ಬಿಜೆಪಿಯಿಂದ ಯಡಿಯೂರಪ್ಪರನ್ನ ಹೊರಹಾಕಲು ಸ್ಕೆಚ್..!?

ಡಿಜಿಟಲ್ ಕನ್ನಡ ಟೀಮ್:

ಸಾಧ್ಯ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ನೋಡಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಬಿಜೆಪಿಯಿಂದ ಹೊರಗೆ ಹಾಕಲು ಯೋಜನೆ ಸಿದ್ಧವಾಗ್ತಿದ್ಯಾ ಅನ್ನೋ ಅನುಮಾನ ದಟ್ಟವಾಗ್ತಿದೆ.

ಬಿಎಸ್ ಯಡಿಯೂರಪ್ಪ ಸರ್ಕಾರದ ಮುಖ್ಯಸ್ಥನಾಗಿದ್ದರೂ ಪ್ರಮುಖ ನಿರ್ಧಾರಗಳನ್ನು ಬಿಜೆಪಿ ಹೈಕಮಾಂಡ್ ಮಾಡುತ್ತಿದೆ. ಯಡಿಯೂರಪ್ಪ ಉಸಿರುಗಟ್ಟುವ ವಾತಾವರಣದಲ್ಲಿ ಇರುವುದು ಖಚಿತವಾಗಿ ಕಾಣಿಸುತ್ತದೆ. ಯಡಿಯೂರಪ್ಪ ಉಸಿರುಗಟ್ಟುವ ವಾತಾವರಣದಲ್ಲಿ ಇರುವುದು ಖಚಿತವಾಗಿ ಕಾಣಿಸುತ್ತದೆ.

ಭಾನುಪ್ರಕಾಶ್ ಹಾಗು ನಿರ್ಮಲ್ ಕುಮಾರ್ ಸುರಾನ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಬಿಎಸ್ ವೈ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಇವರಿಬ್ಬರೂ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದರು. ಇದೀಗ ನಳೀನ್ ಕುಮಾರ್ ಕಟೀಲ್ ಮತ್ತೆ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬಂದು ಸಚಿವ ಸಂಪುಟ ವಿಸ್ತರಣೆ ಆಗುವ ಮೊದಲು ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿಧಾನಸೌಧದಲ್ಲಿ ಸಾಕಷ್ಟು ಓಡಾಟ ನಡೆಸುತ್ತಿದ್ರು. ವರ್ಗಾವಣೆ ಎಂದು ಶಾಸಕರು ಸಿಎಂ ಬಳಿಗೆ ಹೋದಾಗ ಮಗ ವಿಜಯೇಂದ್ರ ಬಳಿ ಮಾತನಾಡುವಂತೆ ಸ್ವತಃ ಸಿಎಂ ಸೂಚನೆ ಕೊಡ್ತಿದ್ರು ಅನ್ನೋ ಆರೋಪವೂ ಇದೆ. ಈ ಬಗ್ಗೆ ಕೂಡ ಹೈಕಮಾಂಡ್ ಮಧ್ಯಪ್ರವೇಶ ಮಾಡಿ ನಿಯಂತ್ರಿಸುವ ಕೆಲಸ ಮಾಡಿದ್ದು, ಬಿಎಸ್ ಯಡಿಯೂರಪ್ಪ ಕಣ್ಣು ಕೆಂಪಾಗಿಸಿದೆ.

ಇದೇ ಕಾರಣಕ್ಕೆ ನಳೀನ್ ಕುಮಾರ್ ಕಟೀಲ್‌ಗೆ ಪತ್ರ ಬರೆದಿದ್ದ ಬಿಎಸ್ ಯಡಿಯೂರಪ್ಪ ಆಪ್ತ ಭೀಮಾಶಂಕರ್ ಪಾಟೀಲ್, ಬಿಜೆಪಿಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕಡೆಗಣನೆ ಆಗ್ತಿದೆ ಅನ್ನೋ ಆರೋಪ ಮಾಡಿದ್ರು. ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿರುವ ಭೀಮಾಶಂಕರ್ ಪಾಟೀಲ್, ಸಂಘಟನೆಯನ್ನ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದವರನ್ನ ಮುಲಾಜಿಲ್ಲದೆ ಪಕ್ಷದಿಂದ ಹೊರಗಿಡಲಾಗಿತ್ತು. ಕಳೆದ ವಿಧಾನಸಭಾ ಹಾಗು ಲೋಕಸಭಾ ಚುನಾವಣಾ ಸಾಧನೆಗೆ ಯಡಿಯೂರಪ್ಪ ಕಾರಣ, ಅವರನ್ನು ಕಡೆಗಣನೆ ಮಾಡಿದ್ರೆ ಉತ್ತರ ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಸುಮ್ಮನಿರಲ್ಲ ಎಂದು ಎಚ್ಚರಿಸಿದ್ರು. ಜೊತೆಗೆ ಬಿಎಸ್‌ವೈ ಪುತ್ರ ಬಿ.ವೈ ವಿಜಯೇಂದ್ರ ಅವ್ರನ್ನ ತುಳಿಯುವ ಕೆಲಸ ನಡೀತಿದೆ ಎಂದಿದ್ದರು.

