ಬಿಬಿಎಂಪಿ ಮೇಯರ್ ಆಗಿ ಗೌತಮ್ ಆಯ್ಕೆ! ಸಂತೋಷ್ ಲೆಕ್ಕಾಚಾರ ಒಂದೆರಡಲ್ಲ!

ಡಿಜಿಟಲ್ ಕನ್ನಡ ಟೀಮ್:

ಮೇಯರ್ ಸ್ಥಾನದಲ್ಲಿ ಒಕ್ಕಲಿಗ, ಮೇಯರ್ ಸ್ಥಾನದಲ್ಲಿ ದೋಸ್ತಿ ಅಭ್ಯರ್ಥಿ, ಮೇಯರ್ ಆಗಿ ಪದ್ಮನಾಭರೆಡ್ಡಿ… ಹೀಗೆ ಬಿಬಿಎಂಪಿ ಮೇಯರ್ ವಿಚಾರವಾಗಿ ಆದ ಚರ್ಚೆಗಳು ಅನೇಕ. ಆದರೆ ಇಂದು ಮೇಯರ್ ಆಗಿ ಆಯ್ಕೆಯಾಗಿದ್ದು ಗೌತಮ್ ಕುಮಾರ್ ಜೈನ್!

ಹೌದು, ಗೌತಮ್ ಕುಮಾರ್ ಜೈನ್ ಅವರನ್ನು ಮೇಯರ್ ಆಗಿ ಆಯ್ಕೆ ಮಾಡುವಲ್ಲಿ ರಾಜ್ಯ ಆರೆಸ್ಸೆಸ್ ನಾಯಕ ಬಿಎಲ್ ಸಂತೋಷ್ ಯಶಸ್ವಿಯಾಗಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಲೆಕ್ಕಾಚಾರದಲ್ಲಿ ಒಂದೂ ಒಕ್ಕಲಿಗ ಮೇಯರ್ ಅಥವಾ ಪದ್ಮನಾಭರೆಡ್ಡಿ ಮೇಯರ್ ಸ್ಥಾನದಲ್ಲಿ ಕೂರಬೇಕಿತ್ತು. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ತಮ್ಮ ಶಿಷ್ಯ ನಳಿನ್ ಕುಮಾರ್ ಕಟೀಲ್ ಅವರನ್ನು ತಂದು ಕೂರಿಸಿರುವ ಸಂತೋಷ್ ಯಡಿಯೂರಪ್ಪ ಅವರ ಲೇಕ್ಕಾಚಾರಗಳನ್ನು ತಲೆಕೇಳಗಾಗಿಸುತ್ತಿದ್ದಾರೆ.

ಗೌತಮ್ ಮೇಯರ್ ಆಗಿ ಆಯ್ಕೆ ಮಾಡುವುದರ ಹಿಂದೆ ಸಂತೋಷ್ ಅವರ ಲೇಕ್ಕಾಚಾರ ಒಂದೆರೆಡಿಲ್ಲ. ಒಂದೇ ಏಟಲ್ಲಿ ಹಣ್ಣಿನ ಗೊಂಚಲನ್ನೇ ಉದುರಿಸಿದ್ದಾರೆ.

ಹೌದು, ಗೌತಮ್ ಆಯ್ಕೆಗೆ ಮೊದಲ ಕಾರಣ ಅವರು ಆರೆಸ್ಸೆಸ್ ಸಂಘಟನೆಗೆ ಹತ್ತಿರದ ವ್ಯಕ್ತಿ. ಆರೆಸ್ಸೆಸ್ ಹಿರಿಯ ಮುಖಂಡ ರಾಮ್​ಲಾಲ್ ಅವರಿಗೆ ಆಪ್ತರು. ಎರಡನೆಯದು, ಅವರು ಮೂಲ ಬಿಜೆಪಿಯವರಾಗಿರುವುದು. ವಲಸಿಗರ ಬದಲು ಮೂಲ ಬಿಜೆಪಿಯವರಿಗೇ ಈ ಸ್ಥಾನ ಕೊಡಬೇಕೆಂಬುದು ಪಕ್ಷದ ವರಿಷ್ಠರ ನಿರ್ಧಾರವಾಗಿತ್ತು.

ಇನ್ನು ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಂತಿನಗರ ಕ್ಷೇತ್ರಕ್ಕೆ ಬಿಜೆಪಿಯ ಟಿಕೆಟ್ ಕೇಳಿದ್ದರು. ಯಡಿಯೂರಪ್ಪ ಮತ್ತಿತರ ಮುಖಂಡರು ಇವರಿಗೆ ಟಿಕೆಟ್ ತಪ್ಪಿಸಿದ್ದರೆನ್ನಲಾಗಿದೆ. ಈಗ ಅವರಿಗೆ ಮೇಯರ್ ಪಟ್ಟ ಕಟ್ಟುವ ಮೂಲಕ ಸಮಧಾನ ಮಾಡಲಾಗಿದೆ.

