‘ತಂತಿ ಮೇಲೆ ನಡೆಯುವುದಕ್ಕಿಂತ ರಾಜೀನಾಮೆ ನೀಡೋದು ಉತ್ತಮ’! ಸಿಎಂಗೆ ಸಿದ್ದರಾಮಯ್ಯ ಸಲಹೆ

ಡಿಜಿಟಲ್ ಕನ್ನಡ ಟೀಮ್:

ಸರ್ಕಾರದಲ್ಲಿ ನಾನು ತಂತಿ ಮೇಲೆ ನಡೆಯುವ ಪರಿಸ್ಥಿತಿಯಲ್ಲಿದ್ದೇನೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದು, ‘ಸರ್ಕಾರ ನಡೆಸಲು ಆಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ. ತಂತಿಯ ಮೇಲೆ ನಡೆದು ಕೆಳಗೆ ಬೀದ್ದುಗಿದ್ದೀರಾ’ ಎಂದು ಸಲಹೆ ನೀಡಿದ್ದಾರೆ.

ನೆರೆ ಪರಿಸ್ಥಿತಿ ವೀಕ್ಷಣೆಗಾಗಿ ರಾಯಚೂರಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜತೆ ಮಾತನಾಡಿದ್ದು, ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ‘ಯಡಿಯೂರಪ್ಪ ಅವರನ್ನು ಕಂಡರೆ ನನಗೆ ಅಯ್ಯೋ ಎನಿಸುತ್ತಿದೆ. ತಂತಿಯ ಮೇಲೆ ನಡೆಯುವಂತಹ ಕಷ್ಟ ಅವರಿಗೇಕೆ? ರಾಜೀನಾಮೆ ಕೊಟ್ಟು ಹೋಗಲಿ. ರಾಜ್ಯ ಬಿಜೆಪಿಯಲ್ಲಿ ಅವರ ರೆಕ್ಕೆ ಪುಕ್ಕ ಕತ್ತರಿಸಲಾಗುತ್ತಿದೆ’ ಎಂದು ಕುಟುಕಿದರು.

ಪ್ರವಾಹ ಪರಿಹಾರ ವಿಚಾರವಾಗಿಯೂ ಟೀಕೆ ಮುಂದುವರಿಸಿದ ಸಿದ್ದರಾಮಯ್ಯ ಹೇಳಿದ್ದಿಷ್ಟು…

‘ಕೇಂದ್ರದಿಂದ ನೆರೆ ಪರಿಹಾರವನ್ನೂ ಕೇಳುವ ಧೈರ್ಯ ಯಡಿಯೂರಪ್ಪ ಅವರಿಗಿಲ್ಲ. ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಣ್ಣು, ಕಿವಿ, ಮೂಗು ಇಲ್ಲದ ದಪ್ಪ ಚರ್ಮದ ಸರ್ಕಾರವಾಗಿದೆ. ರಾಜ್ಯದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕಿತ್ತು. ಈ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿದ್ದ ಸಂದರ್ಭದಲ್ಲಿ ನೆರೆ ಬಂದಾಗ ಅವರು ಖುದ್ದು ಇಲ್ಲಿಗೆ ಬಂದು ಮಧ್ಯಂತರ ಪರಿಹಾರ ಘೋಷಿಸಿದ್ದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬಂದರೆ ಹೆಚ್ಚಿನ ಅನುದಾನ ತರಬಹುದು ಎಂದು ಹೇಳಿಕೊಂಡಿದ್ದರು. ಈಗ ಎರಡೂ ಕಡೆ ಅವರದ್ಧೆ ಸರ್ಕಾರ ಇದೆ. ಏಕೆ ಅನುದಾನ ಬಂದಿಲ್ಲ?

ಯಾವೊಬ್ಬ ಸಚಿವರೂ ನೆರೆ ಪೀಡಿತ ಪ್ರದೇಶಗಳಲ್ಲಿ ಕಾಣಿಸುತ್ತಿಲ್ಲ. ಒಬ್ಬರಂತೂ ಮೈಸೂರು ದಸರಾ ಮಾಡಲು ಅಲ್ಲೇ ಠಿಕಾಣಿ ಹೂಡಿದ್ದಾರೆ. ನಾವೂ ಕೂಡ ದಸರಾ ಮಾಡಿದ್ದೇವೆ. ಆದರೆ, ಅಲ್ಲೇ ಠಿಕಾಣಿ ಹೂಡಿರಲಿಲ್ಲ. ಇದು ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬುದಕ್ಕೆ ಸಾಕ್ಷಿ.

