ಮೋದಿಗೆ ಉಘೇ ಅಂದವರೇ ಪ್ರಧಾನಿ ನಡೆ ಟೀಕಿಸುತ್ತಿದ್ದಾರೆ!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಪ್ರವಾಹ ವಿಚಾರದಲ್ಲಿ ಕರ್ನಾಟಕದ ಬಗ್ಗೆ ತಳೆದಿರುವ ನಿಲುವು ಯಾವೊಬ್ಬ ಕನ್ನಡಿಗನಿಗೂ (ಬಲಹೀನ ಸಂಸದರು, ಬಕೆಟ್ ನಾಯಕರನ್ನು ಹೊರತುಪಡಿಸಿ) ಸಹಿಸಲಾಗುತ್ತಿಲ್ಲ. ಪರಿಣಾಮ ಮೋದಿಗೆ ಉಘೇ ಎಂದವರೇ ಈಗ ಮೋದಿ ನಡೆಯನ್ನು ಟೀಕಿಸುತ್ತಿದ್ದಾರೆ.

ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆಗಿರಬಹುದು ಯುವ ಬ್ರಿಗೇಟ್ ಜನಪ್ರಿಯ ಮಾತುಗಾರ ಹಾಗೂ ಪ್ರಧಾನಿ ಮೋದಿಯ ಪ್ರಚಾರಕ ಎಂದೇ ಖ್ಯಾತಿ ಪಡೆದಿರುವ ಚಕ್ರವರ್ತಿ ಸೂಲಿಬೆಲೆ ಕೂಡ ಪ್ರವಾಹ ವಿಚಾರದಲ್ಲಿ ಮೋದಿ ಹಾಗೂ ಕೇಂದ್ರ ಸರ್ಕಾರದ ನಡೆ ಪ್ರಶ್ನಿಸಿದ್ದಾರೆ. ಆದರೆ ನಮ್ಮ ದುರಾದೃಷ್ಟ ಏನಪ್ಪಾ ಅಂದ್ರೆ ನಮ್ಮ ಸಂಸದರು ಇವರ ವಿರುದ್ಧವೇ ಜಟಾಪಟಿಗೆ ಬಿದ್ದಿರೋದು.

2019ರಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ಉಗ್ರರು ಪುಲ್ಮಾದಲ್ಲಿ ಸೈನಿಕರ ಮೇಲೆ ಕಾರ್ಯಾಚರಣೆ ನಡೆದು, ಭಾರತ ಪಾಕಿಸ್ತಾನದ ಉಗ್ರ ತಾಣ ಬಾಲಾಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರಿಂದ ಭಾರತೀಯರು ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಭರ್ಜರಿ ಗೆಲುವು ಕೊಟ್ರು.  ಇದೀಗ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದ ಜನರು ಮೋದಿ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನೇರವಾಗಿಯೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಕಟ್ಟರ್ ನಾಯಕ ಎಂದೇ ಖ್ಯಾತವಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ನರೇಂದ್ರ ಮೋದಿ ಅವರ ವಿರುದ್ಧವೇ ಗುಡುಗಿದ್ದಾರೆ. ಬಿಹಾರ ರಾಜ್ಯದ ಪ್ರವಾಹಕ್ಕೆ ಪ್ರಧಾನಿ ಟ್ಚೀಟ್ ಮಾಡಿರುವ ವಿಚಾರದ ಬಗ್ಗೆ ವಾಗ್ದಾಳಿ ನಡೆಸಿದ್ದು, ಕೇಂದ್ರದ ನಾಯಕತ್ವ ವಿರುದ್ಧ ಯತ್ನಾಳ್ ನೇರ ವಾಗ್ದಾಳಿ ಮಾಡಿದ್ದಾರೆ. ‘ಸಿಎಂ ಯಡಿಯೂರಪ್ಪ ಅವರನ್ನ ಕೇಂದ್ರ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ. ಸಿಎಂ ಅವರನ್ನು ಟಾರ್ಗೆಟ್ ಉದ್ದೇಶದಿಂದಲೇ ರಾಜ್ಯಕ್ಕೆ ಅನುದಾನ ನೀಡುತ್ತಿಲ್ಲ. ರಾಜ್ಯದಲ್ಲಿ ಈಗ ಎಲೆಕ್ಷನ್ ಕೂಡ ಇಲ್ಲ ಎಂದು ಈ ಭಾವನೆ ಸರಿಯಲ್ಲ್ಲ. ರಾಜ್ಯದಿಂದ  ಜನ 25 ಸಂಸದರನ್ನು ಆಯ್ಕೆ ಮಾಡಿದ್ದಾರೆ. ಇಡೀ ದಕ್ಷಿಣ ಭಾರತದಲ್ಲಿ ಇಷ್ಟು ಸಂಖ್ಯೆ ಎಲ್ಲಿದೆ..? ಎಂದು ಪ್ರಶ್ನೆ ಮಾಡಿರುವ ಯತ್ನಾಳ್, ಹೀಗೆ ಮುಂದುವರಿಸಿದರೆ ಜನ ತಕ್ಕ ಪಾಠ ಕಲಿಸುತ್ತಾರೆ. ಎಂತೆಂತವರನ್ನೋ ಜನ ಮನೆಗೆ ಕಳಿಸಿದ್ದಾರೆ. ಅಂಥದ್ರಲ್ಲಿ ಇವರೆಲ್ಲ ಯಾವ ಲೆಕ್ಕ. ಇವರನ್ನು ಕೆಳಗಿಳಿಸೋದು ನಾವಲ್ಲ, ಜನ ಇಳಿಸ್ತಾರೆ’ ಎಂದು ಮೋದಿಯನ್ನೇ ಕುಟುಕಿದ್ದಾರೆ.

