ಕೆ.ಆರ್ ಪೇಟೆ ಉಪಸಮರ ಅಖಾಡಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್:

ನಾರಾಯಣಗೌಡ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್ ಪೇಟೆ ವಿಧಾನಸಭೆ ಉಪ ಚುನಾವಣೆ ಅಖಾಡಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.

ಮಂಡ್ಯ ಜಿಲ್ಲೆಯ ರಾಜಕೀಯ ಅಖಾಡ ಸಾಕಷ್ಟು ರಂಗಾಗುತ್ತೆ. ಈಗಾಗಲೇ ಕೆ.ಆರ್​ ಪೇಟೆ ಉಪಚುನಾವಣೆ ಘೋಷಣೆಯಾಗಿದ್ದು, ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿವೆ. ಜೆಡಿಎಸ್​ ಈಗ ಕಳೆದುಕೊಂಡಿರುವ ಸ್ಥಾನವನ್ನು ಮರಳಿ ಪಡೆ ಸಜ್ಜಾಗುತ್ತಿದೆ. ಇನ್ನು ಕಾಂಗ್ರೆಸ್​ ತನ್ನ ಹಳೇ ಅಖಾಡವನ್ನು ಮತ್ತೆ ಹುರಿಗೊಳಿಸಲು ವೇದಿಕೆ ಸಜ್ಜು ಮಾಡ್ತಿದೆ. 8ಇದೇ ಕಾರಣಕ್ಕಾಗಿ ಮಾಜಿ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಇನ್ನು ಆಪರೇಷನ್​ ಕಮಲ ಮಾಡಿದ್ದೇ ಬಿಜೆಪಿಗೆ ಸಹಾಯ ಆಗಲಿ ಅನ್ನೋ ಕಾರಣಕ್ಕೆ. ಇದೀಗ ಮಂಡ್ಯದಲ್ಲಿ ಅಸ್ತಿತ್ವದಲ್ಲಿಲ್ಲ ಇಲ್ಲದಿದ್ದರೂ ತವರೂರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಕಮಲ ಸ್ಥಾಪನೆಗೆ ಬಿ.ಎಸ್​ ಯಡಿಯೂರಪ್ಪ ಯೋಜನೆ ರೂಪಿಸಿದ್ದಾರೆ.

ನಾರಾಯಣಗೌಡ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್ ಪೇಟೆ ಕ್ಷೇತ್ರಕ್ಕೆ ಇದೀಗ ಮತ್ತೆ ನಾರಾಯಣಗೌಡ ಅಖಾಡಕ್ಕೆ ಎಂಟ್ರಿ ಕೊಟ್ಟರೂ ಸೋಲುವುದು ಬಹುತೇಕ ಖಚಿತ ಅನ್ನೋ ಮಾಹಿತಿ ಯಡಿಯೂರಪ್ಪ ಮನೆಗೆ ತಲುಪಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎರಡನೇ ಪುತ್ರ ವಿಜಯೇಂದ್ರ ಕೆ.ಆರ್​ ಪೇಟೆ ಅಂಗಳಕ್ಕೆ ಎಂಟ್ರಿಕೊಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ವೈ ವಿಜಯೇಂದ್ರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ರೆ ಬೆಂಬಲ ಯಾವ ಮಟ್ಟಕ್ಕೆ ಸಿಗುತ್ತದೆ ಅನ್ನೋದನ್ನು ಸ್ವತಃ ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಆದ್ರೆ ನಾನು K.R.ಪೇಟೆ ಬೈ ಎಲೆಕ್ಷನ್ ಅಭ್ಯರ್ಥಿಯಲ್ಲ ಎಂದಿರುವ ವಿಜಯೇಂದ್ರ, ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅವರನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ. ಬೆಂಬಲಿಗರು ಸ್ಪರ್ಧಿಸಲು ಒತ್ತಡ ಹಾಕಿರಬಹುದು. ಆದ್ರೆ ಅದು ನನ್ನ ಗಮನಕ್ಕೆ ಬಂದಿಲ್ಲ, ನಾರಾಯಣಗೌಡ ಸ್ಪರ್ಧೆ ಬಗ್ಗೆಯೂ ಮಾಹಿತಿ ಇಲ್ಲ ಎಂದಿರೋದು ಅನುಮಾನಕ್ಕೆ ಕಾರಣವಾಗಿದೆ.

