ಪ್ರಧಾನಿ ಮೋದಿಗೆ ಹೆಂಗರುಳಿಲ್ಲ, ರಾಜ್ಯ ಬಿಜೆಪಿ ಸಂಸದರಿಗೆ ಗಂಡಸ್ತನವಿಲ್ಲ!

ಸೋಮಶೇಖರ್ ಪಿ. ಭದ್ರಾವತಿ

ದಕ್ಷಿಣ ಭಾರತದಲ್ಲಿ ದಿಕ್ಕು ದೆಸೆ ಇಲ್ಲದಿದ್ದ ಭಾರತೀಯ ಜನತಾ ಪಕ್ಷವನ್ನು ತಲೆ ಮೇಲೆ ಹೊತ್ತುಕೊಂಡ ಕರ್ನಾಟಕದ ತಲೆ ಕಡಿಯುವ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿರುವುದು ರಾಜ್ಯದ ಜನರ ಭ್ರಮನಿರಶನಕ್ಕೆ ಕಾರಣವಾಗಿದೆ.

ವಿಧಾನಸಭೆಯಲ್ಲಿ 105, ಲೋಕಸಭೆಯಲ್ಲಿ 25 ಸದಸ್ಯರನ್ನು ಆರಿಸಿಕೊಟ್ಟ ಕರ್ನಾಟಕದ ಜನರ ಬಗ್ಗೆ ಈ ಪರಿ ತಾತ್ಸಾರ ಯಾಕೋ ಅರ್ಥವಾಗುತ್ತಿಲ್ಲ!

ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದ ಪ್ರವಾಹ ಬಂದು ಅಲ್ಲಿನ ಜನರ ಬದುಕು ಬೀದಿಗೆ ಬಿದ್ದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮನ ಮಿಡಿದು ಸ್ಪಂದಿಸಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು, ಕೇಂದ್ರದಿಂದ ಎಲ್ಲ ಅಗತ್ಯ ನೆರವಿನ ಭರವಸೆ ಕೊಟ್ಟಿದ್ದಾರೆ. ಹಾಗೆಂದು ಸ್ವತಃ ಮೋದಿ ಅವರೇ ಟ್ವಿಟ್ ಮಾಡಿದ್ದಾರೆ.

ಒಳ್ಳೆಯದು, ಬಿಹಾರದ ಜನರ ಸಂಕಷ್ಟಕ್ಕೆ ಮೋದಿ ಸ್ಪಂದನೆ ಸ್ವಾಗತಾರ್ಹ. ಅದು ಅವರ ಕರ್ತವ್ಯ ಕೂಡ. ಆದರೆ ಹಿಂದೆಂದೂ ಕಂಡು ಕೇಳರಿಯದ ಪ್ರವಾಹಕ್ಕೆ ತತ್ತರಿಸಿದ ಕರ್ನಾಟಕಕ್ಕೆ ಮೋದಿ ಅವರಿಂದ ಇದೇ ಕಾಳಜಿ, ಮಮಕಾರ ಸಿಗದೆ ಹೋದದ್ದು ದುರಂತ. ಇದಕ್ಕೆ ಸಕಾರಣ ಏನೆಂಬುದು ಮಾತ್ರ ಗೊತ್ತಾಗುತ್ತಿಲ್ಲ.

ವಿಧಾನಸಭೆಯಲ್ಲಿ 105 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಬಿಜೆಪಿಯನ್ನು ಆಯ್ಕೆ ಮಾಡಲಾಗಿದೆ. ಜತೆಗೆ ಇವರ ಅತ್ಯಂತ ‘ಪವಿತ್ರ’ ಕಾರ್ಯ ‘ಆಪರೇಷನ್ ಕಮಲ’ದ ಮೂಲಕ ಅಸ್ತಿತ್ವಕ್ಕೆ ಬಂದ ಅದರ ಸರ್ಕಾರವನ್ನು ಕಂಡಿದ್ದೇವೆ. ಇನ್ನು ಮೊನ್ನೆ ನಡೆದ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬರೋಬ್ಬರಿ 25 ಸಂಸದರನ್ನು ಆರಿಸಿ ಕಳುಹಿಸಲಾಗಿದೆ. ಆದರೂ ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ಮೋದಿ ಅವರಿಂದ ನಯಾ ಪೈಸೆ ಪರಿಹಾರ ಬಂದಿಲ್ಲ. ಪರಿಹಾರ ಹಾಳಾಗಿ ಹೋಗಲಿ, ಸಂತ್ರಸ್ತರ ದುಸ್ಥಿತಿ ಬಗ್ಗೆ ಒಂದಿಷ್ಟು ಅನುಕಂಪ, ಕಾಳಜಿ ಕೂಡ ವ್ಯಕ್ತವಾಗಿಲ್ಲ.

ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಬಂದರೆ ಅಭಿವೃದ್ಧಿ ಎಂಬುದು ಆಕಾಶದೆತ್ತರ ಕುಣಿದಾಡುತ್ತದೆ ಎಂದು ಗಂಟಲು ಹರಿದುಕೊಳ್ಳುತ್ತಿದ್ದ ಭಟ್ಟಂಗಿಗಳು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ.

ದೆಹಲಿಗೆ ಕರ್ನಾಟಕಕ್ಕಿಂತ ಬಿಹಾರ ಹತ್ತಿರ ಇರುವುದರಿಂದ ಬಿಹಾರದ ಸಂತ್ರಸ್ತರ ಕೂಗು ಬೇಗ ಕೇಳಿಸಿರಬಹುದು. ಆದರೆ ಕರ್ನಾಟಕ ದೂರ ಇದೆ ನೋಡಿ, ಹೀಗಾಗಿ ಇಲ್ಲಿನ ಕೂಗು ಅವರ ಕಿವಿ ತಮಟೆ ತಲುಪುತ್ತಿಲ್ಲ.

ಯಡಿಯೂರಪ್ಪ ಅವರ ಮೇಲೆ ಕೇಂದ್ರ ನಾಯಕರಿಗೆ ಏನು ಕೋಪ ಇದೆಯೋ ಅದನ್ನು ಅವರ ಮೇಲೆ ತೀರಿಸಿಕೊಳ್ಳಲಿ. ಅದನ್ನು ಬಿಟ್ಟು ನಿರ್ಗತಿಕ ಪ್ರವಾಹ ಪೀಡಿತರ ಮೇಲೆ ತೀರಿಸಿಕೊಳ್ಳುವುದು ಎಷ್ಟು ಸರಿ?

ಇನ್ನು ಜನ ಮತ ಹಾಕಿ ಆಯ್ಕೆ ಮಾಡಿದ ನಾಯಕರ ಮಾತುಗಳನ್ನು ಕೇಳುತ್ತಿದ್ದರೆ ಜನ್ಮ ಸಾರ್ಥಕ ಎನಿಸುತ್ತಿದೆ. ತೇಜಸ್ವಿ ಸೂರ್ಯ ಎಂಬ ಎಳಸಲು ಮೋದಿಗೆ ಬಕೆಟ್ ಹಿಡಿಯುವ ಭರದಲ್ಲಿ ಪ್ರವಾಹ ಪರಿಹಾರಕ್ಕೆ ಕೇಂದ್ರದ ಬಾಗಿಲು ತಟ್ಟುವುದು ಸರಿಯಲ್ಲ ಅಂತಾರೆ. ಅತ್ತ ಮುಂದಿನ ಮುಖ್ಯಮಂತ್ರಿ ನಾನೇ ಎಂಬ ಕನಸಲ್ಲಿರೋ ಸಚಿವ ಮಾಧುಸ್ವಾಮಿ ಪರಿಹಾರ ನೀಡುವವರೆಗೂ ತಾಳ್ಮೆ ಇರಬೇಕು ಅಂತಾ ಬಿಟ್ಟಿ ಉಪದೇಶ ಕೊಟ್ಟಿದ್ದಾರೆ. ಅಧಿಕಾರ ಹಿಡಿಯುವಾಗ ಇವರಿಗಿದ್ದ ಚುರುಕುತನ ಅದು ಸಿಕ್ಕ ಮೇಲೆ ಎಲ್ಲೋಯ್ತು ಅಂತಾ ಜನ ಹುಡುಕಾಡುತ್ತಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲೇ ಆಗಲಿ ವಿದೇಶದಲ್ಲೇ ಆಗಲಿ ಭಾಷಣ ಆರಂಭ ಮಾಡುವ ಮುನ್ನ ನಾನು 130 ಕೋಟಿ ಭಾರತೀಯರ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಾರೆ. ಅವರ ಆ 130 ಕೋಟಿ ಭಾರತೀಯರಲ್ಲಿ ಕರ್ನಾಟಕದ 7 ಕೋಟಿ ಜನ ಇದ್ದಾರೋ, ಇಲ್ಲವೋ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

Leave a Reply