ಬಳ್ಳಾರಿ ಮುಟ್ಟಿ ಇಕ್ಕಟ್ಟಿಗೆ ಸಿಲುಕಿದ ಸಿಎಂ..! ವಿಭಜನೆ ಮುಂದಕ್ಕೆ

ಡಿಜಿಟಲ್ ಕನ್ನಡ ಟೀಮ್:

ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಳ್ಳಾರಿ ಜಿಲ್ಲೆ ಮಾಡಿದರೆ ಸರ್ಕಾರ ಬೀಳಿಸುವ ಬೆದರಿಕೆಗೆ ಬಿಎಸ್ ವೈ ಗಲಿಬಿಲಿಯಾಗಿದ್ದಾರೆ.

ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸಲು ಸಿಎಂ ಯಡಿಯೂರಪ್ಪ ಮುಂದಾದ್ರೆ ಸರ್ಕಾರವೇ ಉರುಳಿ ಹೋಗುವ ಸಂಭವ ಹೆಚ್ಚಾಗಿದೆ. ನಿನ್ನೆ ಬಳ್ಳಾರಿ ಬಂದ್ ಬಳಿಕ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜಿಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಸತತ ಒಂದೂವರೆ ಗಂಟೆಗಳ ಸುಧೀರ್ಘ ಸಭೆ ಬಳಿಕ ಯಾವುದೇ ನಿರ್ಧಾರಕ್ಕೆ ಬರಲಾಗದೆ ಸಭೆ ಅಂತ್ಯವಾಗಿದೆ.

ಒಂದು ವೇಳೆ ಬಳ್ಳಾರಿಯನ್ನು ವಿಭಜಿಸಿದ್ರೆ ನಾವು ರಾಜೀನಾಮೆ ಕೊಡ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ನೇರವಾಗಿಯೇ ಬಿಜೆಪಿ ಶಾಸಕರು ತಿಳಿಸಿದ್ರು ಎನ್ನುವುದು ಗೊತ್ತಾಗಿದೆ.

ಬಳ್ಳಾರಿ ವಿಭಜಿಸಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡುವ ಕುರಿತು ನಡೆದ ಚರ್ಚೆಯಲ್ಲಿ ವಿರೋಧವೇ ಹೆಚ್ಚಾಗಿದೆ. ಹೀಗಾಗಿ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಒಂದು ನಿರ್ಧಾರ ಕೈಗೊಳ್ಳಲು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ. ಸಭೆಯಲ್ಲಿ ಜಿಲ್ಲೆ ವಿಭಜಿಸಲು ಪರಕ್ಕಿಂತಲೂ, ವಿರೋಧವೇ ಹೆಚ್ಚಾದ ಹಿನ್ನೆಲೆಯಲ್ಲಿ ಸಭೆಯನ್ನು ಉಪಚುನಾವಣೆ ಮುಗಿದ ನಂತರ ಮಾಡಲು ನಿರ್ಧಾರ ಮಾಡಲಾಯ್ತು. ಯಾವುದೇ ‌ಕಾರಣಕ್ಕೂ ವಿಜಯನಗರವನ್ನು ‌ಜಿಲ್ಲೆ ಮಾಡದಂತೆ ಕರುಣಾಕರ ರೆಡ್ಡಿ, ಎಸ್.ಟಿ ಸೋಮಶೇಖರ್ ರೆಡ್ಡಿ, ಪಿಟಿ ಪರಮೇಶ್ವರ್ ‌ನಾಯ್ಕ್ ಪಟ್ಟು ಹಿಡಿದರು ಎನ್ನಲಾಗಿದೆ. ಕಾಂಗ್ರೆಸ್, ಬಿಜೆಪಿ ಶಾಸಕರ ಆಗ್ರಹಕ್ಕೆ ಮಣಿದ ಸಿಎಂ ಯಡಿಯೂರಪ್ಪ, ಸಭೆ ಮುಂದೂಡಿಕೆ ಮಾಡಿದ್ರು. ಸಭೆ ಬಳಿಕ ಮಾತನಾಡಿದ ವಿವಿಧ ನಾಯಕರು ಹೀಗೇಳಿದ್ರು.

