ಸಿದ್ದರಾಮಯ್ಯ ಕೈತಪ್ಪುತ್ತಾ ವಿಪಕ್ಷ ನಾಯಕನ ಸ್ಥಾನ..!?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಿಎಂ ಸಿದ್ದರಾಮಯ್ಯ ವಿರುಧ್ಧ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಹೆಚ್ಚಾಗಿರೋ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮೂಲ ಕಾಂಗ್ರೆಸ್ ನಾಯಕನೇ ಆಯ್ಕೆ ಆಗಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿದೆ. ಪರಿಣಾಮ ಈ ಬಾರಿ ವಿರೋಧ ಪಕ್ಷದ ನಾಯಕ ಸ್ಥಾನ ಸಿದ್ದರಾಮಯ್ಯ ಅವರ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ಬಾರಿ ಯಡಿಯೂರಪ್ಪ ಸರ್ಕಾರ ಅಸ್ತಿತ್ವದಲ್ಲಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಬಳ್ಳಾರಿ ತನಕ ಪಾದಯಾತ್ರೆ ಬಂದು ಬಳ್ಳಾರಿ ರಿಪಬ್ಲಿಕ್ ಅಂತ್ಯ ಮಾಡ್ತೇವೆ ಎಂದು ಸದನದಲ್ಲೇ ತೊಡೆ ತಟ್ಟಿದ್ರು. ಆ ಬಳಿಕ ಬೆಂಗಳೂರಿನಿಂದ ಬಳ್ಳಾರಿ ತನಕ ಪಾದಯಾತ್ರೆ ಮಾಡಿ ಸೈ ಎನಿಸಿಕೊಂಡ ನಂತರ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿ ಸಫಲವಾಗಿತ್ತು.

ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ರಿಂದ ಕಾಂಗ್ರೆಸ್ ಪರ ಅಲೆ ಸೃಷ್ಟಿಯಾಯ್ತು‌ ಅನ್ನೋದು ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಆಪ್ತರ ವಾದ. ಆದ್ರೆ ಸಿದ್ದರಾಮಯ್ಯ ವಿರೋಧಿ ಬಣದ ವಾದವೇ ಬೇರೆ.

ಸಿದ್ದರಾಮಯ್ಯ ಬಳ್ಳಾರಿಗೆ ನಡೆಸಿದ ಪಾದಯಾತ್ರೆ ನಡೆಸಿದ್ರಿಂದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿಲ್ಲ. ಬದಲಿಗೆ ಜೆಡಿಎಸ್ ಬಿಜೆಪಿಗೆ ವಿಶ್ವಾಸ ದ್ರೋಹ ಮಾಡಿದೆ ಎಂದು ಜನರ ಮುಂದೆ ಹೋಗಿದ್ದ ಯಡಿಯೂರಪ್ಪ ಪ್ರಚಂಡ ಬಹುಮತ ಪಡೆದಿದ್ರು. ಆ ಬಳಿಕ ಸರ್ಕಾರದಲ್ಲಿ ನಡೆದ ರಾಜಕೀಯ ಮೇಲಾಟಗಳು ಹಾಗೂ ಸಿಎಂ ಬದಲಾವಣೆಯಿಂದ ಕುಪಿತಗೊಂಡ ಬಿ.ಎಸ್ ಯಡಿಯೂರಪ್ಪ, ಬಿಜೆಪಿಯಿಂದ ಹೊರಬಂದು ಕೆಜೆಪಿ ಸ್ಥಾಪಿಸಿದ್ರು. ಸಾಕಷ್ಟು ಕೆಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸದೇ ಇದ್ದರೂ ಬಿಜೆಪಿ ಸ್ಥಾಪಿಸಿದ್ದ ಕೆಜೆಪಿ ಪಕ್ಷ ಶೇಕಡವಾರು 10 ರಷ್ಟು ಮತ ಗಳಿಸಿತ್ತು. ಇದೇ ಕಾರಣದಿಂದ ಬಿಜೆಪಿಯ 40 ಕ್ಕೂ ಹೆಚ್ಚು ಅಭ್ಯರ್ಥಿಗಳು ಸೋಲನ್ನಪ್ಪಿದ್ರು. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ರು.

