಯ ಆಗಿರಲಿ, ಯಡಿಯೂರಪ್ಪ ಆಗಿರಲಿ, ಕುಮಾರಸ್ವಾಮಿಯೇ ಆಗಿರಲಿ ಎಲ್ಲರಿಗೂ ಅನ್ವಯಿಸುತ್ತದೆ…’ ಇದು ಸಂಘಟನೆ ಕುರಿತು ಸಚಿವ ಈಶ್ವರಪ್ಪ ಸಿಎಂ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಪಾಠ ಮಾಡಿರುವ ಪರಿ.

ಕಾಂಗ್ರೆಸ್ ನೊಳಗಿನ ಭಿನ್ನಮತ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ‘ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಧೋರಣೆಯಿಂದ ಕಾಂಗ್ರೆಸ್ ರಾಜ್ಯದಲ್ಲಿ ಅವನತಿ ಹಂತಕ್ಕೆ ಬಂದಿದೆ’ ಎಂದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ರಾಜ್ಯದಲ್ಲೇ ಆಗಲಿ ದೇಶದಲ್ಲೇ ಆಗಲಿ ಯಾವುದೇ ವ್ಯಕ್ತಿ ಸಂಘಟನೆ ಬಿಟ್ಟು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಾನು ಅಧಿಕಾರದಲ್ಲಿ ಇದ್ದೇನೆ ಎಂದು ಸರ್ವಾಧಿಕಾರಿ ಧೋರಣೆ ತೋರಿ ದ್ವೇಷದ ರಾಜಕಾರಣ ಮಾಡಿದರೆ ಅದರಿಂದ ಅವರೇ ನಾಶವಾಗುತ್ತಾರೆ. ಸಿದ್ದರಾಮಯ್ಯ ಅವರೇ ಅದಕ್ಕೆ ಉದಾಹರಣೆ. ಕಾಂಗ್ರೆಸ್ ಪಕ್ಷದಲ್ಲಿ ರಮೇಶ್ ಕುಮಾರ್ ಪಕ್ಷದ ಅಭ್ಯರ್ಥಿ ಸೋಲಿಸಿದ್ದು, ಅವರನ್ನು ಉಚ್ಚಾಟಿಸಬೇಕು ಎಂದು ಹೇಳಿದಾಗ ಅದರ ಬಗ್ಗೆ ವಿಚಾರಣೆ ಮಾಡದೆ ಅವರನ್ನು ಪಕ್ಕದಲ್ಲೇ ಕೂತು ಮೀಟಿಂಗ್ ಮಾಡುತ್ತಾರೆ.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು ಅಧಿಕಾರದಲ್ಲಿ ಇದ್ದಾಗ ರಕ್ಷಣೆ ಪಡೆಯಬಹುದು. ಆದರೆ ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಪಕ್ಷಕ್ಕೆ ಯಾರು ನಿಷ್ಠರಾಗಿ ಇರುತ್ತಾರೋ ಅವರಿಗೆ ಪಕ್ಷ ಬೆಂಬಲಿಸ ಬೇಕು. ಅದು ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಅಥವಾ ಜೆಡಿಎಸ್ ಆಗಲಿ.

ಸಂಘಟನೆ ಬಿಟ್ಟು ಯಾರೂ ಕೂಡ ಮೇಲೆ ಬರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಪಕ್ಷ ಕಟ್ಟಿ ಎಷ್ಟು ಸೀಟು ಗೆದ್ದರು? ಯಡಿಯೂರಪ್ಪ ಪಕ್ಷ ಕಟ್ಟಿ ಎಷ್ಟು ಸೀಟು ಗೆದ್ದರು? ಮೂರು ಮತ್ತೊಂದು ಅಷ್ಟೇ.’

Leave a Reply