ಮಂಡ್ಯದಲ್ಲಿ ಆಪರೇಷನ್ ಮನ್ಮುಲ್‌ಗೆ ಜೆಡಿಎಸ್ ಗುನ್ನಾ..!

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ಭದ್ರ ಕೋಟೆ ಮಂಡ್ಯದಲ್ಲಿ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬಿಜೆಪಿಗೆ ಈಗ ನಿರಾಸೆ ಆಗಿದೆ. ಮನ್ಮುಲ್ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಸಿಕ್ಕಿದ್ದು, ಕಮಲ ಪಡೆ ಪ್ರಯತ್ನ ಮಕಾಡೆ ಮಲಗಿದೆ.

ಜೆಡಿಎಸ್ 8 ಜನ ಸದಸ್ಯರು ಹಾಗೂ ಬಿಜೆಪಿಯಿಂದ ಓರ್ವ ಸದಸ್ಯ ಆಯ್ಕೆಯಾಗಿದ್ದರು, ಆಪರೇಷನ್ ಕಮಲದ ಮೂಲಕ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಗೆದ್ದು ಜೆಡಿಎಸ್‌ಗೆ ಗುದ್ದು ಕೊಡಬೇಕು ಅನ್ನೋ ಬಿಜೆಪಿ ಕನಸು ಭಗ್ನವಾಗಿದೆ.

ಸೆಪ್ಟೆಂಬರ್ 23 ರಂದು ಮನ್ಮುಲ್ ಆಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅದಕ್ಕೂ ಮೊದಲೇ ಶಾಸಕ ಡಿ ಸಿ ತಮ್ಮಣ್ಣ ಆಪ್ತ ಎಸ್‌ಪಿ ಸ್ವಾಮಿಯನ್ನು ಆಪರೇಷನ್ ಕಮಲದ ಮೂಲಕ ಅಧ್ಯಕ್ಷ ಪಟ್ಟದ ಆಸೆ ತೋರಿಸಿ ಬಿಜೆಪಿಗೆ ಸೇರಿಸಿಕೊಳ್ಳಲಾಯ್ತು. ಜೆಡಿಎಸ್‌ 8 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ನಿಚ್ಚಳ ಬಹುಮತ ಹೊಂದಿದ್ದರೂ ಒಂದು ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರ ಹಿಡಿಯುವ ಕಸರತ್ತು ನಡೆಸಿತ್ತು. ಡಿಸಿಎಂ ಅಶ್ವತ್ಥ ನಾರಾಯಣ ಸ್ವತಃ ಅಖಾಡಕ್ಕೆ ಇಳಿದು ಆಪರೇಷನ್ ನಡೆಸಿದ್ರು. ಸಿಎಂ ಯಡಿಯೂರಪ್ಪ ಕೂಡ ಸ್ವಾಮಿ ಅವರನ್ನು ಬಿಜೆಪಿ ಬಾವುಟ ಕೊಟ್ಟು ಸ್ವಾಗತ ಮಾಡಿದ್ರು.

ಮನ್ಮುಲ್ ಅಧಿಕಾರ ಹಿಡಿದು ಮಂಡ್ಯದಲ್ಲಿ ಕಮಲ ಅರಳಿಸುವ ಕನಸು ಕಂಡಿದ್ದ ಕಮಲಪತಿಗಳಿಗೆ ಶಾಕ್ ಆಗಿದೆ. ಅಧಿಕಾರ ಹಿಡಿಯಲೇ ಬೇಕೆಂಬ ಹಠದಿಂದ ಜೆಡಿಎಸ್‌ನ ಇಬ್ಬರು ನಿರ್ದೇಶಕರನ್ನು ವಜಾ ಮಾಡಲಾಗಿತ್ತು. ವೋಟಿಂಗ್ ಪವರ್ ಇಲ್ಲದಂತೆ ಮಾಡಲಾಗಿತ್ತು. ಆದ್ರೆ ಜೆಡಿಎಸ್ ಕೋರ್ಟ್ ಮೆಟ್ಟುಲೇರಿ ಮತದಾನದ ಹಕ್ಕು ಪಡೆದರು. ಕೊನೆಗೆ ಮತದಾನದ ಹಕ್ಕು ಹೊಂದಿದ್ದ ಸರ್ಕಾರಿ ಅಧಿಕಾರಿ ಜೆಡಿಎಸ್‌ಗೆ ವೋಟ್ ಹಾಕುವಂತೆ ಮನವೊಲಿಸಿ ಜೆಡಿಎಸ್ ಸಮಬಲ ಸಾಧಿಸಿತ್ತು. ಕೊನೆಗೆ ಲಾಟರಿ ಮೂಲಕ ಜೆಡಿಎಸ್‌ಗೆ ಮನ್ಮುಲ್ ಅಧಿಕಾರ ಗದ್ದುಗೆ‌ ಸಿಕ್ಕಿದೆ. ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ರಾಮಚಂದ್ರ ಆಯ್ಕೆಯಾಗಿದ್ದಾರೆ. ಅಧಿಕಾರ ಲಾಲಸೆಯಿಂದ ಬಿಜೆಪಿ ಸೇರಿದ್ದ ಎಸ್‌ಪಿ ಸ್ವಾಮಿಗೆ ನಿರಾಸೆಯಾಗಿದೆ.

ಸರ್ಕಾರವಿರೋ ಕಾರಣಕ್ಕೆ ಬಿಜೆಪಿ ಪಕ್ಷಕ್ಕೆ ಅಧಿಕಾರಿ ವೋಟ್ ಮಾಡ್ತಾರೆ ಅಂದುಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಬ್ಬರು ಜೆಡಿಎಸ್ ಪರ ಮಾಡಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಧಿಕಾರಿಗಳಿಂದ ಜೆಡಿಎಸ್ ಪರವಾಗಿ ವೋಟ್ ಮಾಡಿದ್ದಾರೆ. ಅಧಿಕಾರಿಗಳನ್ನು ನಂಬಿದ್ದ ಕಮಲಪಡೆ ಕೈ ಸುಟ್ಟುಕೊಂಡಿದೆ. ಅಧಿಕಾರ ಹಿಡಿಯಲು ನಾನಾ ಕಸರತ್ತು ಮಾಡಿದ್ದ ಅಶ್ವತ್ಥ ನಾರಾಯಣ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ ಎಂದು ಕೊರಗುವಂತಾಗಿದೆ. 9 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಜೆಡಿಎಸ್‌ನ ರಘುನಂದನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ಆಪರೇಷನ್ ಮನ್ಮುಲ್‌ಗೆ ಸಡ್ಡು ಹೊಡೆದು ಸೋಲಿಸಿರೋದು ಅನರ್ಹ ಶಾಸಕರಿಗೂ ಇದೇ ಫಲಿತಾಂಶ ಅನ್ನೋ ಸಂದೇಶ ಕೊಡಲಾಗಿದೆ.

Leave a Reply