ಪರಿಹಾರ ಕೇಳಿದ ಯತ್ನಾಳ್ ಮೇಲೆ ಹೈಕಮಾಂಡ್‌ಗೆ ದೂರು ಕೊಟ್ಟಿದ್ದು ಯಾರು..?

ಡಿಜಿಟಲ್ ಕನ್ನಡ ಟೀಮ್:

ರಾಜಕಾರಣದ ಸೇಡು ತೀರಿಸಿಕೊಳ್ಳಲು ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದ ಕೇಂದ್ರ ಸರ್ಕಾರ ವ್ಯಾಪಕ ಟೀಕೆಗಳ ನಂತರ 1200 ಕೋಟಿ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ. ಆದ್ರೆ, ಜನರ ಸಮಸ್ಯೆಗೆ ಮಿಡಿದು ತಮ್ಮ ಪಕ್ಷದವರು ಎಂಬುದನ್ನು ಲೆಕ್ಕಿಸದೇ ಪರಿಹಾರಕ್ಕೆ ಆಗ್ರಹಿಸಿದವರನ್ನು ಈಗ ಬಿಜೆಪಿ ಗುರಿಯಾಗಿಸುತ್ತಿರುವುದು ಈಗ ಹೊಸ ಚರ್ಚೆಗೆ ಕಾರಣವಾಗಿದೆ.

ಪರಿಹಾರ ಕೇಳುವ ತಾಕತ್ತು ನಮ್ಮ 25 ಸಂಸದರಿಗೆ ಇಲ್ಲ ಎಂದಿದ್ದ ಚಕ್ರವರ್ತಿ ಸೂಲಿಬೆಲೆ ಟೀಕೆಗೆ ಕೇಂದ್ರ ಸಚಿವ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ. ಇಲ್ಲಿ ಪರಿಹಾರ ಕೇಳಿದ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಗೆ ದೂರು ನೀಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಅದಕ್ಕೆ ಉತ್ತರ ಇಲ್ಲಿದೆ…

ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಕೇಂದ್ರ ಗೃಹ ಸಚಿವರನ್ನು ಕೇಂದ್ರ ಸಚಿವರಾದ ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿ ಅಮಿತ್ ಶಾ ಭೇಟಿ ಮಾಡಿದ್ದಾರೆ. ಆದ್ರೆ ರಾಜ್ಯದಿಂದ ಆಯ್ಕೆಯಾದ ಈ ಸಂಸದರು ಅಮಿತ್ ಶಾ ಅವರನ್ನು ಕೇಂದ್ರ ಗೃಹ ಸಚಿವರನ್ನಾಗಿ ಭೇಟಿ ಮಾಡಿಲ್ಲ. ಬದಲಾಗಿ ಬಿಜೆಪಿ ಅಧ್ಯಕ್ಷರನ್ನಾಗಿ ಭೇಟಿ ಮಾಡಿದ್ದಾರೆ. ಪರಿಣಾಮ ತಮ್ಮ ವಿರುದ್ಧ ಟೀಕೆ ಮಾಡಿ ಪರಿಹಾರ ಕೇಳಿದ ಯತ್ನಾಳ್ ವಿರುದ್ಧ ದೂರು ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಉತ್ತರ ಕರ್ನಾಟಕದ ಪ್ರವಾಹ ನಿಭಾಯಿಸಲು ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ನಿಲ್ಲುತ್ತಿಲ್ಲ ಅನ್ನೋ ಕಾರಣಕ್ಕೆ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ್ ಬಿಜೆಪಿ ವಿರುದ್ಧವೇ ಟೀಕಾಪ್ರಹಾರ ನಡೆಸಿದ್ರು. ಪರಿಹಾರ ಕೇಳಿದ್ದ ಚಕ್ರವರ್ತಿ ಸೂಲಿಬೆಲೆ ಮಾಡಿದ ತಪ್ಪಾದ್ರು ಏನು..? ಎಂದು ಯತ್ನಾಳ್ ಪ್ರಶ್ನೆ ಕೂಡ ಮಾಡಿದ್ರು. ಅದನ್ನು ಯಥಾವತ್ತಾಗಿ ಕೇಂದ್ರ ನಾಯಕರಿಗೆ ಸದಾನಂದಗೌಡ ಹಾಗು ಪ್ರಹ್ಲಾದ್ ಜೋಷಿ ದೂರು ಕೊಟ್ಟಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಭೇಟಿ ಮಾಡಿದ್ದ ಉಭಯ ನಾಯಕರು, ವಿರೋಧ ಪಕ್ಷಗಳಿಗಿಂತಲೂ ಬಿಜೆಪಿ ನಾಯಕರೇ ವಾಗ್ದಾಳಿ ಮಾಡುತ್ತಿದ್ದಾರೆ ಅನ್ನೋದನ್ನು ವಿಡಿಯೋ ಸಮೇತ ನೀಡಿದ್ದಾರೆ ಎನ್ನಲಾಗಿದೆ. ಕೂಡಲೇ ಕೋಪಗೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಶಿಸ್ತುಕ್ರಮ ಜರುಗಿಸುವ ಬಗ್ಗೆ ಶೋಕಾಸ್ ನೋಟಿಸ್ ನೀಡಲು ಕೇಂದ್ರ ಶಿಸ್ತು ಸಮಿತಿಗೆ ತಿಳಿಸಿದ್ದಾರೆ. ಇದೀಗ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷರು ಶೋಕಾಸ್ ನೋಟಿಸ್ ನೀಡಿದ್ದಾರೆ.

