ನೆರೆ ಪರಿಹಾರ ಕೇಳಿದ ಸೂಲಿಬೆಲೆಗೆ ದೇಶದ್ರೋಹಿ ಪಟ್ಟ; ಭುಗಿಲೆದ್ದ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

ಉತ್ತರ ಭಾರತದಲ್ಲಿ ಭಾರೀ ಪ್ರವಾಹ ಬಂದಿದೆ. ಬಿಹಾರ ಸಿಎಂ ಜೊತೆ ಮಾತನಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಉತ್ತರ ಭಾಗದಲ್ಲಿ ಭಾರೀ ಪ್ರವಾಹ ಬಂದು ಮನೆ ಮಠ ಎಲ್ಲವೂ ನದಿಯಲ್ಲಿ ಕೊಚ್ಚಿಹೋಯ್ತು. ಸರಿಸುಮಾರು 36 ಸಾವಿರ ಕೋಟಿ (ಸರ್ಕಾರಿ ಅಂದಾಜು) ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಯ್ತು. ಬರೋಬ್ಬರಿ 55 ದಿನಗಳು ಕಳೆದರು ಕೇಂದ್ರ ಸರ್ಕಾರದಿಂದ ಬಿಡಿಗಾಸು ಪರಿಹಾರ ಬಂದಿಲ್ಲ. ಇದನ್ನು ಬಿಜೆಪಿ ಬೆಂಬಲಿಗನೇ ಆಗಿರುವ ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಕ್ಕೆ ಕೇಂದ್ರ ಸಚಿವ ಸದಾನಂದಗೌಡ ದೇಶದ್ರೋಹಿ ಪಟ್ಟ ಕೊಟ್ಟಿದ್ದಾರೆ. ಜೊತೆಗೆ ಟ್ವಿಟರ್ ಖಾತೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಅವರನ್ನು ಬ್ಲಾಕ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆ ಸೂಲಿಬೆಲೆ ಅಭಿಮಾನಿ ಬಳಗ ಸದಾನಂದ ಗೌಡರನ್ನು ತರಾಟೆಗೆ ತೆಗೆದುಕೊಂಡಿದೆ.

ಮೊದಲೇ ಮಾತಿನ ಮೋಡಿಯಿಂದ ಯುವಕರ ಮನಸ್ಸು ಗೆದ್ದಿರುವ ಚಕ್ರವರ್ತಿ ಸೂಲಿಬೆಲೆ ತನ್ನದೇ ಆದ ಯುವಕರ ಬಳಗ ಹೊಂದಿದ್ದು, ಚಕ್ರವರ್ತಿ ಸೂಲಿಬೆಲೆಯನ್ನು ದೇಶದ್ರೋಹಿ ಎಂದಿದ್ದು‌ ಯುವಕರನ್ನು ಕೆರಳಿಸಿದೆ.

ರಾಜ್ಯದಲ್ಲಿ ಪ್ರವಾಹ ಬಂದ ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರ ಪ್ರಶ್ನಿಸಿದ್ದಕ್ಕೆ ಸದಾನಂಗೌಡರು ಉತ್ತರ ಕೊಡಲೇ ಬೇಕು. ಯಾಕಂದ್ರೆ ಅವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಅದನ್ನು ಬಿಟ್ಟು ಹಲ್ಲು ಕಿಸ್‌ಕೊಂಡು ಮಾತನಾಡಿದರೆ ಏನು ಪ್ರಯೋಜನ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ. ಅದೂ ಅಲ್ಲದೆ ಗುರುವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಗೃಹ ಸಚಿವರ ಜೊತೆ ನಾನು ಹಾಗೂ ಪ್ರಹ್ಲಾದ್ ಜೋಷಿ ಚರ್ಚೆ ನಡೆಸುತ್ತೇವೆ ಎಂದಿರುವುದಕ್ಕೂ ಟ್ವೀಟಿಗರು ರೊಚ್ಚಿಗೆದ್ದಿದ್ದಾರೆ. ಇಷ್ಟು ದಿನ ಏನು ಮಾಡ್ತಿದ್ರಿ. ಎಚ್ಚರವಾಯಿತೇ ಎಂದೆಲ್ಲಾ ಪ್ರಶ್ನಿಸಿರುವ ಜನ, ನೀವೆಲ್ಲಾ ನಾಲಯಕ್ಕುಗಳು, ಮೋದಿ ಎಂಬ ಕುದುರೆ ಮುಖ ನೋಡಿ ಕತ್ತೆಗಳನ್ನು ಗೆಲ್ಲಿಸಿಬಿಟ್ವಿ ಎಂದು ಪಶ್ಚಾತ್ತಾಪ ಕೂಡ ಪಡ್ತಿದ್ದಾರೆ.

ಇದ್ದಾಗ ಅನ್ನ ನೀರು ಕೊಡದೆ ಸತ್ತಾಗ ಬಂದು ಮಣ್ಣು ಕೊಡುವ ಕೆಲಸ ಮಾಡಬೇಡಿ ಎಂದ್ರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಗುರುವಾರ ಕೇಂದ್ರದಿಂದ ಪರಿಹಾರ ಬಿಡುಗಡೆ ಆಗಲಿದೆ ಅನ್ನೋ ವಿಶ್ವಾಸದಲ್ಲಿ ಕೇಂದ್ರ ಸಚಿವರು ಹೇಳಿದ್ದಾರೆ. ಇವರ ಮಾತಿನ ಬೆನ್ನಲ್ಲೇ ನಾಲ್ಕಾರು ರಾಜ್ಯದ ಮಂತ್ರಿಗಳೂ ಕೂಡ ಇನ್ನು ಒಂದೆರಡು ದಿನದಲ್ಲಿ ಪರಿಹಾರ ಬಂದುಬಿಡುತ್ತೆ ಎಂದು ಹೇಳಿದ್ದಾರೆ. ಒಂದು ವೇಳೆ ಪರಿಹಾರ ಬರದೇ ಹೋದರೆ ರಾಜ್ಯ ಸರ್ಕಾರವನ್ನೂ ಜನರೇ ಹಾದಿ ಬೀದಿಯಲ್ಲಿ ನಿಂತು ಉಗಿಯುವ ಕಾಲ ದೂರವಿಲ್ಲ. ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆಗಿರುವ, ಸಂಸದರಾಗಿ ಆಯ್ಕೆಯಾಗಿರುವ ನಾಯಕರು ತಮ್ಮ ಊರುಗಳಿಗೆ ಬರದಿದ್ದರೆ ಒಳಿತು ಎನಿಸುತ್ತದೆ.

Leave a Reply