ಮಲೆನಾಡ ಮಗ ಯಡಿಯೂರಪ್ಪಗೆ ‘ಮಂಗಳೂರು ಮೋದಿ’ ಗುನ್ನಾ..!?

ಡಿಜಿಟಲ್ ಕನ್ನಡ ಟೀಮ್:

ಮಲೆನಾಡ ಮಗ ಸಿಎಂ ಯಡಿಯೂರಪ್ಪ ಅವರಿಗೆ ತಮ್ಮ ಪಕ್ಷದವರಿಂದಲೇ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಅದರಲ್ಲೂ ಮಂಗಳೂರು ಮೋದಿ ಎಂದೇ ಕರೆಸಿಕೊಳ್ಳುವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿಎಸ್ ವೈ ಅವರ ಪ್ರತಿ ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕುತ್ತಿರೋದು ದೊಡ್ಡ ಸವಾಲಾಗಿದೆ. ಈಗ ಬಿಬಿಎಂಪಿ ಮೇಯರ್ ಆಯ್ಕೆ ವಿಚಾರದಲ್ಲಿ ನಳಿನ್ ಕುಮಾರ್ ಮೂಗು ತೂರಿಸಿದ್ದು, ಯಡಿಯೂರಪ್ಪ ತಮ್ಮ ನಿಲುವು ಬದಲಿಸುವಂತೆ ಮಾಡಿದೆ.

ಹೌದು, ಮಂಡ್ಯ ಜಿಲ್ಲೆ ಕೆ.ಆರ್​ ಪೇಟೆಯ ಭೂಕನಕೆರೆ ಗ್ರಾಮದಲ್ಲಿ ಹುಟ್ಟಿದ್ರೂ ಸಿಎಂ ಯಡಿಯೂರಪ್ಪ ಮಂಡ್ಯದ ಮಗ ಎನ್ನುವ ಹೆಸರು ಗಳಿಸಿಲ್ಲ. ಅದಕ್ಕೆ ಕಾರಣ ಅವರು ಮಲೆನಾಡು ಶಿವಮೊಗ್ಗದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಅಭಿವೃದ್ಧಿಪಡಿಸಿಕೊಂಡ್ರು. ಹಾಗಾಗಿ ಮಂಡ್ಯದ ಮಗ ಮಲೆನಾಡ ಮಗನಾಗಿ ಬದಲಾದ್ರು. ಇದೀಗ ಮಲೆನಾಡ ಮಗ ಮಂಗಳೂರು ಮೋದಿ ವಿರುದ್ಧ ಮೊಣಕಾಲು ಊರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿಎಂ ಯಾವುದೇ ನಿರ್ಧಾರ ಕೈಗೊಂಡರೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಹಸ್ತಕ್ಷೇಪ ಮಾಡುತ್ತಿದ್ದು, ಇದೀಗ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್​, ಉಪಮೇಯರ್​ ಪಟ್ಟದ ಮೇಲೂ ನಳೀನ್​ ಕಣ್ಣಿಟ್ಟಿದ್ದಾರೆ.

ಡಿ.ಕೆ ಶಿವಕುಮಾರ್​ ಬಂಧನ ಬಳಿಕ ಒಕ್ಕಲಿಗ ಸಮುದಾಯ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದು, ಒಕ್ಕಲಿಗ ಸಮುದಾಯ ಓಲೈಸುವ ದೃಷ್ಟಿಯಿಂದ ಒಕ್ಕಲಿಗ ಸಮುದಾಯದ ನಾಯಕನನ್ನೇ ಮೇಯರ್​ ಮಾಡುವ ಉದ್ದೇಶ ಹೊಂದಿದ್ದರು. ಒಕ್ಕಲಿಗ ಸಮುದಾಯಕ್ಕೆ ಕಳೆದ 18 ವರ್ಷಗಳಿಂದ ಮೇಯರ್​ ಸ್ಥಾನ ಸಿಕ್ಕಿಲ್ಲ ಅನ್ನೋ ಅಂಶವನ್ನೂ ಪರಿಗಣಿಸಿದ್ದರು ಎನ್ನಲಾಗಿದೆ. ಆದ್ರೆ ನಳೀನ್​ ಕುಮಾರ್​ ಕಟೀಲ್​ ಅಖಾಡಕ್ಕೆ ಇಳಿದಿದ್ದು, ಸಂಘ ಪರಿವಾರದವರನ್ನೇ ಮೇಯರ್​ ಮಾಡಲು ಮುಂದಾಗಿದ್ದಾರೆ. ನಳೀನ್​ ಕುಮಾರ್​ ಕಟೀಲ್​ ನಡೆಯನ್ನು ಗಮನಿಸಿದ ಯಡಿಯೂರಪ್ಪ, ಚುನಾವಣೆಯನ್ನು ಒಂದೂವರೆ ತಿಂಗಳ ಕಾಲ ಮುಂದೂಡುವ ಯತ್ನ ಮಾಡಿದ್ರು. ಅಧಿಕೃತ ಆದೇಶ ಹೊರಡಿಸುವ ಮುನ್ನವೇ ಮಾಧ್ಯಮಗಳ ಎದುರು ಘೋಷಣೆಯನ್ನೂ ಮಾಡಿದ್ರು. ಆ ಬಳಿಕ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ವಿಜಯ್ ಕುಮಾರ್ ಮೇಯರ್​ ಚುನಾವಣೆ ಮುಂದೂಡಲು ನಿರ್ದೇಶನ ಮಾಡಿ ಆದೇಶ ಮಾಡಿದ್ರು. ಅಧಿಕೃತ ಘೋಷಣೆ ಹೊರಬಿದ್ದ ಬಳಿಕ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಉಲ್ಟಾ ಹೊಡೆದ್ರು. ಸ್ಥಾಯಿ ಸಮಿತಿ ಜೊತೆ ಚುನಾವಣೆ ನಡೆಸಲು ತಿಳಿಸಿದ್ದಾರೆ. ಹಾಗಾಗಿ ನಾಳೆಯೇ ಸ್ಥಾಯಿ ಸಮಿತಿಗೂ ಚುನಾವಣೆ ನಡೆಸುತ್ತೇವೆ ಎಂದುಬಿಟ್ರು.