ನೀವು ಪಕ್ಷದ ವಿರುದ್ಧವೇ ಮಾತನಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ನಿಮ್ಮ ವಿರುದ್ಧ ನಾವು ಯಾಕೆ ಸೂಕ್ತ ಕ್ರಮ ಕೈಗೊಳ್ಳಬಾರದು ಎಂದು ಕೇಳಿ ಶೋಕಾಸ್ ನೋಟಿಸ್‌ನಲ್ಲಿ ಕೇಳಲಾಗಿದೆ. ಹತ್ತು ದಿನಗಳನ್ನು ಮೀರದಂತೆ  ಶೋಕಾಸ್ ನೋಟೀಸ್‌ಗೆ ಉತ್ತರ ಕೊಡಬೇಕು ಎಂದು ಸೂಚನೆ ನೀಡಲಾಗಿದೆ.  ಆದ್ರೆ ಶೋಕಾಸ್ ನೋಟಿಸ್‌ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳ್ ಹೇಳಿದಿಷ್ಟು…

ಶೋಕಾಸ್ ನೋಟಿಸ್ ಸಿಕ್ಕ ಮೇಲೆ ಚರ್ಚಿಸಿ ಸೂಕ್ತ ಉತ್ತರ ಕೊಡುತ್ತೇನೆ. ಪ್ರವಾಹದಿಂದ ಜನರ ಜೀವನ ಬರ್ಬಾದ್ ಆಗಿದೆ. ಜನರಿಗೆ ಸಿಗಬೇಕಾದ ಪರಿಹಾರ ಸಿಕ್ಕಿಲ್ಲ‌. ಮಾಧ್ಯಮಗಳಲ್ಲಿ ಜನರ ಕಣ್ಣೀರು ನೋಡಿ ನಮಗೂ ಕಣ್ಣೀರು ಬಂದಿವೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಜನರ ಕಣ್ಣೀರು ಒರೆಸದಿದ್ದರೆ ನಾವು ಶಾಸಕರಾಗಿ, ಸಚಿವರಾಗಿ ಏನು ಪ್ರಯೋಜನ..? ಎಂದು ಮತ್ತೆ ಪ್ರಶ್ನಿಸಿರುವ ಬಸನಗೌಡ ರಾ ಪಾಟೀಲ್ ಯತ್ನಾಳ್, ಕಳೆದ 40 ವರ್ಷಗಳಿಂದ ಶಾಸಕ, ಲೋಕಸಭೆ ಸದಸ್ಯ, ಕೇಂದ್ರ ಸಚಿವ, ವಿಧಾನ ಪರಿಷತ್ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ನನಗೆ ಏನು ಮಾತನಾಡಬೇಕು ಎಂಬುದರ ಅರಿವಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸರಕಾರದ ವಿರುದ್ಧ ಮಾತನಾಡಿಲ್ಲ, ಸರಕಾರ ಕೆಡವಿಲ್ಲ. ಕನ್ನಡಿಗರಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ಯಾರಿಗೂ ನಾನು ಹೆದರುವುದಿಲ್ಲ. ಜನಪರವಾಗಿ ಧ್ವನಿ ಎತ್ತುತ್ತಲೇ ಇರುತ್ತೇನೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ಯಾರಿಂದಲೂ ಬುದ್ಧಿವಾದ ಹೇಳಿಸಿಕೊಳ್ಳುವ ಅನಿವಾರ್ಯತೆ ನನಗಿಲ್ಲ. ಕನ್ನಡ ನಾಡಿನ ಜನರ ಪರವಾಗಿ ಮೋದಿಯವರಿಗೆ ‌ವಿಷಯವನ್ನು ಗಮನಕ್ಕೆ ತಂದಿದ್ದೇನೆ. ಮುಂದೊಂದು ದಿನ ಪ್ರಧಾನಿ ನನ್ನ ನಿಷ್ಠೆಯ ಬಗ್ಹೆ ಶಹಬ್ಬಾಷ್ ಎನ್ನುವ ಕಾಲ ಬಂದೆ ಬರುತ್ತದೆ. ಈ ಹಿಂದೆ ತಾವು ವಿಧಾನ ಪರಿಷತ್ ಪಕ್ಷೇತರ ಸದಸ್ಯನಾಗಿದ್ದಾಗ ಸಭಾಪತಿ ಶಂಕರಮೂರ್ತಿ ವಿರುದ್ಧ ಮತ ಚಲಾಯಿಸಲು ಅಂದಿನ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದ್ದರು. ಅದಕ್ಕಾಗಿ ವಿಧಾನಸಭೆ ಟಿಕೆಟ್ ಜೊತೆಗೆ 150 ಕೋಟಿ ರೂಪಾಯಿ ಹಣವನ್ನು ಅಭಿವೃದ್ಧಿಗೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ನಾನು ಒಪ್ಪದೆ ಬಿಜೆಪಿ ಬೆಂಬಲಿಸಿದೆ.

ಈ ಯತ್ನಾಳ್‌ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸುಳ್ಳು ಹೇಳಲಿಲ್ಲ, ಇದೇ ಕಾರಣಕ್ಕಾಗಿ ನಾನು ಸಿಎಂ ಆಗಲಿಲ್ಲ. ಮತದಾರರಿಗೆ ಮತಕ್ಕಾಗಿ ಕಾಲು ಬೀಳುವ ನಾವು ಪರಿಹಾರಕ್ಕಾಗಿ ಕೇಂದ್ರ ನಾಯಕರ ಕಾಲು ಮುಗಿಯುವುದರಲ್ಲಿ ತಪ್ಪೆನಿಲ್ಲ. ಸಾಮಾಜಿಕ ಜಾಲತಾಣದ ಬಗ್ಗೆ ಬಿಜೆಪಿಗೆ ಹೆಚ್ಚು ಒಲವಿದೆ. ಈಗ ಇದೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬಗ್ಗೆ ನಡೆದಿರುವ ಚರ್ಚೆಯ ಬಗ್ಗೆ ನಾಯಕರು ಗಮನಹರಿಸಲಿ ಎಂದು ಸಲಹೆ ನೀಡಿದ್ದಾರೆ. ಒಟ್ಟಾರೆ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಗೃಹ ಸಚಿವರನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಮಾಡುತ್ತೇವೆ ಎಂದಿದ್ದ ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ಮಾಡಿ ದೂರು ನೀಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧದ ದನಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಿದ್ದಾರೆ.

Leave a Reply