100 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 500 ಟನ್ ಪ್ಲಾಸ್ಟಿಕ್ ತ್ಯಾಜ್ಯ!

ಡಿಜಿಟಲ್ ಕನ್ನಡ ಟೀಮ್:

ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನೇಕ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈಗ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದು, ಅಕ್ಟೋಬರ್ ವೇಳೆಗೆ 100 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 500 ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವಿಚಾರವನ್ನು ತಿಳಿಸಿದ್ದು, ಮುಂದಿನ ತಿಂಗಳಾಂತ್ಯದ ವೇಳೆಗೆ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಚಿಕ್ ಬಳಸಲಾಗುತ್ತಿದೆ ಎಂದು ತಿಳಿಸಿದೆ. ಇದೇ ಮೊದಲ ಬಾರಿಗೆ ಸರ್ಕಾರದ ರಸ್ತೆ ನಿರ್ಮಾಣ ಸಂಸ್ಥೆಯು ಗುಣಮಟ್ಟದ ರಿಸ್ಕ್ ತೆಗೆದುಕೊಂಡಿದ್ದು, ಈ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಯಾವ ಗುಣಮಟ್ಟ ಕಾಯ್ದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಅಂದಹಾಗೆ ಈ ರಸ್ತೆ ಗುಣಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗದಿದ್ದರೆ ಅದರ ಜವಾಬ್ದಾರಿಯನ್ನು ಗುತ್ತಿಗೆದಾರರ ಮೇಲೆ ಹಾಕುವ ಬದಲು ತಾನೇ ಅದನ್ನು ಹೊತ್ತುಕೊಳ್ಳಲು ಪ್ರಾಧಿಕಾರ ನಿರ್ಧರಿಸಿದೆ.

ಒಂದು ಬಾರಿ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ವಿರುದ್ಧ ಹೋರಾಡಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈ ಪ್ರಯೋಗಕ್ಕೆ ಮುಂದಾಗಿದೆ. ‘ರಸ್ತೆಯ ಮೇಲ್ಪದರದ ಗುಣಮಟ್ಟದ ಕುರಿತಾಗಿ ರಿಸ್ಕ್ ತೆಗೆದುಕೊಳ್ಳಲಾಗಿದೆ. ಇದರ ಸಂಪೂರ್ಣ ಹೊಣೆಯನ್ನು ಎನ್ಎಚ್ಎಐ ವಹಿಸಿಕೊಳ್ಳಲಿದೆ. 1 ಕಿ.ಮೀ ಉದ್ದದ ನಾಲ್ಕು ಪಥ ರಸ್ತೆ ನಿರ್ಮಾಣದಲ್ಲಿ ಸುಮಾರು ಏಳು ಟನ್ ನಷ್ಟು ಅಂದರೆ 2-3 ಟ್ರಕ್ ಲೋಡ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬಳಸಲಾಗುತ್ತದೆ.ಗುತ್ತಿಗೆದಾರರು ರಸ್ತೆಯ ಮೇಲ್ಪದರದಲ್ಲಿ ಸುಮಾರು ಶೇ. 5 ರಿಂದ 10ರಷ್ಟು ಪ್ಲಾಸ್ಟಿಕ್ ಮಿಶ್ರಣ ಮಾಡಲಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಗುತ್ತಿಗೆದಾರರ ಪರವಾಗಿ ನಿಲ್ಲದಿದ್ದರೆ ಅವರು ಹೊಸ ತಂತ್ರಜ್ಞಾನ ಹಾಗೂ ಸಾಮಾಗ್ರಿಗಳ ಬಳಕೆ ಮಾಡುವುದಿಲ್ಲ. ಹೀಗಾಗಿ ಈ ಬಾರಿ ಪ್ಲಾಸ್ಟಿಕ್ ಬಳಕೆಯಿಂದ ರಸ್ತೆ ಗುಣಮಟ್ಟದ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ಎಂದು ತಿಳಿಸಿದ್ದಾರೆ.

Leave a Reply