ಈ ಬಗ್ಗೆ ಮಾತನಾಡಿರುವ ಸಚಿವ ಸಿ.ಟಿ ರವಿ, ‘ಪಕ್ಷದಲ್ಲಿ ಯಾರನ್ನೂ ತುಳಿಯುವ ಕೆಲಸ ಆಗ್ತಿಲ್ಲ. ಪಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಲಾಢ್ಯ ಆಗ್ತಿದೆ’ ಎಂದಿದ್ದರು. ಜೊತೆಗೆ ಯಡಿಯೂರಪ್ಪರನ್ನ ಅಸಹಾಯಕರನ್ನಾಗಿ ಮಾಡೋದು ಸಾಧ್ಯವೇ..? ಎಂದು ಮರು ಪ್ರಶ್ನೆ ಮಾಡಿದ್ದರು. ಕಳೆದ 40 ಮೋದಿ, ಅಮೀತ್ ಷಾ, ಬಿಎಸ್‌ ಯಡಿಯೂರಪ್ಪ ಸೇರಿದಂತೆ ನನಗೂ ರಾಜಕೀಯ ಅಸ್ತಿತ್ವ ಇರಲಿಲ್ಲ. ಇಂದು ನಮ್ಮನ್ನೆಲ್ಲ‌ ಜನ ಗುರುತಿಸುತ್ತಿದ್ದಾರೆ ಅಂದ್ರೆ ಅದಕ್ಕೆ ಪಾರ್ಟಿಯೇ ಕಾರಣ. ಪಾರ್ಟಿ ಕಟ್ಟಿದ ಎಲ್ಲರನ್ನು ಪಾರ್ಟಿ ಗೌರವಿಸುತ್ತದೆ ಎನ್ನುವ ಮೂಲಕ ಪಕ್ಷಕ್ಕಷ್ಟೇ ಬೆಲೆ ಎಂದಿದ್ರು.

ಶಿವಮೊಗ್ಗದಲ್ಲಿ ಮಾತನಾಡಿರುವ ಕೆ.ಎಸ್ ಈಶ್ವರಪ್ಪ, ಯಾವುದೇ ವ್ಯಕ್ತಿಗೆ ಸ್ಥಾನಮಾನ ಯಾವುದೂ ಶಾಶ್ವತವಲ್ಲ. ಸಿದ್ದರಾಮಯ್ಯ ಪಕ್ಷ ಕಟ್ಟಿದ್ದರೂ ಎಷ್ಟು ಸೀಟು ಪಡೆದಿದ್ದರು. ಯಡಿಯೂರಪ್ಪ ಕೂಡ ಪಕ್ಷ ತೊರೆದು ಬೇರೆ ಕಟ್ಟಿದ್ದರೂ ಎಷ್ಟು ಸೀಟು ಪಡೆದಿದ್ದರು ಎಂದು ಪ್ರಶ್ನಿಸಿದ್ದಾರೆ. ಸಿಎಂ ಆಗಿದ್ದಾಗ ಸರ್ವಾಧಿಕಾರಿ ಧೋರಣೆ ಮಾಡೋದು ಸರಿಯಲ್ಲ. ಸಿದ್ದರಾಮಯ್ಯ ಅವರಿಗೆ ಇದು ಗೊತ್ತಾಗಿದೆ. ಯಾವುದೇ ವ್ಯಕ್ತಿ ಪಕ್ಷದ ಬೆಂಬಲ ಇಲ್ಲದೇ ಅಧಿಕಾರಕ್ಕೆ ಏರಲು ಆಗಲ್ಲ. ಸಂಘಟನೆ ಮೀರಿ ಯಾವುದೇ ವ್ಯಕ್ತಿ ಹೋದರು ಉದ್ದಾರ ಆಗಲು ಸಾಧ್ಯವಿಲ್ಲ. ಹಾಗೇ ಹೋದರೇ ಅವರೇ ನಾಶವಾಗ್ತಾರೆ ವಿನಃ ಸಂಘಟನೆಯಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಸಿದ್ದರಾಮಯ್ಯ ಟೀಕಿಸುವ ನೆಪದಲ್ಲಿ ಬಿ.ಎಸ್ ಯಡಿಯೂರಪ್ಪ ಅವರಿಗೂ ಸಂದೇಶ ರವಾನಿಸಿದ್ದಾರೆ. ಒಟ್ಟಾರೆ ಬಿಜೆಪಿ ಒಳಗೆ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ್ರೆ. ಸರ್ಕಾರಕ್ಕೆ ಆಯಸ್ಸು ತುಂಬಾ ಕಡಿಮೆ ಇದ್ದು, ಯಡಿಯೂರಪ್ಪ ಅವರನ್ನೇ ಪಕ್ಷದಿಂದ ಹೊರಹಾಕುವ ಯೋಜನೆ ಸಿದ್ಧವಾಗಿದ್ಯಾ ಅನ್ನೋ ಅನುಮಾನ ಗಟ್ಟಿಯಾಗ್ತಿದೆ.

Leave a Reply