ಮಂಡ್ಯ ಭಾಗದಲ್ಲಿ ಪಕ್ಷ ಸಂಘಟನೆ ಕೊರತೆ ಇದೆ. ಹಾಗಾಗಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ಕೊಡುತ್ತೇವೆ ಎಂದಿರುವ ವಿಜಯೇಂದ್ರ,
ಕೆ.ಆರ್.ಪೇಟೆಯಲ್ಲಿ ಸೋಲು ಗೆಲುವಿನ ವಾತಾವರಣ ಹೇಗಿದೆ ಎಂದು ಪ್ರಮುಖ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಿ.ವೈ.ವಿಜಯೇಂದ್ರ ಕೆ.ಆರ್ ಪೇಟೆಯಿಂದ ಸ್ಪರ್ಧೆ ಮಾಡ್ತೀನಿ ಎಂದರೆ ನಾನು ಸ್ವಾಗತಿಸುತ್ತೆನೆ ಎಂದಿರುವ ಅನರ್ಹ ಶಾಸಕ ನಾರಾಯಣ ಗೌಡ, ಕ್ಷೇತ್ರ ಬಿಟ್ಟುಕೊಡುವ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಕ್ಷೇತ್ರದಿಂದ ಸಂಸದ ಆಗಿರುವ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ, ಯಡಿಯೂರಪ್ಪ ಅವರ ಶಿಕಾರಿಪುರ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದಾರೆ. ಆದ್ರೆ ಎರಡನೇ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಇಲ್ಲೀವರೆಗೂ ಸಾಧ್ಯವಾಗಿಲ. ಇನ್ನು ಯಡಿಯೂರಪ್ಪ ಅವರ ರಾಜಕಾರಣ ಅಂತಿಮ ಘಟ್ಟ ತಲುಪಿದ್ದು, ಈ ಉಪಚುನಾವಣೆಯಲ್ಲಿ ಒಮ್ಮೆ ಶಾಸಕನನ್ನಾಗಿ ಮಾಡಿದರೆ ಸೂಕ್ತ ಎನ್ನುವ ಲೆಕ್ಕಾಚಾರ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅನರ್ಹತೆ ಕಾನೂನು ಹೋರಾಟ ಏನಾದರೂ ಆಗಲಿ, ಪರಿಷತ್‌ಗೆ ಆಯ್ಲೆ ಮಾಡಿ ಸಚಿವ ಸ್ಥಾನ ನೀಡ್ತೇನೆ ಎನ್ನುವ ಭರವಸೆಯನ್ನು ನಾರಾಯಣ ಗೌಡಗೆ ಸಿಎಂ ನೀಡಿದ್ದಾರೆ ಅನ್ನೋ ಮಾಹಿತಿಯೂ ಹರಿದಾಡ್ತಿದೆ. ಈಗಾಗಲೇ ಚುನಾವಣಾ ಅಖಾಡದ ಪಿಚ್ ನೋಡಿರುವ ವಿಜಯೇಂದ್ರ, ತಮ್ಮ ಅಜ್ಜನ ಊರಿನ ಅಖಾಡ ಹೇಗಿದೆ ಅನ್ನೋ ರಿಪೋರ್ಟ‌ನ್ನು ಯಡಿಯೂರಪ್ಪಗೆ ಕೊಟ್ಟ ಬಳಿಕ ಸ್ಪರ್ಧಿಸುವ ಅಂತಿಮ ನಿರ್ಧಾರ ಹೊರಬೀಳಲಿದೆ ಎನ್ನಲಾಗ್ತಿದೆ.

Leave a Reply