‘ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಟ್ವೀಟ್ ಮಾಡ್ತಾರೆ ಅಂದ್ರೆ ನಮ್ಮ ಜನ ಏನ್ ಮಾಡಿದ್ದಾರೆ..? ಜನರಿಗೆ ನಾವೇನು ಉತ್ತರ ಕೊಡಬೇಕು? ಸಾಮಾಜಿಕ ಜಾಲತಾಣಗಳಲ್ಲಿ ಜನ ನಮ್ಮ ವಿರುದ್ಧ ಪ್ರಶ್ನೆ ಮಾಡ್ತಿದ್ದಾರೆ. ನಮ್ಮನ್ನ ಒಂದು ನಿಯೋಗ ಕೊಂಡೊಯ್ರಿ. ನಾವು ಮಾತಾಡ್ತೀವಿ. ಹಿಂದೆ ನಾನೂ ಸಂಸದನಾಗಿದ್ದೋನು. ನನಗೂ ಎಲ್ಲವೂ ಅನುಭವ ಇದೆ.  ನಮ್ಮ ಸಂಸದರು ಅದನ್ನ ಪ್ರಶ್ನೆ ಮಾಡಬೇಕು’ ಎಂದು ಕೇಂದ್ರ ಬಿಜೆಪಿ ನಾಯಕರು ಹಾಗೂ ರಾಜ್ಯದ ಸಂಸದರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರವಷ್ಟೇ ಚಕ್ರವರ್ತಿ ಸೂಲಿಬೆಲೆ ಮೋದಿಯನ್ನು ಖಂಡಿಸಿದ್ರು. ‘ಕರ್ನಾಟಕದಲ್ಲಿ ಭಾರೀ ಮಳೆಯಿಂದ ಪ್ರವಾಹ ಬಂದರೂ ಯಾಕೆ ಪರಿಹಾರ ಕೊಡುವ ಮನಸ್ಸು ಮಾಡಿಲ್ಲ ಎಂದು ನೇರವಾಗಿಯೇ ಪ್ರಶ್ನೆ ಮಾಡಿದ್ದರು. ಜೊತೆಗೆ ನಮ್ಮ ರಾಜ್ಯದಿಂದ ಗೆದ್ದು ಹೋಗಿರುವ ಸಂಸದರು ಮೋದಿ ಎದುರು ನಿಂತು ಪರಿಹಾರ ಕೇಳುವ ದಾರ್ಷ್ಯತನ ತೋರುತ್ತಿಲ್ಲ. ಅದೇ ತಮಿಳುನಾಡು, ಆಂಧ್ರ ಪ್ರದೇಶದ ಸಂಸದರನ್ನು ನೋಡಿ ಕಲಿತುಕೊಳ್ಳಿ ಎಂದಿದ್ದರು. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದೆ ಬೇರೆ ಸರ್ಕಾರ ಇದ್ದರೆ ಯಾವ ರೀತಿ ಪ್ರಶ್ನೆ ಮಾಡುತ್ತಿದ್ದೀರಿ. ಈಗ ಯಾಕೆ ಆ ಧೈರ್ಯ ನಿಮ್ಮಲ್ಲಿ ಇಲ್ಲ’ ಎಂದು ಕಿಡಿಕಾರಿದ್ರು.

ಕಳೆದ ಲೋಕಸಭೆಯಲ್ಲಿ ಮೋದಿ ಗೆಲುವಿಗಾಗಿ ಇಡೀ ಕರ್ನಾಟಕವನ್ನು ಸುತ್ತಾಡಿದ ಮನುಷ್ಯ ಚಕ್ರವರ್ತಿ ಸೂಲಿಬೆಲೆ. ಇವರೇ ಮೋದಿಯ ಕಠೋರ ನೀತಿಯನ್ನು ಖಂಡಿಸಿದ್ದಾರೆ. ಈಗಲಾದರೂ ಪ್ರಧಾನಿ ಮೋದಿಗೆ, ಕೇಂದ್ರ ಸರ್ಕಾರಕ್ಕೆ ರಾಜ್ಯದ ಪ್ರವಾಹ ಸಂತ್ರಸ್ತರ ಕೂಗು ಕೇಳುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Leave a Reply