‘ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಪ್ಪಳ, ದಾವಣಗೆರೆ, ಬಳ್ಳಾರಿ ಜಿಲ್ಲೆಯ ಸಂಸದರು, ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ವಿಜಯನಗರವನ್ನು ಜಿಲ್ಲೆ ‌ಮಾಡುವ ಕುರಿತು ಸಿಎಂ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ ಇಂದಿನ ಸಭೆಯಲ್ಲಿ ಬಳ್ಳಾರಿ ವಿಭಜನೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇನ್ನೊಂದು ಬಾರಿ ಸಭೆ ಕರೆದು ಚರ್ಚೆ ನಡೆಸಿ ಅವರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಬೇಕು. ಚಿಂತಕರು, ಸಾಹಿತಿಗಳು, ಬರಹಗಾರರು ಸೇರಿದಂತೆ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಬೇಕು. ವೈಯಕ್ತಿಕವಾಗಿ ನಾನು ಏನು ಹೇಳಲು ಆಗುವುದಿಲ್ಲ.. ಏಕೆಂದರೆ ಸರ್ಕಾರದ ಒಂದು ಭಾಗ ನಾನು. ಏನೇ ಇದ್ರು ಸಿಎಂ ಜೊತೆ ಮಾತ್ನಾಡ್ತಿನಿ..
ಶ್ರೀರಾಮುಲು, ಸಚಿವ

‘ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಬಂದಿತ್ತು. ಅದನ್ನ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗಿತ್ತು. ಆ ನಿಟ್ಟಿನಲ್ಲಿ ಇವತ್ತು ಮುಖ್ಯಮಂತ್ರಿಗಳು ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ರು. ಎಲ್ಲರೂ ಅವರವರ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಕೆಲವರು ಚಿಕ್ಕ ಜಿಲ್ಲೆಯಾದ್ರೆ ಅಭಿವೃದ್ಧಿಗೆ ಅನುಕೂಲ ಆಗುತ್ತೆ ಅಂತಾ ಹೇಳಿದ್ದಾರೆ‌ ಡಿಸೆಂಬರ್ 5 ರಂದು ಉಪ ಚುನಾವಣೆ ಇರೋ ಹಿನ್ನೆಲೆಯಲ್ಲಿ ಆ ಪ್ರಸ್ತಾವನೆ ತಡೆ ಹಿಡಿಯಲಾಗಿದೆ. ಉಪ ಚುನಾವಣೆ ಬಳಿಕ ಮತ್ತೊಮ್ಮೆ ಎಲ್ಲರ ಜೊತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.’
ಆರ್. ಅಶೋಕ್, ಕಂದಾಯ ಸಚಿವ

‘ವಿಜಯನಗರ ಜಿಲ್ಲೆ ಆಗಲೇಬೇಕು ಅನ್ನೋ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿ ಇರುತ್ತೇನೆ. ಇಂದಿನ ಸಭೆಯಲ್ಲಿ ಎಲ್ಲರೂ ಚರ್ಚೆ ಮಾಡಿದ್ದೇವೆ. ಅರ್ಜೆಂಟ್‌ನಲ್ಲಿ ತೀರ್ಮಾನ ಮಾಡೋದು ಬೇಡ ಎಂದಿದ್ದಾರೆ. ಈ ಹೋರಾಟ ಆನಂದ್ ಸಿಂಗ್ ಶುರು ಮಾಡಿದ್ದಲ್ಲ, ಮೊದಲಿನಿಂದಲೂ ಹೋರಾಟ ಇತ್ತು. ಸಿಎಂ ಹಾಗು ಆರ್ ಅಶೋಕ್ ಅವರು ಉಪಚುನಾವಣೆ ಬಳಿಕ ಈ ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ. ಹಾಗಾಗಿ ಮತ್ತೊಂದು ದಿನ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ. ವಿಜಯನಗರ ಜಿಲ್ಲೆ ಆಗಲೇ ಬೇಕೇಂದು ಶಪಥ ಮಾಡಿದ್ದೆ. ಆ ಶಪಥ ಹಾಗೆಯೇ ಇರುತ್ತದೆ ಅದರಲ್ಲಿ ಬದಲಾವಣೆ ಇಲ್ಲ.ನಾನು ವಿಜಯನಗರ ಜಿಲ್ಲೆ ಮಾಡೇ ಮಾಡ್ತೀನಿ.’
ಆನಂದ್ ಸಿಂಗ್, ಹೊಸಪೇಟೆ ಅನರ್ಹ ಶಾಸಕ

