ಮೇಯರ್ ವಿಚಾರದಲ್ಲಿ ಮೂಗು ತೂರಿಸಬೇಡಿ! ಅನರ್ಹರಿಗೆ ಬಿಜೆಪಿ ಶಾಕ್

ಡಿಜಿಟಲ್ ಕನ್ನಡ ಟೀಮ್:

ಇರುಳು ಕಂಡ ಬಾವಿಗೆ ಹಗಲು ಬೀಳಬಾರದು ಎಂಬ ನಾಣ್ಣುಡಿ ಇದೆ. ಆದರೆ ಅನರ್ಹ ಶಾಸಕರು ಬಾವಿಗೆ ಬಿದ್ದು ಬಾಯಿ ಬಡಿದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.

ಬೃಹತ್ ಬೆಂಗಳೂರು ನಗರ ಪಾಲಿಕೆ ಮೇಯರ್ ಆಯ್ಕೆಯಲ್ಲಿ ತಮ್ಮ ಕ್ಷೇತ್ರದ ಕಾರ್ಪೊರೇಟರ್ ಅವರಿಗೆ ಆದ್ಯತೆ ನೀಡಬೇಕು ಎಂಬುದು ಬೆಂಗಳೂರಿನ ಅನರ್ಹ ಶಾಸಕರ ಬೇಡಿಕೆಗಳಲ್ಲಿ ಒಂದಾಗಿತ್ತು. ಆದರೆ ಈ ಬೇಡಿಕೆಯನ್ನು ಬಿಜೆಪಿ ಕಸದಬುಟ್ಟಿಗೆ ಎಸೆದು ಕೈ ತೊಳೆದುಕೊಂಡಿದೆ. ಅಷ್ಟೇ ಅಲ್ಲ, ಮೇಯರ್ ಆಯ್ಕೆ ಪಕ್ಷದ ಆಂತರಿಕ ವಿಚಾರ ಇದರಲ್ಲಿ ಮೂಗು ತೂರಿಸಬೇಡಿ ಎಂದು ಹೇಳುವ ಮೂಲಕ ನಿಮಗೂ ನಮಗು ಸಂಬಂಧವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅನರ್ಹರಿಗೆ ಹೇಳಿದ್ದಾರೆ ಎಂಬ ವರದಿಗಳು ಬಂದಿವೆ.

ಇದು ಬಿಜೆಪಿ ಸರ್ಕಾರ ಬಂದರೆ ಪ್ರಬಲ ನಾಯಕರಾಗಿ ಹೊರಹೊಮ್ಮುವ ಲೆಕ್ಕಾಚಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆಂಗಳೂರಿನ ಶಾಸಕರಿಗೆ ಸಿಡಿಲು ಬಡಿದಂತೆ ಆಗಿದೆ. ಈಗ ನಮ್ಮ ಪರಿಸ್ಥಿತಿ ಆಟಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದೆ ಎಂದು ಮನವರಿಕೆಯಾಗಿದೆ.

17 ಶಾಸಕರಿಗೆ ಮಂತ್ರಿಗಿರಿ, ಹಣದ ಆಸೆ ತೋರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ ಬಿಜೆಪಿ, ಈಗ ಈ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಇಳಿದು ಬಸವಳಿಯುವಂತೆ ಮಾಡಿದೆ. ತಾವು ಹೇಳಿದ ಕೆಲಸ ಮಾಡಿಕೊಡುತ್ತೇವೆ ಎಂದಿದ್ದ ಯಡಿಯೂರಪ್ಪ ಕೈ ಎತ್ತಿದ್ದಾರೆ. ಬಿಜೆಪಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ದೋಸ್ತಿ ಸರ್ಕಾರದಲ್ಲಿದ್ದ 17 ಶಾಸಕರಿಗೆ ಅಂಗೈಯಲ್ಲೇ ಅರಮನೆ ತೋರಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅವರನ್ನು ಕಾಲ ಕಸದಂತೆ ಕಾಣುತ್ತಿದ್ದು, ಅನರ್ಹರ ಹೊಟ್ಟೆಗೆ ಕೆಂಡ ಸುರಿದಂತಾಗಿದೆ.

ಇನ್ನು ಅನರ್ಹರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆ ಅಂತ ಸಿಎಂ ಯಡಿಯೂರಪ್ಪ ಹೇಳಿದರೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಟೀಲ್ ಸೇರಿದಂತೆ ಮತ್ತೊಂದು ಬಣ ಅನರ್ಹರಿಗೆ ಬಿಜೆಪಿ ಟಿಕೆಟ್ ಇಲ್ಲ ಎಂದಿದೆ. ಒಟ್ಟಿನಲ್ಲಿ ಸದ್ಯದ ಬೆಳವಣಿಗೆ ನೋಡಿದರೆ ಯಡಿಯೂರಪ್ಪನವರ ಅಧಿಕಾರದ ಆಸೆ, ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಹೈಕಮಾಂಡ್ ಗೆ ಇರುವ ಸಿಟ್ಟಿಗೆ ಅನರ್ಹ ಹರಕೆಯ ಕುರಿಯಂತೆ ಕಾಣುತ್ತಿರೋದು ಸ್ಪಷ್ಟವಾಗಿದೆ.

Leave a Reply