ಮತ್ತೊಂದು ಲೆಕ್ಕಾಚಾರ ಎಂದರೆ, ಮೂಲತಃ ಉದ್ಯಮಿಯಾಗಿರುವ ಗೌತಮ್ ಕುಮಾರ್ ಜೈನ್ ಅವರು ಬಿಜೆಪಿ ಮುಖಂಡರಾದ ಪಿ.ಸಿ. ಮೋಹನ್, ತುಳಸಿ ಮುನಿರಾಜು ಮೊದಲಾದವರಿಗೆ ಆಪ್ತರಾಗಿದ್ಧಾರೆ. ಬೆಂಗಳೂರಿನಲ್ಲಿ ಆರ್. ಅಶೋಕ್ ಅವರಿಗಿರುವ ಪ್ರಾಬಲ್ಯ ತಗ್ಗಿಸಲು ಗೌತಮ್ ಜೈನ್ ಅವರನ್ನು ಬಳಕೆ ಮಾಡಲಾಗಿದೆ.

ಬಿಜೆಪಿಯಲ್ಲಿ ಸಂಘ ಪರಿವಾರಕ್ಕೆ ಹೆಚ್ಚು ನಿಷ್ಠರಾಗಿರುವವರಿಗೆ ಹೆಚ್ಚು ಮಣೆ ಹಾಕುವ ಪರಂಪರೆ ಶುರುವಾಗಿದೆ. ಪಕ್ಷದ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ವಹಿಸಲಾಗಿರುವ ಜವಾಬ್ದಾರಿಯೂ ಇದೇ ಆಗಿದೆ.

ರಾಜ್ಯ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರ ಹಿಡಿತ ಕಡಿಮೆಯಾಗುತ್ತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಮೇಯರ್ ಚುನಾವಣೆಯಲ್ಲಿ ಇದು ಇನ್ನಷ್ಟು ಸ್ಪಷ್ಟವಾಗಿ ಗೋಚರವಾಗಿದೆ. ಮೇಯರ್ ಅಭ್ಯರ್ಥಿ ವಿಚಾರದಲ್ಲಿ ಪದ್ಮನಾಭ ರೆಡ್ಡಿ, ಎಲ್. ಶ್ರೀನಿವಾಸ ಮತ್ತು ಮುನೀಂದ್ರ ಕುಮಾರ್ ಈ ಮೂವರಲ್ಲಿ ಒಬ್ಬರಿಗಾದರೂ ಅವಕಾಶ ಕೊಡಬೇಕೆಂದು ಯಡಿಯೂರಪ್ಪ ಅವರು ಪ್ರಯತ್ನಿಸಿದ್ದರು. ಆರ್. ಅಶೋಕ್ ಅವರೂ ಕೂಡ ಪದ್ಮನಾಭ ರೆಡ್ಡಿ ಪರ ಇನ್ನಿಲ್ಲದಷ್ಟು ಲಾಬಿ ನಡೆಸಿದ್ದರು. ಆದರೆ, ಕೊನೆಗೆ ಬಂದ ಅಚ್ಚರಿ ಹೆಸರು ಗೌತಮ್ ಜೈನ್ ಅವರದ್ದು.

ಸಂತೋಷ್ ಅವರು ಗೌತಮ್ ಆಯ್ಕೆ ಮೂಲಕ ಕೇವಲ ಯಡಿಯೂರಪ್ಪ ಮಾತ್ರವಲ್ಲ ಆರ್. ಅಶೋಕ್, ವಿ. ಸೋಮಣ್ಣ, ಸತೀಶ್ ರೆಡ್ಡಿ, ಎಸ್.ಆರ್. ವಿಶ್ವನಾಥ್ ಮತ್ತು ಅಶ್ವಥನಾರಾಯಣ ಅವರೆಲ್ಲರಿಗೂ ರಾಜ್ಯ ಬಿಜೆಪಿಯಲ್ಲಿ ಇನ್ನು ಹೈಕಮಾಂಡ್ ಅಣತಿಯಂತೆ ಎಲ್ಲವೂ ನಡೆಯಲಿದೆಯೇ ಹೊರತು ನಿಮ್ಮ ಲಾಭಿಯಿಂದಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

Leave a Reply