ನೆರೆ ಸಂತ್ರಸ್ತರ ಸಮಸ್ಯೆ ಕುರಿತು ಚರ್ಚೆ ಮಾಡಲು ಸಮಯ ಕೊಡಿ ಎಂದು ಚಂದ್ರಯಾನ-2 ವೀಕ್ಷಣೆ ಮಾಡಲು ಬಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಕಾಂಗ್ರೆಸ್ ಮನವಿ ಸಲ್ಲಿಸಿತ್ತು. ಆದರೆ, ಆ ಪುಣ್ಯಾತ್ಮ ನಮಗೆ ಸಮಯವನ್ನೇ ಕೊಡಲಿಲ್ಲ. ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರವನ್ನೂ ಸರಿಯಾಗಿ ಹಂಚಿಕೆ ಮಾಡಿಲ್ಲ. ತಾತ್ಕಾಲಿಕವಾಗಿ ಬಾಡಿಗೆಗೆ ನೀಡುವ ಅನುದಾನವನ್ನೂ ಕೊಡುತ್ತಿಲ್ಲ. ಅನರ್ಹ ಶಾಸಕ ಆನಂದ್ ಸಿಂಗ್ ಅವರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸುವ ಒಂದೇ ಉದ್ದೇಶದಿಂದ ಬಳ್ಳಾರಿಯನ್ನು ವಿಭಜಿಸಲು ಯಡಿಯೂರಪ್ಪ ಮುಂದಾಗಿದ್ದಾರೆ.

ಬಳ್ಳಾರಿಗಿಂತಲೂ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಆನಂದ್‍ಸಿಂಗ್ ಅವರ ಜನಪ್ರಿಯತೆ ಕುಗ್ಗಿರುವುದರಿಂದ ಬಳ್ಳಾರಿ ಜಿಲ್ಲೆ ವಿಭಜನೆಯ ವಿವಾದಕ್ಕೆ ಕೈ ಹಾಕಿದ್ದಾರೆ. ಬಿಜೆಪಿ ಬಳಿ 113 ಶಾಸಕರ ಸಂಖ್ಯಾಬಲ ಇಲ್ಲ. ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿ ಸರ್ಕಾರ ಪತನವಾಗುವುದು ಖಚಿತ. 105 ಮಂದಿ ಶಾಸಕರನ್ನು ಇಟ್ಟುಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದೆ. ಇದು ಅನೈತಿಕ ಸರ್ಕಾರ. ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ಹಣ, ಅಧಿಕಾರ ತೋರಿಸಿ ಹಿಂಬಾಗಿಲ ಮೂಲಕ ಸರ್ಕಾರ ರಚನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಆ ಮೇಲೆ ಸರ್ಕಾರ ಉಳಿಯದಲಿದೆಯೇ?

ಮೈಸೂರು ದಸರಾ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲಿಲ್ಲ. ಹಾಗಾಗಿ ನಾನು ಭಾಗವಹಿಸಲಿಲ್ಲ. ಕರೆಯದೇ ಹೋಗುವವರನ್ನು …… ಅದೇನೋ ಮಾಡಬೇಕೆಂದು ಹೇಳಿದ್ದಾರೆ. ನಾನು ಈ ಮೊದಲು ಸಚಿವನಾಗಿ, ಮುಖ್ಯಮಂತ್ರಿಯಾಗಿ ಬಹಳಷ್ಟು ದಸರಾಗಳನ್ನು ಮಾಡಿದ್ದೇನೆ. ಈಗ ಅವರ ಅಧಿಕಾರವಿದೆ. ದಸರಾ ಮಾಡಿಕೊಳ್ಳಲಿ.

ನಾನೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ಮುನಿಯಪ್ಪ ಸೇರಿದಂತೆ ಅನೇಕರು ಪಕ್ಷದಲ್ಲಿ ನನ್ನ ವಿರುದ್ಧ ಇದ್ದಾರೆ ಎಂಬುದು ಕೇವಲ ಮಾಧ್ಯಮಗಳ ಊಹೆ ಅಷ್ಟೆ. ಟಿವಿಯಲ್ಲಿ ಬರೋದನ್ನೆಲ್ಲ ನಂಬಬೇಡಿ. ಹೈಕಮಾಂಡ್ ನನ್ನನ್ನೇ ವಿರೋಧ ಪಕ್ಷದ ನಾಯಕನನ್ನಾಗಿ ನೇಮಕ ಮಾಡಲಿದೆ.

Leave a Reply