ನಗರಾಭಿವೃದ್ಧಿ ಇಲಾಖೆಗೆ ಅಧೀನ ಕಾರ್ಯದರ್ಶಿ ಆದೇಶಕ್ಕೆ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಕಿಮ್ಮತ್ತು ಕೊಡದೆ ಇರಲು ನಳೀನ್​ ಕುಮಾರ್​ ಕಟೀಲ್​ ಸಪೋರ್ಟ್​ ಕಾರಣ ಅನ್ನೋದು ಬಿಎಸ್​ ಯಡಿಯೂರಪ್ಪಗೆ ಗೊತ್ತಾಗ್ತಿದ್ದ ಹಾಗೆ ಮುಖಭಂಗ ತಪ್ಪಿಸಿಕೊಂಡ ಸಿಎಂ ಯಡಿಯೂರಪ್ಪ, ಮೇಯರ್​ ಚುನಾವಣೆ ನಡೆಸಲು ನಮ್ಮದೇನು ಅಭ್ಯಂತರವಿಲ್ಲ ಎಂದು ಬಿಟ್ರು. ಒಂದೂವರೆ ತಿಂಗಳು ಚುನಾವಣೆ ಮುಂದೂಡುವಂತೆ ಆದೇಶ ಮಾಡಿದ್ದೇವೆ ಎಂದು ಬೆಳಗ್ಗೆ ಹೇಳಿದ್ದ ಯಡಿಯೂರಪ್ಪ, ಸಂಜೆ ವೇಳೆಗೆ ತಮ್ಮ ನಿರ್ಧಾರದಲ್ಲಿ ಯೂಟರ್ನ್ ತೆಗೆದುಕೊಂಡು ಎಂದು ನಯವಾಗಿ ಜಾರಿಕೊಂಡ್ರು. ಮಂಗಳೂರು ಡಿಸಿ ಆಗಿದ್ದ ಹರ್ಷಗುಪ್ತಾ ಬಿಎಸ್​ ಯಡಿಯೂರಪ್ಪ ಅವರಿಗಿಂತ ನಳೀನ್​ ಕುಮಾರ್​ ಕಟೀಲ್​ ಆತ್ಮೀಯರಾಗಿದ್ದರು. ಅದೇ ಕಾರಣಕ್ಕೆ ಚುನಾವಣೆ ಮುಂದೂಡುವ ಆದೇಶ ಇದ್ದರೂ ಹರ್ಷಗುಪ್ತಾ ಚುನಾವಣೆ ನಡೆಸುತ್ತೇವೆ ಎಂದು ತಿಳಿಸಿದ್ರು ಎನ್ನಲಾಗಿದೆ.

ಚುನಾವಣೆ ಮುಂದೂಡಿಕೆ ಎಂದು ಬಿಎಸ್ ಯಡಿಯೂರಪ್ಪ ಹೇಳ್ತಿದ್ದ ಹಾಗೆ ಸಭೆಯನ್ನೇ ಮೊಟಕುಗೊಳಿಸಿದ್ದ ನಳೀನ್​ ಕುಮಾರ್​ ಕಟೀಲ್​, ಇದೀಗ ರಾತ್ರಿ 9 ಗಂಟೆಗೆ ಬೆಂಗಳೂರು ನಗರ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಆದ್ರೆ ಬಿಎಸ್​ ಯಡಿಯೂರಪ್ಪ ಆಯ್ಕೆಯನ್ನು ಸೈಡಿಗಿಟ್ಟಿರುವ ನಳೀನ್​ ಕುಮಾರ್​ ಕಟೀಲ್​, ಸಂಘ ಪರಿವಾರಕ್ಕೆ ನಿಷ್ಠನಾಗಿರುವ ಪಾಲಿಕೆ ಸದಸ್ಯನನ್ನು ಮೇಯರ್​ ಮಾಡಲಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ ಅನೇಕ ದಶಕಗಳಿಂದ ರಾಜ್ಯದಲ್ಲಿ ಬಿಜೆಪಿ ಎಂಬ ಸಸಿಗೆ ಬೆವರನ್ನು ನೀರಿನಂತೆ ಸುರಿಸಿ ಹೆಮ್ಮರವಾಗಿ ಬೆಳೆಸಿರುವ ಬಿಎಸ್ ಯಡಿಯೂರಪ್ಪ ಅವರಿಗೆ ಪಕ್ಷವೇ ವಿಲನ್ ಆಗಿ ನಿಂತಿರೋದು ವಿಧಿಯಾಟ ಎಂದು ರಾಜಕೀಯ ಪಡಸಾಲೆಯಲ್ಲಿ ಗುನುಗುನಿಸುತ್ತಿದೆ.

Leave a Reply