‘ಅಖಂಡ ಜಿಲ್ಲೆಯಾಗಿ ಬಳ್ಳಾರಿ ಉಳಿಯಬೇಕು ಎಂಬುದು ನಮ್ಮ ಅಭಿಪ್ರಾಯ. ಅದನ್ನ ನಾವು ಮುಖ್ಯಮಂತ್ರಿಗೆ ಹೇಳಿದ್ದೀವಿ. ಹೊಸ ಜಿಲ್ಲೆ ಮಾಡಲು ಪರ ವಿರೋಧ ಎರಡೂ ಇದೆ. ಚರ್ಚೆಯಾದ ಬಳಿಕ ಸೂಕ್ತ ನಿರ್ಧಾರ ಆಗುತ್ತೆ.’
ಪರಮೇಶ್ವರ್ ನಾಯ್ಕ್, ಮಾಜಿ ಸಚಿವ

‘ಬಳ್ಳಾರಿ ವಿಭಜನೆ ಮಾಡುವ ಬದಲು ವಿಜಯನಗರ ಜಿಲ್ಲೆ ಎಂದು ಮರುನಾಮಕರಣ ಮಾಡಿ ಎಂದು ಸಿಎಂ ಬಿಎಸ್‌ವೈಗೆ ಸಲಹೆ ಕೊಡಲಾಗಿದೆ. ಈಗಿರುವ ಬಳ್ಳಾರಿ ಹೆಸರನ್ನು ತೆಗೆದು ಹಾಕಿ. ವಿಜಯನಗರ ಎಂದು ಮರುನಾಮಕರಣ ‌ಮಾಡಿ. ಇದಕ್ಕೆ ನಮ್ಮೆಲ್ಲರ ಸಹಕಾರ ಇದೆ. ಆದರೆ ಬಳ್ಳಾರಿಯಿಂದ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚನೆ ಮಾಡೋದು ಬೇಡ.’
ಸೋಮಶೇಖರ್ ‌ರೆಡ್ಡಿ, ಶಾಸಕ

‘ಬಳ್ಳಾರಿ ಅಖಂಡ ಜಿಲ್ಲೆಯಾಗಿಯೇ ಇರಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಒಂದ್ವೇಳೆ ಎರಡು ಜಿಲ್ಲೆ ಮಾಡ್ತೀರಾ ಅಂದ್ರೆ ಒಂದು ಸಮಿತಿ ಮಾಡಿ‌ ಆ ಸಮಿತಿಯಿಂದ ವರದಿ ತರಿಸಿಕೊಳ್ಳಿ‌. ಪಶ್ಚಿಮ ಭಾಗದ ಐದು ತಾಲೂಕಿಗಳು ನಂಜುಂಡಪ್ಪ ವರದಿಯಲ್ಲಿ ಹಿಂದುಳಿದಿವೆ ಎಂದು ತಿಳಿಸಿದೆ.ಪ್ರತ್ಯೇಕ ಜಿಲ್ಲೆ ಮಾಡುವುದೇ ಆದರೆ ಹಗರಿಬೊಮ್ಮನಹಳ್ಳಿ ಕೇಂದ್ರವನ್ನಾಗಿ ಮಾಡಿ ಜಿಲ್ಲೆ ಮಾಡಿ ಅಂತಾ ಕೇಳಿದ್ದೇವೆ. ಎಲ್ಲದಕ್ಕೂ ಮಧ್ಯದಲ್ಲಿ ಹಗರಿಬೊಮ್ಮನಹಳ್ಳಿ ಇದೆ, ಹೀಗಾಗಿ ಹಗರಿಬೊಮ್ಮನಹಳ್ಳಿಯನ್ನ ಜಿಲ್ಲಾ ಕೇಂದ್ರ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ.’
ಭೀಮಾನಾಯ್ಕ್, ಶಾಸಕ

Leave a Reply