ಇದೀಗ ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ಮೈತ್ರಿ ಸರ್ಕಾರ ಉರುಳಿಸಲು ಎಲ್ಲಾ ಸಹಕಾರ ನೀಡಿದ್ರು. ಇದೇ ಕಾರಣದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿ ಬಿತ್ತು. ಸಿದ್ದರಾಮಯ್ಯ ಕುಮ್ಮಕ್ಕಿನಿಂದಲೇ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಪಕ್ಷೇತರ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ರು. ತುಮಕೂರಿನಲ್ಲಿ ದೇವೇಗೌಡರ ಸೋಲಿಗೂ ಸಿದ್ದರಾಮಯ್ಯ ಅವರೇ ಹೊಣೆ ಎಂದು ಮೂಲ ಕಾಂಗ್ರೆಸ್ಸಿಗರು ದೂರು ಸಲ್ಲಿಸಿದ್ದಾರೆ. ಅದೇ ಕಾರಣದಿಂದಾಗಿ ಸಿದ್ದರಾಮಯ್ಯಗೆ ಹೈಕಮಾಂಡ್ ವಿರೋಧ ಪಕ್ಷದ ಸ್ಥಾನ ಕೊಡಲು ಹಿಂದೇಟು ಹಾಕುತ್ತಿದೆ.

ಒಬ್ಬರಿಗೆ ಒಂದೇ ಹುದ್ದೆ ಅನ್ನೋ ಸೂತ್ರ ಹಿಡಿದಿರುವ ಹೈಕಮಾಂಡ್, ಶಾಸಕಾಂಗ ಪಕ್ಷದ ನಾಯಕನಾಗಿರುವ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡದಿರಲು ತೀರ್ಮಾನಿಸಿದೆ.

ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗಲ್ಲ ಅನ್ನೋದು ಗೊತ್ತಾಗ್ತಿದ್ದ ಹಾಗೆ ಅಹಿಂದ ವರ್ಗ ಸಂಘಟನೆಗೆ ಮುಂದಾಗಿದ್ದಾರೆ. ಇವತ್ತು ಎಐಸಿಸಿ ವೀಕ್ಷಕರಾಗಿ ಮಧುಸೂದನ್ ಮಿಸ್ತ್ರಿ ಆಗಮಿಸಿದ್ದು ಸುಮಾರು 60 ಜನ ನಾಯಕರ ಜೊತೆ ಚರ್ಚಿಸಿ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಈಗಾಗಲೇ ಮೂಲ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ವಿರುದ್ಧ ಅಭಿಪ್ರಾಯ ಸಂಗ್ರಹ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ಸ್ಥಾನ ಸಿಗಬಾರದು ಅನ್ನೋ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ವಿರೋಧ ಪಕ್ಷದ ಸ್ಥಾನ ಸಿಗಲ್ಲ ಅನ್ನೋದು ಗೊತ್ತಾಗಿರುವ ಕಾರಣದಿಂದಲೇ ಸಿದ್ದರಾಮಯ್ಯ ಮಧುಸೂದನ್ ಮಿಸ್ತ್ರಿ ಭೇಟಿ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಬಳ್ಳಾರಿಯ ಪಿ.ಟಿ ಪರಮೇಶ್ವರ್ ನಾಯ್ಕ್ ಅವರು ಅಭಿಪ್ರಾಯ ತಿಳಿಸಲು ಬೆಂಗಳೂರಿಗೆ ಆಗಮಿಸಿದ್ರು. ಆದ್ರೆ ಹೈಕಮಾಂಡ್ ಕೊಟ್ಟಿರುವ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದಿದ್ದಕ್ಕೆ ಕೋಪಗೊಂಡ ಪರಮೇಶ್ವರ್ ನಾಯ್ಕ್ ನೂರಾರು ಕಿಲೋಮೀಟರ್ ದೂರದಿಂದ ಕರೆಸಿದ್ದು ಯಾಕೆ ಎಂದು ಕೋಪಮಾಡಿಕೊಂಡು ವಾಪಸ್ಸಾಗಿದ್ದಾರೆ. ಒಟ್ಟಾರೆ ಈಗ ಮೂಲ ವರ್ಸಸ್ ವಲಸೆ ಕಾಂಗ್ರೆಸ್ ನಾಯಕರ ನಡುವೆ ವಿರೋಧ ಪಕ್ಷದ ನಾಯಕ ಯಾರು ಅನ್ನೋದೇ ಸಸ್ಪೆನ್ಸ್.

Leave a Reply